ಸೋಮವಾರ, ಸೆಪ್ಟೆಂಬರ್ 20, 2021
23 °C

ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ: ಮೂರು ದಿನ ಕಳೆದರೂ ನಾಮಪತ್ರ ಸಲ್ಲಿಕೆಯಾಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ನಗರಸಭೆ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆಗೆ ಅಧಿಸೂಚನೆ ಹೊರಡಿಸಿ ಮೂರು ದಿನಗಳು ಕಳೆದಿದ್ದರೂ ಇಲ್ಲಿಯವರೆಗೆ ಯಾರೊಬ್ಬರು ನಾಮಪತ್ರ ಸಲ್ಲಿಸಿಲ್ಲ.

ಸೆ. 3ರಂದು ನಡೆಯುವ ನಗರಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಆ. 23 ಕೊನೆಯ ದಿನವಾಗಿದೆ. ಬಂಡಾಯದ ಬೇಗುದಿ ತಡೆಯುವ ಸಲುವಾಗಿ ಹೆಚ್ಚಿನ ಸ್ಪರ್ಧಿಗಳು ಇರುವ ವಾರ್ಡ್‌ಗಳಲ್ಲಿ ಸಂಧಾನದ ಮಾತುಕತೆ ನಡೆಯುತ್ತಲೇ ಇದೆ. ಇದರ ನಡುವೆ ನಗರಸಭೆಯ 31 ವಾರ್ಡ್‌ಗಳಿಗೂ ಸಮರ್ಥ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಪ್ರಮುಖ ರಾಜಕೀಯ ಪಕ್ಷಗಳು ಇನ್ನೂ ಅಧಿಕೃತವಾಗಿ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.

2013ರಲ್ಲಿ ನಡೆದಿದ್ದ ನಗರಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರು. ತಾವು ಕೇಳಿದ ವಾರ್ಡ್‌ಗಳಲ್ಲಿ ಟಿಕೆಟ್‌ ನೀಡದ ಕಾರಣದಿಂದಾಗಿ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನೇ ಸೋಲಿಸಲಾಗಿತ್ತು. ಇದರಿಂದಾಗಿ ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆತಿರಲಿಲ್ಲ.

ಆದರೆ, ಈ ಬಾರಿ ಹೇಗಾದರು ಮಾಡಿ ಸ್ಪಷ್ಟ ಬಹುಮತ ಪಡೆಯಲೇ ಬೇಕು ಎನ್ನುವ ಹಠಕ್ಕೆ ಬಿದ್ದಿರುವ ಪಕ್ಷದ ಮುಖಂಡರು ಟಿಕೆಟ್‌ ಘೋಷಣೆಗೂ ಮುನ್ನವೇ ಬಂಡಾಯ ಶಮನಕ್ಕೆ ಪ್ರಥಮ ಆದ್ಯತೆ ನೀಡಿದ್ದಾರೆ.

ನೂಕುನುಗ್ಗಲು ಸಾಧ್ಯತೆ: ಆ. 20ರಂದು ಸರ್ಕಾರಿ ರಜೆ ಇರುವ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಗೆ ಇನ್ನು ಮೂರು ದಿನಗಳು ಮಾತ್ರ ಅವಕಾಶ ದೊರೆತಿದೆ.

ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಬರುವುದ ರಿಂದ ಸಲ್ಲಿಕೆ ಕೇಂದ್ರದ ಮುಂದೆ ನೂಕುನುಗ್ಗಲು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಈ ನಡುವೆಯೇ ರಾಜ್ಯ ಚುನಾವಣಾ ಆಯೋಗ ಬುಧವಾರ ಚುನಾವಣಾ ಮಾರ್ಗಸೂಚಿ ಪ್ರಕಟಿಸಿದೆ. ಅಭ್ಯರ್ಥಿಗಳು ಮತಯಾಚನೆಗೆ ಮನೆಗಳಿಗೆ ಭೇಟಿ ನೀಡುವ ಸಂದರ್ಭ ದಲ್ಲಿ ಅಭ್ಯರ್ಥಿ ಸೇರಿದಂತೆ ಐದು ಜನರಿಗಿಂತಲೂ ಹೆಚ್ಚು ಇರಬಾರದು. ಪ್ರಚಾರದ ವೇಳೆ ಜನರು ಗುಂಪು ಸೇರಿಸುವುದು, ಯಾವುದೇ ರೀತಿಯ ವಾಹನಗಳನ್ನು ಬಳಸುವುದನ್ನು ನಿಷೇಧಿಸಿದೆ. ಪ್ರಚಾರ ಸೇರಿದಂತೆ ಎಲ್ಲಾ ಸಂದರ್ಭದಲ್ಲೂ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು