ಮಂಗಳವಾರ, ಮಾರ್ಚ್ 21, 2023
25 °C
ಸಂಜೆ ಬಳಿಕ ಮದ್ಯ ಸೇವನೆ, ಫ್ಯಾಷನ್ ಷೊ l ಅಬ್ಬರದ ಸಂಗೀತ: ಕ್ರೀಡಾಪಟುಗಳ ಆರೋಪ

ಅಥ್ಲೆಟಿಕ್‌ ಟ್ರ್ಯಾಕ್‌ನಲ್ಲಿ ಕಾರ್‌ ರೇಸ್‌ಗೆ ಆಕ್ಷೇಪ

ಪ್ರಜಾವಾಣಿ ವಾರ್ತೆ ‌‌ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಇಂಡಿಯನ್‌ ಅಟೊ ಕ್ರಾಸ್ ಚಾಂಪಿಯನ್‌ ಶಿಪ್‌ ಸುತ್ತ ವಿವಾದ ಎದ್ದಿವೆ. ಆಯೋಜಕರು ನಿರಂತರವಾಗಿ ನಿಯಮ ಉಲ್ಲಂಘಿಸಿದ್ದರೂ ಅಧಿಕಾರಿಗಳು ಆಯೋಜಕರ ಪರ ನಿಂತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 

ಭಾನುವಾರ ಬೆಳಿಗ್ಗೆ ಕ್ರೀಡಾಂಗಣಕ್ಕೆ ಅಂತರರಾಷ್ಟ್ರೀಯ ಕ್ರೀಡಾಪಟು ನಟರಾಜ್‌ ನೇತೃತ್ವದಲ್ಲಿ ಸ್ಥಳೀಯರು ಅಥ್ಲೆಟಿಕ್‌ ಟ್ರ್ಯಾಕ್‌ನಲ್ಲಿ ಕಾರು ರೇಸಿಂಗ್‌ ಮಾಡಲು ಕ್ರೀಡಾಂಗಣ ನಿಯಮದಲ್ಲಿ ಅವಕಾಶವಿಲ್ಲ. ಇದಕ್ಕೆ ಅನುವು ಮಾಡಿಕೊಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಜಾಯಿಷಿ ನೀಡಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ, ಕ್ರೀಡಾ ಇಲಾಖೆಯ ಆಯುಕ್ತಾಲಯದಿಂದ ನೀಡಲಾದ ಸೂಚನಾ ಪತ್ರದಂತೆ ಕ್ರೀಡಾಂಗಣ ಸಮಿತಿಯೊಂದಿಗೆ ಚರ್ಚೆ ಮಾಡಿಲ್ಲ. ಆದರೆ, ಆಯೋಜಕರಿಂದ ಠೇವಣಿ ಇರಿಸಿಕೊಂಡು ಅನುಮತಿ ನೀಡಲಾಗಿದೆ. ಇಲಾಖೆಯ ಸಹಾಯಕ ನಿರ್ದೇಶಕಿಯಾಗಿ ಕ್ರೀಡಾಂಗಣವನ್ನು ಕಾರು ರೇಸಿಂಗ್‌ಗೆ ಅವಕಾಶ ಮಾಡಿಕೊಡಲು ಅಧಿಕಾರವಿಲ್ಲವೇ ಎಂದು ಪ್ರಶ್ನಿಸಿದರು. 

ಪ್ರತಿ ಆರೋಪಕ್ಕೂ ರಾಜ್ಯ ಕ್ರೀಡಾ ಇಲಾಖೆಯ ಕಡೆ ಬೊಟ್ಟು ಮಾಡಿರುವ ಗೀತಾ ಅವರು, ವಾಸ್ತವವಾಗಿ ಕ್ರೀಡಾಂಗಣ ಸಮಿತಿಯೊಂದಿಗೆ ಚರ್ಚಿಸದೆ ಜ. 6ರಂದು ಕಾರು ರೇಸಿಂಗ್ ನಡೆಸಲು ಅನುಮತಿ ನೀಡಿದ್ದಾರೆ. ಠೇವಣಿ ಹಣವನ್ನು ಇಲಾಖೆಗೆ ಕಟ್ಟಿಸಿಕೊಳ್ಳದೆ ಆಯೋಜಕರಿಂದ ಚೆಕ್‌ ಮಾತ್ರ ಪಡೆದುಕೊಂಡು ಅಥ್ಲೆಟಿಕ್‌ ಟ್ರ್ಯಾಕ್‌ನಲ್ಲಿ ಕಾರುಗಳ ರೇಸಿಂಗ್‌ಗೆ ಕಾರಣವಾಗಿದ್ದಾರೆ.

ಆಸ್ಪತ್ರೆ, ಕಾಲೇಜುಗಳಿಗೆ ಹೊಂದಿಕೊಂಡಿರುವ ಕ್ರೀಡಾಂಗಣದಲ್ಲಿ ರೇಸ್‌ ಆಯೋಜನೆಯಿಂದ ಸಾಕಷ್ಟು ಧೂಳು ಹಾಗೂ ಶಬ್ದ ಮಾಲಿನ್ಯವಾಗುತ್ತದೆ. ಇದು ನಿಶ್ಯಬ್ದ ವಲಯವಾಗಿದ್ದು, ಇದಕ್ಕೆ ಯಾವ ಮಾರ್ಗಸೂಚಿ ಅನ್ವಯ ಅನುಮತಿ ನೀಡಿದ್ದೀರಿ ಎಂದು ಕ್ರೀಡಾಪಟುಗಳು ಪ್ರಶ್ನಿಸಿದರು. ‘ಬೇಕಿದ್ದರೇ ದೂರು ನೀಡಿ. ಎಲ್ಲವನ್ನೂ ಕ್ರೀಡಾಂಗಣ ಸಮಿತಿಯೊಂದಿಗೆ ಚರ್ಚಿಸಿ ಅನುಮತಿ ನೀಡಲು ಸಾಧ್ಯವಿಲ್ಲ’ ಎಂದು ಗೀತಾ ಉತ್ತರಿಸಿದರು.

ಫ್ಯಾಷನ್‌ ಷೊ: ಕಾರು ರೇಸಿಂಗ್‌ಗೆ ಸಂಜೆ ಐದು ಗಂಟೆಯವರೆಗೆ ಅನುಮತಿ ಪಡೆಯಲಾಗಿದೆ. ಆದರೆ,ಆಯೋಜಕರು ತಡರಾತ್ರಿ ಅಬ್ಬರದ ಸಂಗೀತದೊಂದಿಗೆ ಯುವತಿಯರ ರ‍್ಯಾಂಪ್ ಷೊ ನಡೆಸಿದ್ದಾರೆ. ಕ್ರೀಡಾಂಗಣದಲ್ಲಿ ರೇಸಿಂಗ್‌ಗಷ್ಟೇ ಅಲ್ಲದೆ, ಫ್ಯಾಷನ್ ಷೊಗೂ ಅನುಮತಿ ನೀಡಿದೆಯೇ ಎಂಬುದನ್ನು ಇಲಾಖೆ ಸ್ಪಷ್ಟಪಡಿಸಬೇಕು ಎಂದು ಕ್ರೀಡಾಪಟುಗಳು ಕೇಳಿದ್ದಾರೆ.

ದೇಶದ ವಿವಿಧ ಭಾಗಗಳಿಂದ ಬಂದಿರುವ ಕಾರು ರೇಸಿಂಗ್‌ ಚಾಲಕರು ಭಾನುವಾರ ಮಧ್ಯಾಹ್ನದ ನಂತರ ಮದ್ಯ ಸೇವನೆ ಮಾಡಿ ಗಲಾಟೆ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು. ಅಬಕಾರಿ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ, ಮದ್ಯ ಸೇವನೆಗೆ ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಕ್ರೀಡಾಂಗಣ ಸರಿಪಡಿಸುವ ಭರವಸೆ
ಕಳೆದ ಹತ್ತು ವರ್ಷಗಳ ಹಿಂದೆ ತಾಲ್ಲೂಕು ಕ್ರೀಡಾಂಗಣಕ್ಕೆ ಅಂದಾಜು ₹80 ಲಕ್ಷ ವೆಚ್ಚದಲ್ಲಿ ಅಥ್ಲೆಟಿಕ್ಸ್‌ ಕ್ರೀಡೆಗಾಗಿ ಟ್ರ್ಯಾಕ್ ನಿರ್ಮಾಣ ಮಾಡಲಾಗಿತ್ತು. ಕಾರು ರೇಸಿಂಗ್‌ನಿಂದ ಹಾಳಾದ ಕ್ರೀಡಾಂಗಣವನ್ನು ಸರಿಪಡಿಸಿಕೊಡುವಂತೆ ಕ್ರೀಡಾಪಟುಗಳು ಒತ್ತಾಯಿಸಿದ್ದರಿಂದ ಕ್ರೀಡಾಂಗಣವನ್ನು ದುರಸ್ತಿ ಮಾಡಿಕೊಡಲಾಗುವುದು ಎಂದು ಆಯೋಜಕರು ಲಿಖಿತ ಭರವಸೆ ನೀಡಿದ್ದಾರೆ. 

ಯಾವುದೇ ರೀತಿಯ ಹೊಸ ಟೆಂಡರ್‌ ಕರೆಯದೆ ಇಲಾಖೆಯ ಅಧಿಕಾರಿಗಳು ಅಥವಾ ಆಯೋಜಕರು ಕ್ರೀಡಾಂಗಣ ಸರಿಪಡಿಸಬೇಕು ಎಂದು ಅಥ್ಲೆಟ್‌ಗಳು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.