ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 | ಗ್ರಾಮೀಣರ ಕೈ ಹಿಡಿದ ನರೇಗಾ: ದಿನವೊಂದಕ್ಕೆ ₹ 298 ಕೂಲಿ ನಿಗದಿ

Last Updated 6 ಮೇ 2021, 3:48 IST
ಅಕ್ಷರ ಗಾತ್ರ

ದೇವನಹಳ್ಳಿ/ವಿಜಯಪುರ: ಕೋವಿಡ್ ಎರಡನೇ ಅಲೆಯ ಅಬ್ಬರದ ನಡುವೆಯೂ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ಉದ್ಯೋಗ ಖಾತ್ರಿ ಯೋಜನೆ ಅಡಿ ದುಡಿಯುವ ಕೈಗಳಿಗೆ ಕೆಲಸ ನೀಡಿವೆ.

ಲಾಕ್‌ಡೌನ್ ನಿಯಮಗಳನ್ನು ಜಾರಿಗೆ ತಂದಿರುವ ಕಾರಣ ಸಾಕಷ್ಟು ಮಂದಿ ವರ್ತಕರು, ಬೀದಿಬದಿ ವ್ಯಾಪಾರಿಗಳು, ಸೇರಿದಂತೆ ಬಹಳಷ್ಟು ಮಂದಿ ಉದ್ಯೋಗಗಳಿಲ್ಲದೆ, ಕೂಲಿ ಸಿಗದೆ ಪರದಾಡುತ್ತಿರುವ ಸಂಕಷ್ಟದ ಸಮಯದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ನರೇಗಾ ಯೋಜನೆ ಗ್ರಾಮೀಣ ಭಾಗದ ಬಡವರಿಗೆ ಆಸರೆಯಾಗಿರುವುದು ಸ್ವಲ್ಪಮಟ್ಟಿಗೆ ಸಮಾಧಾನ ತಂದಿದೆ.

ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿಗಳಿಗೆ ಅರ್ಜಿ ಸಲ್ಲಿಸಿ, ಉದ್ಯೋಗ ಮಾಡಿಕೊಳ್ಳಲು ಅವಕಾಶವಿದೆ. ಕಾರ್ಮಿಕರಿಗೆ ದಿನವೊಂದಕ್ಕೆ ₹ 298 ಕೂಲಿ ಸಿಗಲಿದೆ. ಸರ್ಕಾರದಿಂದ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಆಗುತ್ತಿದೆ. 2020-21 ನೇ ಸಾಲಿನಲ್ಲಿ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಒಟ್ಟು ₹ 8 ಕೋಟಿ 42 ಲಕ್ಷ ಕೂಲಿ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ಜಮೆ ಮಾಡಲಾಗಿದೆ.

ದನದ ಕೊಟ್ಟಿಗೆ ನಿರ್ಮಾಣ, ಕೊಳವೆಬಾವಿ ಮರುಪೂರಣ ಘಟಕ ಸ್ಥಾಪನೆ, ಹಂದಿ ಶೆಡ್ಡು, ಕೋಳಿ ಶೆಡ್ಡು, ರೈತರ ಭೂ ಅಭಿವೃದ್ಧಿ, ಕೃಷಿ ಹೊಂಡ, ಮೀನು ಹೊಂಡ, ವಸತಿ ಯೋಜನೆಯ ಫಲಾನುಭವಿಗಳು, ಎರೆಹುಳು ಗೊಬ್ಬರ ತೊಟ್ಟಿ, ಹೊಸ ಹಿಪ್ಪುನೇರಳೆ ತೋಟದ ಅಭಿವೃದ್ಧಿ, ಚರಂಡಿ ಕಾಮಗಾರಿಗಳು ಸೇರಿದಂತೆ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಣ ಒದಗಿಸುತ್ತಿದೆ.

ಬಿಜ್ವವಾರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿಜ್ಜವಾರ ನಾಗರಾಜ್ ಮಾತನಾಡಿ, ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡಲು ನೋಂದಾಯಿಸಿಕೊಂಡಿರುವ ಕೂಲಿಕಾರರು ಕೆಲಸಕ್ಕೆ ಹೋಗುವಾಗ ಮನೆಯಿಂದ ಬಿಂದಿಗೆ, ಬಾಟಲ್‍ನಲ್ಲಿ ನೀರು ಒಯ್ಯುತ್ತಿದ್ದಾರೆ. ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಅವರು ತೆಗೆದುಕೊಂಡು ಹೋಗುತ್ತಿರುವ ನೀರು ಖಾಲಿಯಾದರೆ, ಅನ್ಯರ ಬಳಿ ಇರುವ ಕುಡಿಯುವ ನೀರಿಗೆ ಕೈ ಒಡ್ಡಬೇಕು. ಅವರ ಬಳಿಯೂ ಖಾಲಿಯಾದರೆ ಕೆಲಸ ಬಿಟ್ಟು ಮನೆಗೆ ಬಂದು ನೀರು ತರಬೇಕು. ಇನ್ನು ಬಿಸಿಲಲ್ಲೇ ಕುಳಿತು ಊಟ, ಉಪಾಹಾರ ತಿಂದು, ಅಲ್ಲೇ ವಿಶ್ರಾಂತಿ ಪಡೆಯುವುದು ಕಾರ್ಮಿಕರಿಗೆ ಅನಿವಾರ್ಯ ಎಂಬಂತಾಗಿದೆ ಎಂದರು.

ಉದ್ಯೋಗ ಖಾತರಿ ಯೋಜನೆ ಅಡಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಕಾಮಗಾರಿ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು, ವಿಶ್ರಾಂತಿಗಾಗಿ ನೆರಳು ಒದಗಿಸುವುದು, ಕೆಲಸದ ಸಮಯದಲ್ಲಿ ಸಣ್ಣಪುಟ್ಟ ಗಾಯಗಳಾದಲ್ಲಿ ತಕ್ಷಣದ ಚಿಕಿತ್ಸೆಗಾಗಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಡುವುದು, ಕೂಲಿ ಕಾರ್ಮಿಕರ ಮಕ್ಕಳನ್ನು ನೋಡಿಕೊಳ್ಳಲು ದಾದಿಯ ನೇಮಕ ಮಾಡಿಕೊಳ್ಳಬೇಕು ಎಂಬ ಸರ್ಕಾರದ ಆದೇಶ ಇದೆ. ಅದರಂತೆ ಕ್ರಮ ವಹಿಸಲು ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಸಂತ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT