ಬುಧವಾರ, ಮಾರ್ಚ್ 29, 2023
24 °C

ಭಾರತೀಯ ಸೇನೆಗೆ ಬಲ ತುಂಬಿದ ನರೇಂದ್ರ ಮೋದಿ: ಸಚಿವ ಡಾ.ಕೆ. ಸುಧಾಕರ್‌ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಗಣರಾಜ್ಯದ ಪರಿಕಲ್ಪನೆಗೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತೀಯ ಸೇನೆಯನ್ನು ಬಲಪಡಿಸುವ ಹಾಗೂ ದೇಶದಲ್ಲಿ ಏಕತೆ ತರುವ ಕೆಲಸ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಪಟ್ಟಣದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ 74ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ, ಶಕ್ತಿ ನೀಡಿರುವ ಮೋದಿ ಭಯೋತ್ಪಾದಕರ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ್ದರು. ಆದರೆ, ಅದಕ್ಕೂ ಸಾಕ್ಷಿ ಕೇಳುವ ಮೂರ್ಖರಿದ್ದಾರೆ’ ಎಂದು ಟೀಕಿಸಿದರು.

ಹೊಸಕೋಟೆ ತಾಲೂಕಿನಲ್ಲಿ 10 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತವಾಗಿ ನಿವೇಶನ ನೀಡಲಾಗುವುದು. ಇದಕ್ಕಾಗಿ 293 ಎಕರೆ ಸರ್ಕಾರಿ ಭೂಮಿ ಗುರುತಿಸಲಾಗಿದೆ. ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ತಾಲ್ಲೂಕುಗಳಲ್ಲಿ ಬಡವರಿಗೆ ಉಚಿತ ನಿವೇಶನ ನೀಡಲು ಸರ್ಕಾರಿ ಜಮೀನು ಗುರುತಿಸಲಾಗುತ್ತಿದೆ ಎಂದು ತಿಳಿಸಿದರು.  

ಗಡಿ ಕಾಯುವ ಯೋಧರ ಜೊತೆ ದೀಪಾವಳಿ ಆಚರಿಸಿದ ಏಕೈಕ ಪ್ರಧಾನಿ ಮೋದಿ. ಹಾಗೆಯೇ ಅವರು ಸೇನೆ ಬಲಪಡಿಸಲು ಅನೇಕ ಕಾರ್ಯಕ್ರಮ ರೂಪಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ ಎಂಬ ಹುದ್ದೆ ಆರಂಭಿಸಲಾಗಿದೆ. ರಕ್ಷಣಾ ಕ್ಷೇತ್ರವನ್ನು ಉದ್ಯಮವಾಗಿ ಬೆಳೆಸಲಾಗಿದೆ. ಈ ಕ್ಷೇತ್ರದ ಉತ್ಪನ್ನಗಳ ರಫ್ತು ಶೇ 700ರಷ್ಟು ಹೆಚ್ಚಾಗಿದೆ ಎಂದು
ತಿಳಿಸಿದರು.

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಜನ್ಮದಿನವನ್ನು ಪರಾಕ್ರಮ ದಿನವಾಗಿ ಆಚರಿಸಲಾಗುತ್ತಿದೆ. ಕರ್ತವ್ಯ ಪಥದ ಬಳಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಕರ್ನಾಟಕದವರಾದ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಮೊದಲ ಬಾರಿಗೆ ಆರ್ಮಿ ಡೇ ಪರೇಡ್‌ ಅನ್ನು ದೆಹಲಿಯಿಂದ ಬೆಂಗಳೂರಿನಲ್ಲೇ ಆಚರಿಸಿ ಸೇನಾನಿಗಳಿಗೆ ಗೌರವ ಸಲ್ಲಿಸಲಾಗಿದೆ ಎಂದರು.

ವಿವಿಧತೆಯಲ್ಲಿ ಏಕತೆ ಎಂಬುದು ಭಾರತದ ಧ್ಯೇಯ. ಇದನ್ನು ಒಳಗೊಂಡೇ ದೇಶ ಉತ್ತಮವಾಗಿ ಅಭಿವೃದ್ಧಿ ಸಾಧಿಸಲು ಡಾ.ಬಿ.ಆರ್. ಅಂಬೇಡ್ಕರ್‌ ರಚಿಸಿದ ಶ್ರೇಷ್ಠ ಸಂವಿಧಾನ ಕಾರಣವಾಗಿದೆ. ಬ್ರಿಟಿಷರು ದೇಶ ತೊರೆಯುವಾಗ ಸಂವಿಧಾನ ರಚಿಸಿಕೊಡುತ್ತೇವೆ ಎಂದು ಹೇಳುತ್ತಾರೆ. ಇದಕ್ಕೆ ಒಪ್ಪದ ಮಹಾತ್ಮ ಗಾಂಧೀಜಿ ನಮ್ಮ ಸಂವಿಧಾನವನ್ನು ನಾವೇ ರಚಿಸಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ನಮ್ಮದು ಅತಿದೊಡ್ಡ ಲಿಖಿತ ಸಂವಿಧಾನ. ಬೇರೆ ದೇಶಗಳ ಒಳ್ಳೆಯ ಅಂಶಗಳನ್ನು ಎರವಲು ಪಡೆಯಲಾಗಿದೆ. ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಕೂಡ ಜನರು ಅರಿಯಬೇಕು ಎಂದು ಹೇಳಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಇದೇ ದಿನ ಹುತಾತ್ಮರಾದರು. ನಾಡಿಗೆ ಸ್ವಾತಂತ್ರ್ಯ ತಂದುಕೊಡಲು ಅವರು ಹೋರಾಟ ಮಾಡಿದ್ದರು. ಅವರನ್ನು ಈ ದಿನ ಸ್ಮರಿಸಬೇಕು. ಎಚ್‌.ಎನ್‌. ವ್ಯಾಲಿ ಜೊತೆಗೆ ಎತ್ತಿನಹೊಳೆ ಯೋಜನೆಗೆ ಒತ್ತು ನೀಡಿದ್ದು, ₹ 23 ಸಾವಿರ ಕೋಟಿ ಮೊತ್ತದ ಪರಿಷ್ಕೃತ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಒಂದು ವರ್ಷದೊಳಗೆ ಎತ್ತಿನಹೊಳೆ ನೀರು ಈ ಭಾಗಕ್ಕೆ ದೊರೆಯಲಿದೆ ಎಂದು ಸಚಿವರು ತಿಳಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಅಧ್ಯಕ್ಷತೆವಹಿಸಿದ್ದರು, ಜಿಲ್ಲಾಧಿಕಾರಿ ಆರ್‌. ಲತಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿ.ಪಂ. ಸಿಇಒ ಕೆ. ರೇವಣ್ಣಪ್ಪ, ಪುರಸಭೆ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾ, ತಹಶೀಲ್ದಾರ್ ಶಿವರಾಜ್‌, ಜಿಲ್ಲಾ ಅಂಗವಿಕಲರ ರಕ್ಷಣಾಧಿಕಾರಿ ಜಗದೀಶ್‌, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ, ಜಿ.ಪಂ. ಉಪ ಕಾರ್ಯದರ್ಶಿ ಡಾ.ನಾಗರಾಜ್‌ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು