ಮಂಗಳವಾರ, ಫೆಬ್ರವರಿ 25, 2020
19 °C

ದೇವನಹಳ್ಳಿ: ಮತ ಎಣಿಕೆಗೆ ಭಾರಿ ಭದ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಕೇಂದ್ರದ ಚುನಾವಣಾ ಆಯೋಗದ ನಿರ್ದೇಶನದಂತೆ ಈ ಹಿಂದಿನ ಮತ ಎಣಿಕೆಗಿಂತ ಈ ಬಾರಿ ಭಾರಿ ಭದ್ರತೆಯೊಂದಿಗೆ ಮತ ಎಣಿಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌ ಹೇಳಿದರು.

ಗ್ರಾಮಾಂತರ ಜಿಲ್ಲಾ ಪೊಲೀಸ್‌ ಸಿಬ್ಬಂದಿ ಮತ್ತು ಬೆಂಗಳೂರು ನಗರ ಪೊಲೀಸ್‌ ಸಿಬ್ಬಂದಿ ಸಹಯೋಗದಲ್ಲಿ ಭದ್ರತೆ ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲ ಶ್ರೇಣಿಯ ಒಟ್ಟು 70 ಸಿಬ್ಬಂದಿ, ನಗರದ 40 ಕ್ಕೂ ಹೆಚ್ಚು ಪೊಲೀಸರು, ಎರಡು ಕೆ.ಎಸ್‌.ಆರ್‌, ಜಿಲ್ಲಾ ಮೀಸಲು ಪೊಲೀಸರ ಮೂರು ತುಕಡಿ ಮತ್ತು ಗೃಹ ರಕ್ಷಕ ದಳ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿದೆ. ಪಕ್ಷದ ಕಾರ್ಯಕರ್ತರು ಸಹಕರಿಸಬೇಕು ಎಂದು ಹೇಳಿದರು.

ಅಧಿಕೃತ ಪಾಸ್ ಇರುವವರಿಗೆ ಅವಕಾಶ: ಹೊಸಕೋಟೆ ವಿಧಾನಸಭೆ ಉಪಚುನಾವಣೆ ಮತಎಣಿಕೆ ಡಿ. 9 ರಂದು ದೇವನಹಳ್ಳಿ ನಗರದ ಅಕಾಶ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆಯಲಿದೆ. ಅಧಿಕೃತ ಪಾಸ್ ಹೊಂದಿರುವವರಿಗೆ ಮಾತ್ರ ಅವಕಾಶ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಹೇಳಿದರು.

ಶಾಲೆಯ ಮತ ಎಣಿಕೆ ಕೇಂದ್ರದ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮತದಾನ ಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿ ದಾಸ್ತಾನು ಮಾಡಿದ ನಂತರ ಹಗಲು ರಾತ್ರಿ ಪಾಳಿಯಲ್ಲಿ ಎರಡು ಕೆ.ಎಸ್.ಆರ್.ಪಿ ತುಕಡಿ, ಗಡಿ ಭದ್ರತಾ ಪಡೆಯ ಮೂರು ತುಕಡಿ, ಮೂವರು ಪೊಲೀಸ್ ಇನ್‌ಸ್ಪೆಕ್ಟರ್ ಸೇರಿ ಒಟ್ಟು 80 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದರು.

14 ಟೇಬಲ್‌ನಲ್ಲಿ 21 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಿಗ್ಗೆ 6.30 ಕ್ಕೆ ಮತ ಎಣಿಕೆ ಅಧಿಕಾರಿಗಳು ಎಣಿಕೆ ಕೇಂದ್ರದಲ್ಲಿ ಹಾಜರಿರಬೇಕು. 7.30 ಕ್ಕೆ ಮತಯಂತ್ರ ಭದ್ರತಾ ಕೊಠಡಿ ತೆರೆಯಲಾಗುವುದು. 8ಕ್ಕೆ ಅಂಚೆ ಮತದಾನ ಎಣಿಕೆ ಆರಂಭವಾಗಲಿದೆ. ಮತ ಎಣಿಕೆ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ನೀಡಿ ಸಲಹೆ ಸೂಚನೆ ಕೊಡಲಾಗಿದೆ ಎಂದು ಹೇಳಿದರು.

ಮತ ಎಣಿಕೆಗೆ 52 ಅಧಿಕಾರಿಗಳು ಮತ್ತು ಮೀಸಲು 20 ಅಧಿಕಾರಿಗಳಿರಲಿದ್ದಾರೆ. ಕುಡಿಯುವ ನೀರು, ಶೌಚಾಲಯ, ಸಿಬ್ಬಂದಿಗೆ ಉಪಹಾರ ವ್ಯವಸ್ಥೆ ಇದೆ. ರಾಷ್ಟ್ರೀಯ ಪಕ್ಷ ಮತ್ತು ಇತರೆ ಪಕ್ಷೇತರ ಒಬ್ಬ ಅಭ್ಯರ್ಥಿ ಪರವಾಗಿ ಒಬ್ಬರಿಗೆ ಮಾತ್ರ ಪ್ರವೇಶ ಅವಕಾಶವಿದೆ. ಪಾಸ್ ಕಡ್ಡಾಯವಾಗಿ ಇರಬೇಕು. ಈ ಬಾರಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಚುನಾವಣೆಯಲ್ಲಿ ಕರ್ತವ್ಯ ನಿರತ ಎಲ್ಲ ಸಿಬ್ಬಂದಿಗೆ ಪಾಸ್ ನೀಡಿರುವುದು ಬಿಗಿ ಭದ್ರತೆಯನ್ನು ಸೂಚಿಸುತ್ತದೆ ಎಂದು ಹೇಳಿದರು.

ಮದ್ಯ ಮಾರಾಟ ನಿಷೇಧ: ಡಿ.8ರ ಭಾನುವಾರ ರಾತ್ರಿ 12 ರಿಂದ ಡಿ.9ರ ಸೋಮವಾರ ರಾತ್ರಿ 12 ರವರೆಗೆ ಹೊಸಕೋಟೆ ತಾಲ್ಲೂಕು ಮತ್ತು ದೇವನಹಳ್ಳಿ ನಗರದಲ್ಲಿ ಮದ್ಯ ಮಾರಾಟ ಮತ್ತು ಸಾಗಾಣಿಕೆಗೆ ಅವಕಾಶವಿಲ್ಲ. ವಿಜಯೋತ್ಸವ ಮತ್ತು ಮೆರವಣಿಗೆಗೆ ಅವಕಾಶವಿಲ್ಲ. ಸಾರ್ವಜನಿಕರು ವಿವಿಧ ಪಕ್ಷಗಳ ಬೆಂಬಲಿಗರು ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಸಹಕರಿಸಬೇಕು ಎಂದು ಹೇಳಿದರು.

ವಾಹನ ಪಾರ್ಕಿಂಗ್ ವ್ಯವಸ್ಥೆ: ಹೊಸಕೋಟೆಯಿಂದ ಬರುವ ವಾಹನಗಳು ಮಿನಿವಿಧಾನಸೌಧ ಮೂಲಕ ಪ್ರಸನ್ನಹಳ್ಳಿಹಳ್ಳಿ ಬಳಿ ರಸ್ತೆಗೆ ಬರಬೇಕು. ರಾಷ್ಟ್ರೀಯ ಹೆದ್ದಾರಿ 207ರ ವಿಜಯಪುರ ಕ್ರಾಸ್ ರಸ್ತೆ ಮೂಲಕ ಹಳೆ ಬಸ್ ನಿಲ್ದಾಣ ನಂತರ ಪ್ರಸನ್ನಹಳ್ಳಿ ರಸ್ತೆಗೆ ಬರಬೇಕು. ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಕಡೆಯಿಂದ ಮತಎಣಿಕೆ ಕೇಂದ್ರಕ್ಕೆ ಬರುವ ಸಾರ್ವಜನಿಕರು ಹೆದ್ದಾರಿ 7 ರ ರಸ್ತೆ ಕೆಂಪೇಗೌಡ ವೃತ್ತದಲ್ಲಿ ಎಡಕ್ಕೆ ತಿರುವು ಪಡೆದು ಪ್ರಸನ್ನಹಳ್ಳಿ ರಸ್ತೆಯಲ್ಲಿರುವ ಹೀರಾ ನಂದಾನಿ ಅಪಾರ್ಟ್ ಮೆಂಟ್ ರಸ್ತೆಬಳಿ ವಾಹನ ನಿಲುಗಡೆಗೆ ಮತ್ತು ಆಕಾಶ್ ಶಾಲೆಯಿಂದ 300 ಮೀ. ಅಂತರದಲ್ಲಿರುವ ಮತ್ತೊಂದು ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಬೇಕು ಎಂದು ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್‌ ಚಂದ್ರಶೇಖರ್ ತಿಳಿಸಿದ್ದಾರೆ.

ಭಾರಿ ವಾಹನಗಳಿಗೆ ಅವಕಾಶವಿಲ್ಲ. ಎಲ್ಲೆಂದರಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ. ಆಯಾ ಪ್ರಮುಖ ರಸ್ತೆಗಳಲ್ಲಿ 48 ಸಂಚಾರ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು