ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ | ಮುಂಗಾರು ಹಂಗಾಮು, 45 ಹೆಕ್ಟೇರ್ ಬಿತ್ತನೆ 

ಅಕ್ಷರ ಗಾತ್ರ

ದೇವನಹಳ್ಳಿ: ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನ ಮುಂಗಾರು ಹಂಗಾಮು ಚುರುಕು ಪಡೆದುಕೊಂಡಿದ್ದು ದೀರ್ಘಾವಧಿ ಬೆಳೆ ₹ 45 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ರಾಜ್ಯದಲ್ಲಿ ಕೊರೊನ ಸೋಂಕಿನ ಭೀತಿ ಆರಂಭಗೊಂಡ ನಂತರ ಸಕಾಲದಲ್ಲಿ ವಾಡಿಕೆ ಮಳೆ ಸುರಿದರೂ ಲಾಕ್‌ಡೌನ್‌ ಪರಿಣಾಮ ರೈತರಿಗೆ ಕೃಷಿ ಉಪಕರಣ ಮತ್ತು ಉಳುಮೆಗೆ ಟ್ರ್ಯಾಕ್ಟರ್‌ಗಳು ಸಕಾಲದಲ್ಲಿ ಲಭ್ಯವಾಗದ ಪರಿಣಾಮ ಆತಂಕದಲ್ಲಿದ ರೈತರು ಲಾಕ್‌ಡೌನ್‌ ಸಡಿಲಗೊಂಡಿರುವುದರಿಂದ ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿರುವುದು ಒಂದೆಡೆಯಾದರೆ ಕೆಲ ರೈತರು ಇನ್ನೂ ಕೊರೊನಾ ಭೀತಿಯಿಂದ ಹೊರಗೆ ಬಂದಿಲ್ಲ. ಧೈರ್ಯದಿಂದ ಕೆಲವು ರೈತರು ಎತ್ತುಗಳಲ್ಲಿ ಭೂಮಿ ಉಳುಮೆ ಮತ್ತು ತೊಗರಿ ಅಲಸಂದೆ ಬಿತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

‘ಮುಂಗಾರು ಪೂರಕವಾಗಿ ಮಾರ್ಚ್‌ನಿಂದ ಈವರೆಗೆ 132 ಮಿ.ಮೀ. ಮಳೆ ಸುರಿದಿದೆ. ವಾಡಿಕೆ ಮಳೆ 88 ಮೀ.ಮೀ.ಗಿಂತ ಹೆಚ್ಚು44 ಮಿ.ಮೀ ಸುರಿದಿದೆ. ಭರಣಿ ಮಳೆಸುರಿದರೆ ಧರಣಿ ತುಂಬಾ ಫಸಲು ಎಂಬ ಗ್ರಾಮೀಣ ಗಾದೆಯಂತೆ ರೈತರು ಹೊಲದಲ್ಲಿ ಕಸ ಕಡ್ಡಿ ಆಯ್ದು ಬೇರೆಡೆ ಹಾಕುವುದು. ಕಳೆದ ವರ್ಷ ಬಿದ್ದ ಮಳೆಗೆ ಹೊಲದ ಬದುಗಳು ಕೊಚ್ಚಿ ಹೋಗಿರುವುದನ್ನು ಮಣ್ಣು ಹಾಕಿ ಸರಿಪರಿಸುವ ಕಾಯಕದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅಲ್ಲಲ್ಲಿ ಹೊಲಗಳಲ್ಲಿಟ್ರ್ಯಾಕ್ಟರ್ ಸದ್ದು ಮಾಡುತ್ತಿವೆ. ಕಳೆದೆರಡು ತಿಂಗಳಿಂದ ಮನೆಯಲ್ಲಿಯೇ ಬಂಧಿಯಾಗಿದ್ದ ರೈತರು ಕಳೆದೆರಡು ಮೂರು ದಿನಗಳಿಂದ ಒಕ್ಕಲುತನಕ್ಕೆ ಮುಂದಾಗಿರುವುದು ಅಶಾದಾಯಕವಾಗಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಕೃಷಿ ಅಧಿಕಾರಿಗಳು.

‘ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕು ವ್ಯಾಪ್ತಿಯಲ್ಲಿ 40,272 ಹೆಕ್ಟೇರ್‌ನಲ್ಲಿ ರಾಗಿ, 10,700 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ, 1,450 ಹೆಕ್ಟೇರ್‌ನಲ್ಲಿ ತೊಗರಿ, 607 ಹೆಕ್ಟರ್‌ನಲ್ಲಿ ಅಲಸಂದೆ, ಉಳಿಕೆ ಹೆಕ್ಟೇರ್‌ಗಳಲ್ಲಿ ಎಣ್ಣೆಕಾಳು, ತೃಣಧಾನ್ಯಗಳು ಒಟ್ಟು 60,403 ಹೆಕ್ಟೇರ್‌ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದೆ. ಒಟ್ಟು ಬೆಳೆ ವಿಸ್ತೀರ್ಣದಲ್ಲಿ ಶೇ 78ರಷ್ಟು ರಾಗಿ ಪ್ರಮುಖ ಆಹಾರ ಧಾನ್ಯದ ಬೆಳೆಯಾಗಿ ರೈತರು ಬಿತ್ತನೆ ಮಾಡಲಿದ್ದಾರೆ. ಮುಂದಿನ ಜೂನ್ 15ರಿಂದ ಬಿತ್ತನೆಗೆ ವೇಗ ಹೆಚ್ಚಲಿದೆ. ಈ ಬಾರಿ ಮುಂಗಾರು ಬೆಳೆಗೆ ಸಕಾಲದಲ್ಲಿ ವರ್ಷಧಾರೆ ಸುರಿಯಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ತಿಳಿಸಿದೆ. ರೈತರು ಅತ್ಮವಿಶ್ವಾಸದಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು’ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

‘ರೈತರಿಗೆ ಮುಂಗಾರು ಕೃಷಿಗೆ ಅಗತ್ಯವಿರುವ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರಗಳಿಗೆ ಯಾವುದೇ ರೀತಿಯಿಂದ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ಬಿತ್ತನೆಗೆ ಮೊದಲ ಬೀಜೋಪಚಾರ ಅತಿಮುಖ್ಯ. ಬಯಲು ಸೀಮೆ ಪ್ರದೇಶದಲ್ಲಿ ರಾಗಿ ಪ್ರಮುಖ ಬೆಳೆಯಾಗುವುದರಿಂದ ಪ್ರತಿ ಎಕರೆಗೆ 5 ಕೆ.ಜಿ ಪ್ರಮಾಣೀಕೃತ ಬೀಜವನ್ನು ರೈತರಿಗೆ ನೀಡುತ್ತಿದ್ದು ರೈತರು ಹೊಲದಲ್ಲಿ ಚೆಲ್ಲುವ ಪ್ರಕ್ರಿಯೆ ಕೈಬಿಟ್ಟು ಕೂರಿಗೆ ಬಿತ್ತನೆಗೆ ಮುಂದಾಗಬೇಕು. ಬೀಜದ ಉಳಿತಾಯ ಜೊತೆಗೆ ಫಸಲು ಸಮೃದ್ಧವಾಗಿ ಬರಲಿದೆ’ ಎಂದು ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕಿ ವಿನುತಾ ಹೇಳಿದರು.

‘ಸರ್ಕಾರ ಕೊರೊನಾ ಸೋಂಕು ತಡೆಗಟ್ಟಲು ಹೆಚ್ಚಿನ ಒತ್ತು ನೀಡಿ ಕೃಷಿ ಇಲಾಖೆಯಲ್ಲಿನ ರೈತರ ಪ್ರೋತ್ಸಾಹದಾಯಕ ಯೋಜನೆಗಳಿಗೆ ಕಡಿವಾಣ ಹಾಕಿದೆ. ಕೂರಿಗೆ ಬಿತ್ತನೆ ಪದ್ಧತಿ ಬಹುತೇಕ ರೈತರು ಕೈಬಿಟ್ಟಿದ್ದಾರೆ. ಎಕರೆಗೆ ಕನಿಷ್ಠ 8 ಕೆ.ಜಿ. ಬಿತ್ತನೆ ರಾಗಿ ನೀಡಲೇಬೇಕು’ ಎಂದು ಒತ್ತಾಯಿಸುತ್ತಾರೆ ರೈತ ರಾಮಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT