ದೇವನಹಳ್ಳಿ: ವಾಲ್ಮಿಕಿ ಸಮುದಾಯ ಒಗ್ಗಟ್ಟಿನ ಹೋರಾಟದಿಂದ ಸವಲತ್ತು ಪಡೆಯಬೇಕು ಎಂದು ವಾಲ್ಮಿಕಿ ಸಮಾಜ ತಾಲ್ಲೂಕು ಘಟಕ ಅಧ್ಯಕ್ಷ ನಾಗೇಶ್ ಹೇಳಿದರು.
ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಮಹರ್ಷಿ ವಾಲ್ಮಿಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಮಾಯಣ ಗ್ರಂಥ ರಚಿಸಿ ವಿಶ್ವ ಮಾನ್ಯರಾಗಿರುವ ಮಹರ್ಷಿ ವಾಲ್ಮಿಕಿ ಒಬ್ಬ ದಾರ್ಶನಿಕ ದೂರದೃಷ್ಟಿ ಚಿಂತಕ ಸದಾ ನೆನಪಿನಲ್ಲಿ ಉಳಿಯಬೇಕಾದರೆ. ಅವರ ಪ್ರತಿಮೆ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಕಚೇರಿ ಆವರಣದಲ್ಲಿ ಪ್ರತಿಷ್ಠಾಪಿಸಬೇಕು ಎಂದು ಹೇಳಿದರು.
ಕೆಲವರು ಸಮುದಾಯದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ರಾಜ್ಯದಲ್ಲಿ 45 ಲಕ್ಷದಷ್ಟು ಜನ ವಾಲ್ಮಿಕಿ ಸಮುದಾಯದವರಿದ್ದಾರೆ. ಸರ್ಕಾರ ನೀಡುತ್ತಿರುವ ಸವಲತ್ತು ಶೇ 3ರಷ್ಟು ತೀರ ಕಡಿಮೆ ಇದೆ. ಶೇಕಡ 5ರಷ್ಟು ಮೀಸಲಾತಿ ಹೆಚ್ಚಿಸುವಂತೆ ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಮೂಲಕ ಪಾದಯಾತ್ರೆ ನಡೆಸಿ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದು ಹೇಳಿದರು.
‘ತಾಲ್ಲೂಕು ಕೇಂದ್ರದಲ್ಲಿ 2013ರಲ್ಲಿ ವಾಲ್ಮಿಕಿ ಸಮುದಾಯಕ್ಕೆ ಶಂಕುಸ್ಥಾಪನೆ ನಡೆಸಲಾಗಿದ್ದರು ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ, ತಾಲ್ಲೂಕಿನ ಹುರುಳಗುರ್ಕಿ ಬಳಿ ವಾಲ್ಮಿಕಿ ಗುರು ಪೀಠಕ್ಕಾಗಿ ಈಗಾಗಲೇ ಜಾಗ ಗುರುತಿಸಲಾಗಿದೆ. ಮುಂದುವರೆದು ಏನಾಗಿದೆ ಎಂಬುದು ಗೊತ್ತಿಲ್ಲ. ಕೇಂದ್ರ ಸರ್ಕಾರದ ಉದ್ದೇಶಿತ ಏಕಲವ್ಯ ವಸತಿ ಶಾಲೆ ದೇವನಹಳ್ಳಿ ತಾಲ್ಲೂಕಿನಲ್ಲೇ ಆಗಬೇಕು’ ಎಂದು ಒತ್ತಾಯಿಸಿದರು.
ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ವಾಲ್ಮಿಕಿ ಮಹರ್ಷಿ ಯನ್ನು ಕಳ್ಳ, ದರೋಡೆಕೋರ ಎಂದು ಬಿಂಬಿಸುವುದು ಸರಿಯಲ್ಲ. ಕಳ್ಳನಾಗಿದ್ದರೆ ರಾಮಾಯಣದಂತಹ ಶ್ರೇಷ್ಠ ಕಾವ್ಯ ರಚಿಸಲು ಸಾಧ್ಯವಿರಲಿಲ್ಲ. ಸಮಾಜದಲ್ಲಿ ಬಂದು ಬಳಗ, ರಕ್ತ ಸಂಬಂಧಗಳು ಹೇಗಿರಬೇಕು ಎಂಬುದನ್ನು ರಾಮಾಯಣದಿಂದ ಕಲಿತುಕೊಂಡಿದ್ದೇವೆ. ಸಮುದಾಯ ಶಿಕ್ಷಣ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ವಿಶ್ವದ ಒಳಿತಿಗಾಗಿ ಸರ್ವರು ಸಮಾನರು ಮನುಕುಲ ಒಂದೇ ಎಂಬ ಸಂದೇಶ ರಾಮಾಯಣ ನೀಡಿದೆ. ಸಾಮಾಜಿಕ ಸುಧಾರಣೆಯ ಕಾಳಜಿ ದೂರದೃಷ್ಟಿ ಚಿಂತನೆ ಅವರಲ್ಲಿ ಇತ್ತು ಎಂದು ಹೇಳಿದರು.
ವಾಲ್ಮಿಕಿ ಭವನ ನಿರ್ಮಾಣ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ಸಮುದಾಯದ ಮೂಲಸೌಲಭ್ಯಗಳಿಗೆ ಎಲ್ಲಾ ರೀತಿಯಿಂದ ಒತ್ತು ನೀಡಲಾಗುವುದು ಎಂದು ಹೇಳಿದರು. ಶಿಕ್ಷಕ ನಾಗರಾಜ್ ಮಾತನಾಡಿದರು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರಾಧಮ್ಮ ಮುನಿರಾಜು, ಎ.ಪಿ.ಎಂ.ಸಿ ಅಧ್ಯಕ್ಷ ಕೆ.ವಿ.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಮುನಿರಾಜು, ಕಾಂಗ್ರೆಸ್ ಎಸ್ಟಿ ಘಟಕ ತಾಲ್ಲೂಕು ಅಧ್ಯಕ್ಷ ರಬ್ಬನಹಳ್ಳಿ ಮುನಿರಾಜು, ತಹಶೀಲ್ದಾರ್ ಅಜಿತ್‌ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುರುಡಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಬಸಪ್ಪ, ವಾಲ್ಮಿಕಿ ಸಂಘ ತಾಲ್ಲೂಕು ಘಟಕ ಉಪಾಧ್ಯಕ್ಷ ರಾಜ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ರಾಮಚಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಮುನಿರಾಜು ಹಾಗೂ ಪುರಸಭೆ ಸದಸ್ಯರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.