ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಮರಗಳ ಅಪೋಶನ ಭವಿಷ್ಯಕ್ಕೆ ಕುತ್ತು

ವನ ಸಂಪತ್ತು ಉಳಿಸಲು ಜನರ ಸಹಭಾಗಿತ್ವ ಮುಖ್ಯ * ನೀಲಗಿರಿ ಮರಗಳ ತೆರವುಗೊಳಿಸಿ
Last Updated 2 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ದೇವನಹಳ್ಳಿ: ದಿನೇ ದಿನೇ ಕಾಡು ಬರಿದಾಗುತ್ತಿದೆ. ಹೇರಳ ಸಂಪನ್ಮೂಲವೂ ಕರಗುತ್ತಿದೆ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ವನ ಸಂಪತ್ತು ರಕ್ಷಣೆ ಹೊಣೆ ಯಾರದ್ದು ಎಂಬ ಪ್ರಶ್ನೆ ಎದುರಾಗಿದೆ. ಅರಣ್ಯ ಸಿಬ್ಬಂದಿ ಅಷ್ಟೇ ಇದರ ಜವಾಬ್ದಾರರು ಅಲ್ಲ. ಜನರ ಸಹಕಾರ, ಸಹಭಾಗಿತ್ವವೂ ಮುಖ್ಯ ಎನ್ನುವ ವಾದಕ್ಕೆ ಬೆಂಬಲ ನೀಡಬೇಕಾಗಿದೆ.

ಗ್ರಾಮಾಂತರ ಜಿಲ್ಲೆ ಬಯಲು ಸೀಮೆ ಪ್ರದೇಶ ವ್ಯಾಪ್ತಿಯಲ್ಲಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡ ನಂತರ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ಮತ್ತು ಖಾಸಗಿ ಡೆವಲಪರ್ಸ್‌ಗಳು ಹಳೆ ಮರಗಳನ್ನು ಅಪೋಶನ ಮಾಡಿದ್ದಾರೆ. ರಸ್ತೆ ಅಭಿವೃದ್ಧಿಗಾಗಿ ಅಪಾರವಾದ ವನ ಸಂಪತ್ತು ಹಾಳಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಬರಗಾಲ ಬೆನ್ನಿಗೆ ಅಂಟಿಸಿಕೊಂಡಂತಿದ್ದ ಜಿಲ್ಲೆಗೆ ಕಳೆದ ಮುಂಗಾರಿನಲ್ಲಿ ಸಾಧಾರಣ ಮಳೆ ಬಂದು ರಾಗಿ ಫಸಲು ಕಂಡಿದ್ದಾರೆ. ಇದರ ಹೊರತುಪಡಿಸಿದರೆ ಬಹುತೇಕ ಕೆರೆಗಳಲ್ಲಿ ಹನಿ ನೀರು ಇಲ್ಲ.

ಅಂತರ್ಜಲ ಮೂಲಗಳು ಬತ್ತಿ ಹೋಗಿವೆ. ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮತವಾಗಿದೆ. ಪರಿಣಾಮ ವನ ಸಂಪತ್ತು ದಿನೇ ದಿನೇ ಬರಿದಾಗುತ್ತಿದೆ. ಜಿಲ್ಲೆ ಅರಣ್ಯ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲಿ ಮೀಸಲು ಅರಣ್ಯ ಪ್ರದೇಶ ಮತ್ತು ಸಣ್ಣ ಅರಣ್ಯ ಪ್ರದೇಶಗಳು ದೇವನಹಳ್ಳಿ ತಾಲ್ಲೂಕಿನಲ್ಲಿ 2652.88 ಹೆಕ್ಟೇರ್‌, ದೊಡ್ಡಬಳ್ಳಾಪುರ 6903.55, ನೆಲಮಂಗಲ 4559.16 ಹೆಕ್ಟೇರ್ ಮಾತ್ರ ಇದೆ.

ದೇವನಹಳ್ಳಿ ತಾಲ್ಲೂಕಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 542 ಹೆಕ್ಟೇರ್ ಅರಣ್ಯ ಅಪೋಶನವಾಗಿದೆ. ಈ ಅರಣ್ಯ ಪ್ರದೇಶ ಸರಿದೂಗಿಸಲು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 542 ಹೆಕ್ಟೇರ್‌ ಅರಣ್ಯ ಹೆಚ್ಚುವರಿಯಾಗಿ ಬೆಳೆಸಲಾಗಿದೆ ಎಂಬುದು ಅಧಿಕಾರಿಗಳು ನೀಡುವ ಮಾಹಿತಿ.

ಜಿಲ್ಲೆಯಲ್ಲಿ ಪ್ರಸ್ತುತ 17,777.4 ಹೆಕ್ಟೇರ್‌ನಲ್ಲಿ ಅರಣ್ಯ ವ್ಯಾಪ್ತಿ ಹೊಂದಿದೆ. ಉಳಿಕೆ ಅರಣ್ಯ ಪ್ರದೇಶ ವ್ಯಾಪ್ತಿ 3757.42 ಹೆಕ್ಟೇರ್ ಇದ್ದು ಹಂತ – ಹಂತವಾಗಿ ಗಿಡಮರ ಬೆಳೆಸುವ ಗುರಿ ಇದೆ ಎಂಬುದು ಇಲಾಖೆ ನೀಡುವ ಮಾಹಿತಿ.

2019–20ನೇ ಸಾಲಿನಲ್ಲಿ ಸಾಮಾಜಿಕ ಆರಣ್ಯ ಮತ್ತು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ರಸ್ತೆಬದಿ, ಕೆರೆಯಂಗಳ, ಸಂಘ ಸಂಸ್ಥೆಗಳ ಆವರಣ, ಸರ್ಕಾರಿ ಖಾಲಿ ಜಾಗಗಳು ಹಾಗೂ ಆರಣ್ಯ, ರೈತರ ಜಮೀನುಗಳಲ್ಲಿ 182800 ಸಸಿಗಳು ನೆಟ್ಟು ನೆಡುತೋಪು ಬೆಳೆಸಲಾಗಿದೆ. ವಿವಿಧ ಕಾರ್ಯಕ್ರಮಗಳಲ್ಲಿ 9,15,800 ಸಸಿಗಳನ್ನು ರೈತರಿಗೆ ಮತ್ತು ಸಾರ್ವಜನಿಕರಿಗೆ ವಿತರಿಸಲಾಗಿದೆ ಎಂದು ಇಲಾಖೆ ನೀಡುವ ಮಾಹಿತಿ.

ಜಿಲ್ಲೆಯಲ್ಲಿ ನೀಲಗಿರಿ ಮರ ತೆರವುಗೊಳಿಸುವ ಸಂದರ್ಭದಲ್ಲಿ ಕಂದಾಯ ಇಲಾಖೆ ಕಳೆದ ವರ್ಷ ಮಾಹಿತಿ ಕಲೆ ಹಾಕಿದಾಗ ಖಾಸಗಿಯಾಗಿ ರೈತರು ಬೆಳೆಸಿರುವ ನೀಲಗಿರಿ ಮರಗಳ ವ್ಯಾಪ್ತಿ 96 ಸಾವಿರ ಎಕರೆ. ಈಪೈಕಿ 5,763 ಎಕರೆಯನ್ನೆಯಷ್ಟೇ ತೆರವುಗೊಳಿಸಲಾಗಿದೆಯೇ ಹೊರತು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ನೀಲಗಿರಿ ಮರಗಳ ತೆರವುಗೊಳಿಸಲು ಇಲಾಖೆ ಮುಂದಾಗಲಿಲ್ಲ. ನೀಲಗಿರಿ ಮರಗಳನ್ನು ತೆರವುಗೊಳಿಸಿ ಪ್ರಾದೇಶಿಕ ತಳಿಯ ಮರಗಳನ್ನು ಬೆಳೆಸಿದರೆ ಅರಣ್ಯ ವಿಸ್ತರಣೆಯಾಗಲಿದೆ ಎಂಬುದು ಪರಿಸರ ತಜ್ಞರ ಅಭಿಪ್ರಾಯ.

ಪ್ರಸ್ತುತ ಇರುವ ಮೀಸಲು ಮತ್ತು ಇತರ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿ ಮತ್ತು ಪಕ್ಷಿ ಸಂಕುಲಗಳಿಗೆ ಅಯಾ ಪ್ರಮುಖ ಸ್ಥಳದಲ್ಲಿ ಸಿಮೆಂಟ್ ತೊಟ್ಟಿ ನಿರ್ಮಾಣ ಮಾಡಿ ಟ್ಯಾಂಕರ್‌ನಿಂದ ನೀರು ತುಂಬಿಸಿದರೆ ಪ್ರಾಣಿಗಳು ಗ್ರಾಮಗಳಿಗೆ ಬರುವುದಿಲ್ಲ. ಸಾವಿರಾರು ಕೋಟಿ ಅದಾಯ ತರುವ ಅರಣ್ಯ ಸಂಪತ್ತು ಉಳಿಸಬೇಕು. ಪ್ರಾಣಿ – ಪಕ್ಷಿಗಳು ಬದುಕಬೇಕು. ಜಿಲ್ಲೆಯಲ್ಲಿ ಈಗಿರುವ ಅರಣ್ಯವ್ಯಾಪ್ತಿ ಶೇ 16ರಷ್ಟು ಸರಿದೂಗಿಸಬೇಕಾಗಿದೆ. ಶೇ 23ರಷ್ಟು ಬೆಳೆವಣಿಗೆಯಾಗಲೇಬೇಕು. ಇಲ್ಲದಿದ್ದಲ್ಲಿ ಪರಿಸರ ಸಮತೋಲನ ಕಾಯ್ದುಕೊಳ್ಳವುದು ಕಷ್ಟವಾಗಲಿದೆ ಎನ್ನುತ್ತಾರೆ ನಿವೃತ್ತ ಅರಣ್ಯಾಧಿಕಾರಿ ನಂಜಪ್ಪ.

ಆರಣ್ಯ ಇಲಾಖೆ ವತಿಯಿಂದ ಕಾಡಂಚಿನ ಗ್ರಾಮಗಳಿಲ್ಲಿರುವ ಅರ್ಹ ಫಲಾನುಭವಿಗಳಿಗೆ ಉರುವಲು ಬದಲು ಅಡುಗೆ ಅನಿಲ ಮತ್ತು ಸೌರಶಕ್ತಿ ದೀಪ ಕಳೆದ ಎರಡು ವರ್ಷದಿಂದ 1,200ಕ್ಕೂ ಹೆಚ್ಚು ವಿತರಿಸಲಾಗಿದೆ. ಕಾಡಂಚಿನ ಗ್ರಾಮಸ್ಥರು ಸ್ಥಳೀಯವಾಗಿ ಆರಣ್ಯ ಸಂರಕ್ಷಣೆಗೆ ನೆರವಾಗಬೇಕು. ಆಕಸ್ಮಿಕ ಬೆಂಕಿ ಬಿದ್ದ ತಕ್ಷಣ ಆರಣ್ಯ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕು ಎನ್ನುತ್ತಾರೆ ಗ್ರಾಮ ಆರಣ್ಯ ಸಮಿತಿ ಅಧ್ಯಕ್ಷ ಕೊಡಿಮಂಚೇನಹಳ್ಳಿ ನಾಗೇಶ್.

ಅರಣ್ಯ ಇಲಾಖೆ ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಇಡೀ ಜಿಲ್ಲೆಯಲ್ಲಿ 5ರಿಂದ 6ಲಕ್ಷ ಸಸಿಗಳ ನೆಟ್ಟು ಬೆಳೆಸುವುದಾಗಿ ವಾರ್ಷಿಕವಾಗಿ ಹೇಳುತ್ತಲೇ ಬಂದಿದೆ. ಎಲ್ಲಿ ಬೆಳೆಸುತ್ತಾರೆ ಎಂಬುದೇ ಗೊತ್ತಿಲ್ಲ. ನೆಟ್ಟಿರುವ ಸಸಿಗಳಿಗೆ ಬೇಸಿಗೆ ಸಂದರ್ಭದಲ್ಲಿ ನೀರುಣಿಸಿ ಸಸಿಗಳಿಗೆ ರಕ್ಷಣೆ ನೀಡಿದರೆ ಬೆಳೆವಣಿಗೆ ಅನುಕೂಲ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರ್.

ಈಗಾಗಲೇ ಬೇಸಿಗೆ ಆರಂಭಗೊಂಡಿದೆ. ಗಿಡ – ಮರಗಳ ಎಲೆ ಉದುರುವುದು ಪ್ರಕೃತಿ ಸಹಜ ಪ್ರಕ್ರಿಯೆ. ಒಣಗಿದ ತರಗೆಲೆಗಳ ಜತೆಗೆ ಗುಡ್ಡಗಾಡು ಪ್ರದೇಶದಲ್ಲಿ ಬೆಳೆದಿರುವ ಹುಲ್ಲು ಬೇಸಿಗೆಯಲ್ಲಿ ಒಣಗಿರುವುದರಿಂದ ಸುಲಭವಾಗಿ ಕಾಳ್ಗಿಚ್ಚಿಗೆ ತುತ್ತಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಮುಂಜಾಗ್ರತೆ ವ್ಯವಸ್ಥೆಯಾಗಬೇಕು ಎನ್ನುತ್ತಾರೆ ಸ್ಥಳೀಯರಾದ ನಂಜುಂಡಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT