ಬುಧವಾರ, ಸೆಪ್ಟೆಂಬರ್ 18, 2019
26 °C

ನಾಡ ಧ್ವಜ: ಸಚಿವರ ಹೇಳಿಕೆಗೆ ಖಂಡನೆ

Published:
Updated:
Prajavani

ದೊಡ್ಡಬಳ್ಳಾಪುರ: ‘ದೇಶದ ಪ್ರತಿ ರಾಜ್ಯಕ್ಕೂ ತಮ್ಮದೇ ಆದ ಪ್ರಾದೇಶಿಕ ಲಾಂಚನಗಳು ಇರುವಂತೆ ಕನ್ನಡಿಗರು ನಮ್ಮದೇ ನಾಡ ಧ್ವಜವನ್ನು ಹೊಂದುವುದು ಸಾಂಸ್ಕೃತಿಕ ದೃಷ್ಟಿಯಿಂದ ಅಗತ್ಯವಾಗಿದೆ’ ಎಂದು ತಾಲ್ಲೂಕು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ ಹೇಳಿದರು.

ರಾಜ್ಯಕ್ಕೆ ಪ್ರತ್ಯೇಕ ಧ್ವಜದ ಅವಶ್ಯಕತೆ ಇಲ್ಲ ಎಂದು ಕನ್ನಡ ಧ್ವಜದ ಬಗ್ಗೆ ನಿರ್ಲಕ್ಷ್ಯವಾಗಿ ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರ ಹೇಳಿಕೆ ಖಂಡಿಸಿ ಹಾಗೂ ಬಾಶೆಟ್ಟಿಹಳ್ಳಿ ರೇಲ್ವೆ ಮೇಲ್ಸೇತುವೆ ಕಳಪೆ ಕಾಮಗಾರಿ ದುರಸ್ತಿ ವಿಳಂಬವನ್ನು ಮಾಡುತ್ತಿರುವ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ತಮ್ಮದೇ ಆದ ಧ್ವಜವನ್ನು ಹೊಂದುವ ಅವಕಾಶ ಇದೆ. ನಮ್ಮ ನಾಡ ಧ್ವಜಕ್ಕೆ ಮಾನ್ಯತೆ ಕೊಡಿಸುವಲ್ಲಿ ಸರ್ಕಾರ ಶ್ರಮಿಸಬೇಕು. ಆದರೆ ಕನ್ನಡ ವಿರೋಧಿಗಳ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಬಾಶೆಟ್ಟಿಹಳ್ಳಿ ರೈಲ್ವೆ ಮಲ್ಸೇತುವೆ ಗೋಡೆ ಕುಸಿದು ಮೂರು ತಿಂಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ತ್ವರಿತವಾಗಿ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನಗರಸಭೆ ಹಿರಿಯ ಕನ್ನಡ ಪರ ಹೋರಾಟಗಾರ ತ.ನ.ಪ್ರಭುದೇವ್ ಮಾತನಾಡಿ, ಪ್ರತ್ಯೇಕ ಧ್ವಜದ ಅವಶ್ಯಕತೆ ಇಲ್ಲ ಎನ್ನುವ ಮೂಲಕ ಸಾಂಸ್ಕೃತಿಕ ಧಕ್ಕೆ ಉಂಟು ಮಾಡಲಾಗುತ್ತಿದೆ. ಕನ್ನಡ ನಾಡಿನ ಭಾವನಾತ್ಮಕ ವಿಷಯವಾದ ರಾಜ್ಯದ ಧ್ವಜಕ್ಕೆ ಧ್ವಜಕ್ಕೆ ಉಂಟುಮಾಡುವ ಹೇಳಿಕೆ ಸಲ್ಲದು ಎಂದರು.

ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಸಂಜಿವ್‍ನಾಯಕ್ ಮಾತನಾಡಿ, ಕರ್ನಾಟಕ ಏಕೀಕರಣ, ಕನ್ನಡ ಚಳುವಳಿಗಳ ಕುರಿತು ತಿಳಿವಳಿಕೆ ಇಲ್ಲದ ಸಚಿವರು ಹೇಳಿಕೆ ಖಂಡನೀಯ ಎಂದರು.

ಶಿವರಾಜ್ ಕುಮಾರ್ ಸೇನಾ ಸಮಿತಿ ಅಧ್ಯಕ್ಷ ರಮೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರಮೀಳಾ ಮಹದೇವ್, ಶಾಶ್ವತ ನೀರಾವರಿ ಹೋರಾಟ ಸಮಿತಿ ನಗರ ಅಧ್ಯಕ್ಷ ಡಿ.ಪಿ. ಆಂಜನೇಯ ಮಾತನಾಡಿದರು.

ಅಭಿಮಾನಿಗಳ ಸಂಘದ ಉಪಾಧ್ಯಕ್ಷ ವಿಠಲ್‍ರಾವ್, ಸಂಘನಾ ಕಾರ್ಯದರ್ಶಿ ಪರಮೇಶ್, ಖಜಾಂಚಿ ತಿಮ್ಮರಾಜು, ನಗರ ಉಪಾಧ್ಯಕ್ಷ ಕೆ.ಕೆ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಸುರೇಶ್‍ರಾವ್, ಹಿರಿಯ ಪತ್ರಕರ್ತ ರಾಜೇಂದ್ರಕುಮಾರ್, ಸಂಕ್ರಾಂತಿ ಕನ್ನಡ ಸಂಘದ ಅಧ್ಯಕ್ಷ ಮಂಜುನಾಥ್ ಇದ್ದರು.

Post Comments (+)