ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಪ್ರತಿ ಹಳ್ಳಿಗೂ ಪೋಷಣ ಅಭಿಯಾನ

ದೊಡ್ಡಬಳ್ಳಾಪುರ: ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ
Last Updated 2 ಸೆಪ್ಟೆಂಬರ್ 2022, 4:47 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಗರ್ಭಧಾರಣೆಯಿಂದ ಮೊದಲುಗೊಂಡು ಶಿಶು ಮತ್ತು ತಾಯಂದಿರು ಒಂದು ಸಾವಿರ ದಿನಗಳ ಕಾಲ ಉತ್ತಮ ಪೌಷ್ಟಿಕ ಆಹಾರ ಪಡೆದು ಆರೋಗ್ಯವಂತರನ್ನಾಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಕೇಂದ್ರ ಪುರಸ್ಕೃತ ಯೋಜನೆಯಾದ ಪೋಷಣ ಅಭಿಯಾನಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀನಾಥ್‌ಗೌಡ ಗುರುವಾರ ಚಾಲನೆ ನೀಡಿದರು.

ನಗರದ ತಾಲ್ಲೂಕು ಪಂಚಾಯಿತಿ ಸಮೀಪದ ಸಾಮರ್ಥ್ಯ ಸೌಧ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿ, ಸೆಪ್ಟೆಂಬರ್‌ ತಿಂಗಳನ್ನು ಪೋಷಣ್‌ ತಿಂಗಳು ಎಂದು ಆಚರಿಸಲಾಗುತ್ತದೆ. ಪುರಾತನ ಕಾಲದಿಂದಲೂ ನಮ್ಮ ಅಜ್ಜಿಯಂದಿರು ಗರ್ಭಿಣಿಯರು, ಬಾಣಂತಿಯರು ಯಾವ ರೀತಿಯಾಗಿ ಸಮತೋಲನ ನೀಡಿ ಆರೈಕೆ ಮಾಡಬೇಕೆಂದು ನಮಗೆ ಹೇಳಿಕೊಡುತ್ತಿದ್ದರು. ಆದರೆ ಈಗ ಮತ್ತಷ್ಟು ಅರಿವು ಬೇಕಾಗಿರುವುದರಿಂದ ಸರ್ಕಾರ ಈ ಕುರಿತು ಅರಿವು ಕಾರ್ಯಕ್ರಮ ನಡೆಸುತ್ತಿದೆ ಎಂದು ತಿಳಿಸಿದರು.

ಸರ್ಕಾರ ನಾಗರಿಕರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಯೋಜನೆಗಳು ಸಮರ್ಪಕವಾಗಿ ಜಾರಿಯಾಗಬೇಕಾದರೆ ಎಲ್ಲರ ಸಹಕಾರ ಅಗತ್ಯ. ಈ ಅಭಿಯಾನದ ಯಶಸ್ವಿಗೆ ಎಲ್ಲಾ ಇಲಾಖೆಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಂಘ– ಸಂಸ್ಥೆಗಳು, ನಾಗರಿಕರು ಕೈಜೋಡಿಸಬೇಕು ಎಂದು ಹೇಳಿದರು.

ಅಭಿಯಾನ ಮಾಸಾಚರಣೆ ಕಾರ್ಯಕ್ರಮವನ್ನು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿ ಹಳ್ಳಿ ಹಳ್ಳಿಗೆ ಭೇಟಿ ನೀಡಿ ಪರಿಣಾಮಕಾರಿಯಾಗಿ ಅರಿವು ಮೂಡಿಸುವಂತೆ ಮನವಿ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ್ ಮಾತನಾಡಿ, ಪೋಷಣ ಅಭಿಯಾನ ಯೋಜನೆಯಡಿ ಗರ್ಭಧಾರಣೆಯಿಂದ ಹಿಡಿದು ಶಿಶು ಮತ್ತು ತಾಯಂದಿರು ಒಂದು ಸಾವಿರ ದಿನಗಳ ಕಾಲ ಉತ್ತಮ ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ರಕ್ತಹೀನತೆ, ಅತಿಸಾರ ತಡೆಗಟ್ಟುವುದು, ಪೌಷ್ಟಿಕ ಆಹಾರ ಪೂರೈಕೆ ಮಾಡುವುದರ ಮೂಲಕ ತಾಯಿ ಮತ್ತು ಶಿಶುವಿನ ಉತ್ತಮ ಆರೋಗ್ಯ ಕಾಪಾಡುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.

ಸಿಡಿಪಿಒ ಅನಿತಾಲಕ್ಷ್ಮೀ, ಸಮಾಜ ಕಲ್ಯಾಣ ಅಧಿಕಾರಿ ಸೋಮಶೇಖರ್, ಎಸಿಡಿಪಿಒ ಅರುಣ್‌ಕುಮಾರ್ ಸೇರಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT