ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಶಿಕ್ಷಣಕ್ಕೆ ಕೊಡುಗೆ ಅಗತ್ಯ

Last Updated 7 ಜೂನ್ 2019, 13:46 IST
ಅಕ್ಷರ ಗಾತ್ರ

ಆನೇಕಲ್: ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಹಳೆಯ ವಿದ್ಯಾರ್ಥಿಗಳು ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಈ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ನೆರವು ನೀಡಬೇಕು ಎಂದು ಅನಿವಾಸಿ ಭಾರತೀಯ ಹಾಗೂ ‘ನಾವಿಕ’ ಸಂಸ್ಥೆಯ ಎಂ.ಕೃಷ್ಣಮೂರ್ತಿ ತಿಳಿಸಿದರು.

ಅವರು ಪಟ್ಟಣದ ದೇವಾಂಗಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ಹಾಗೂ ಲೇಖನ ಪರಿಕರ ವಿತರಿಸಿ ಮಾತನಾಡಿದರು.

‘ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಅಧಿಕಾರಗಳನ್ನು ಪಡೆಯುವುದಿಲ್ಲ ಎಂಬ ಧೋರಣೆಯನ್ನು ಜನರು ಬದಲಾಯಿಸಿಕೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳೇ ಉನ್ನತ ಅಧಿಕಾರಿಗಳಾಗಿದ್ದಾರೆ. ನಾನು ಸಹ ದೇವಾಂಗಪೇಟೆ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಅಮೆರಿಕದಲ್ಲಿ ಉದ್ಯೋಗ ಪಡೆದಿದ್ದೆ. ಹಾಗಾಗಿ ಪ್ರತಿಭೆ ಸಾಧಕನ ಆಸ್ತಿ’ ಎಂದರು.

‘ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಶಿಕ್ಷಣ ಪಡೆದ ಹಾಗೂ ನುರಿತ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿದ್ದಾರೆ. ಅಮೆರಿಕದಲ್ಲಿ ನೆರೆಯ ಶಾಲೆ ಕಲ್ಪನೆಯಿದೆ. ವಾಸ ಮಾಡುತ್ತಿರುವ ವ್ಯಾಪ್ತಿಯ ಶಾಲೆಗಳಲ್ಲಿಯೇ ವ್ಯಾಸಂಗ ಮಾಡಬೇಕು. ಎಲ್ಲ ಶಾಲೆಗಳು ಸಮಾನ ಗುಣಮಟ್ಟವನ್ನು ಹೊಂದಿರುತ್ತವೆ. ಈ ನಿಟ್ಟಿನಲ್ಲಿ ಸಮಾನ ಶಾಲಾ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ನೀಡಲು ಸರ್ಕಾರ ಚಿಂತನೆ ಮಾಡಬೇಕು’ ಎಂದರು.

ಮುಖ್ಯಶಿಕ್ಷಕಿ ಸರೋಜಮ್ಮ ಮಾತನಾಡಿ, ‘ದಾನಿಗಳ ನೆರವಿನಿಂದ ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯ ಕಲ್ಪಿಸಿಕೊಡಲು ಶ್ರಮಿಸಲಾಗುತ್ತಿದೆ. ಶಾಲೆಯ ಹಳೆಯ ವಿದ್ಯಾರ್ಥಿ ಅನಿವಾಸಿ ಭಾರತೀಯ ಎಂ.ಕೃಷ್ಣಮೂರ್ತಿ ಅವರು ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಉಚಿತ ನೋಟ್‌ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ನೀಡುವ ಮೂಲಕ ಶಾಲೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಪ್ರತಿ ವಿದ್ಯಾರ್ಥಿಯು ತಾನು ಓದಿದ ಶಾಲೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು ಶಾಲೆಯೊಂದಿಗೆ ಸಂಪರ್ಕ ಹೊಂದಿದ್ದರೆ ಆ ಶಾಲೆಗಳ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯ’ ಎಂದರು.

ರೋಟರಿ ಸಂಸ್ಥೆಯ ಗಜಲಕ್ಷ್ಮೀ ಕೃಷ್ಣಮೂರ್ತಿ, ಪದ್ಮಿನಿ, ಕೆ.ಎನ್.ಮೂರ್ತಿ, ಹಳೆ ವಿದ್ಯಾರ್ಥಿಗಳ ಸಂಘದ ವಾಸು ಮೂರ್ತಿ, ಶಿಕ್ಷಕರಾದ ಮಂಗಳಾ, ಪರ್ವೀನ್‌ ಫಾತಿಮಾ, ಆರೋಕ್ಯಮೇರಿ, ನಿವೃತ್ತ ಶಿಕ್ಷಕ ರಾಮಪ್ಪ ಇದ್ದರು.

ಆನೇಕಲ್‌ನ ಸರ್ಕಾರಿ ಹಳೆಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೂ ನೋಟ್‌ಪುಸ್ತಕಗಳು ಹಾಗೂ ಲೇಖನ ಸಾಮಗ್ರಿ ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷೆ ಚೈತ್ರಾ, ಉಪಾಧ್ಯಕ್ಷ ಮಂಜುನಾಥ್‌, ಮುಖ್ಯಶಿಕ್ಷಕಿ ವೆಂಕಟಲಕ್ಷ್ಮಮ್ಮ, ಶಿಕ್ಷಕರಾದ ಎಸ್‌.ನಾರಾಯಣಮ್ಮ, ನವೀನ್‌, ಭಾಗ್ಯ, ಲತಾ ರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT