ಭಾನುವಾರ, ಜನವರಿ 26, 2020
18 °C
ರೈತರನ್ನು ಕಚೇರಿಗೆ ಅಲೆದಾಡಿಸುವುದು ಬೇಡ, ಜಿಲ್ಲಾಧಿಕಾರಿ ಪಿ. ರವೀಂದ್ರ ಸೂಚನೆ

ಅಧಿಕಾರಿಗಳು ಮೈಚಳಿ ಬಿಟ್ಟು ಕೆಲಸ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ಕಂದಾಯ ಇಲಾಖೆಯಲ್ಲಿನ ಭೂದಾಖಲಾತಿ ತಿದ್ದುಪಡಿ ಸಮಸ್ಯೆ ಬಗ್ಗೆ ತ್ವರಿತವಾಗಿ ಸಕಾಲದಲ್ಲಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿರುವ ಕಂದಾಯ ಸಭಾಂಗಣದಲ್ಲಿ ತಹಶೀಲ್ದಾರ್‌ಗಳು, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಮತ್ತು ಕಂದಾಯ ಇಲಾಖೆ ಕಚೇರಿಗಳ ಸಿಬ್ಬಂದಿಗಾಗಿ ಜಿಲ್ಲಾ ಮಟ್ಟದ ಪಹಣಿ ಮತ್ತು ಇತರ ಕಂದಾಯ ಇಲಾಖೆ ದಾಖಲೆಗಳ ತಿದ್ದುಪಡಿ ಕುರಿತು ನಡೆದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

‘15ರಿಂದ 25 ವರ್ಷದವರೆಗೆ ಸೇವೆ ಮಾಡಿರುವ ಕಂದಾಯ ಅಧಿಕಾರಿಗಳು ಇದ್ದರೂ ಇಲಾಖೆ ನಿಯಮಗಳ ಬಗ್ಗೆ ತಿಳಿವಳಿಕೆ ಇರುವುದಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳಿಗೂ ತಹಶೀಲ್ದಾರ್, ಜಿಲ್ಲಾಧಿಕಾರಿ ಬಳಿಗೆ ಕಳುಸಿದರೆ ಹೇಗೆ. ಡಿಜಿಟಲ್ ವ್ಯವಸ್ತೆ ಇದ್ದರೂ ದಾಖಲೆಗಳಲ್ಲಿ ತಪ್ಪು‌ಗಳು ನಿರಂತರವಾಗುತ್ತಿವೆ. ಹೀಗಾದರೆ ಸಾರ್ವಜನಿಕರ ಪಾಡೇನು. ಸಾಯುವವರೆಗೂ ಇದೇ ಕತೆಯಾದರೂ ಬದುಕುವುದು ಯಾವ ಕಾಲ ಎಂಬಂತಹ ಸ್ಥಿತಿ ಕಚೇರಿಗೆ ಅಲೆದಾಡುತ್ತಿರುವವರಿಗೆ ಬರಬಾರದು’ ಎಂದು ಹೇಳಿದರು. ‌

‘ಕಂದಾಯ ಇಲಾಖೆಯಲ್ಲಿ ಹೆಚ್ಚು ಸಮಸ್ಯೆ ಇದೆ. ಅನಕ್ಷರಸ್ಥರು ಭೂಮಿ ಖರೀಸಿದ ಕ್ರಮ ಪತ್ರ ಎಲ್ಲೋ ಒಂದು ಕಡೆ ಇಟ್ಟಿರುತ್ತಾರೆ. ಸುಮಾರು ವರ್ಷಗಳ ನಂತರ ಅದನ್ನು ಹುಡುಕುತ್ತಾರೆ. ಖಾತೆ, ಪಹಣಿ ದಾಖಲಾಗಿರುವುದಿಲ್ಲ. ಮತ್ತೆ ಬೇರೆಯವರಿಗೆ ಮಾರಾಟದ ಗೊಂದಲ, ಕಂಪ್ಯೂಟರ್ ಪಹಣಿಯಲ್ಲಿ ತಪ್ಪು ಎಂದರೆ ಯಾರು ಜವಬ್ದಾರರು. ಅನೇಕ ಕೂಡು ಕುಟುಂಬಗಳಲ್ಲಿ ಖಾತೆ ಮಾಡಿಸಿರುವುದಿಲ್ಲ. ಮೈಚಳಿ ಬಿಟ್ಟು ಅಧಿಕಾರಿಗಳು ಕೆಲಸ ಮಾಡಬೇಕು’ ಎಂದರು. ‌

‘ಸರ್ಕಾರ ವೇತನ ಪಾವತಿಸುತ್ತಿದೆ. ಯಾರೂ ಉಚಿತವಾಗಿ ಕೆಲಸ ಮಾಡುತ್ತಿಲ್ಲ. ಬಡವರ ನೋವನ್ನು ಆರ್ಥ ಮಾಡಿಕೊಳ್ಳಿ. ಕೊಠಡಿಯಲ್ಲಿ ಕುಳಿತು ಕೆಲಸ ಮಾಡುವ ಬದಲು ಗ್ರಾಮಗಳ ಸರಹದ್ದಿಗೆ ಭೇಟಿ ನೀಡಿ ವೃದ್ಧಾಪ್ಯ, ವಿಧ‌ವಾ, ಅಂಗವಿಕಲರ ಸಾಮಾಜಿಕ ಭದ್ರತಾ ಯೋಜನೆಯಡಿ ಪ್ರೋತ್ಸಾಹಧನಕ್ಕೆ ಅವಕಾಶ ಮಾಡಿಕೊಡಿ’ ಎಂದರು.

ಕಾರ್ಯಾಗಾರ ಸಂಪನ್ಮೂಲ ವ್ಯಕ್ತಿ, ನಗರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ಮಾತನಾಡಿ, ‘ಪಹಣಿ ತಿದ್ದುಪಡಿಗೆ ಅಲೆದಾಡಿಸುವ ಅವಶ್ಯಕತೆ ಇಲ್ಲ. ತಹಶೀಲ್ದಾರ್ ತಿದ್ದುಪಡಿ ಮಾಡಲು ಅವಕಾಶವಿದೆ. ಕಂದಾಯ ಇಲಾಖೆಯಲ್ಲಿನ ಸಣ್ಣಪುಟ್ಟ ಎಡವಟ್ಟಿನಿಂದ ನ್ಯಾಯಾಲಯದಲ್ಲಿ ಪ್ರಕರಣಗಳ ಕಡತ ಬೆಳೆಯುತ್ತಲೇ ಇದೆ. ತಕ್ಷಣದ ಪರಿಹಾರವಿದ್ದರೂ ಷರಾ ಬರೆದು ಮೇಲಿನ ಅಧಿಕಾರಿಗಳಿಗೆ ಕಡತ ರವಾನಿಸುವುದು, ಅಮಾಯಕರನ್ನು ಅಲೆಸುವುದು ಬೇಡ. ಕಡತದ ಮೂಲ ಉದ್ದೇಶ ಅರ್ಥ ಮಾಡಿಕೊಂಡರೆ ಮಾತ್ರ ಸಮಸ್ಯೆ ತ್ವರಿತವಾಗಿ ಬಗೆಹರಿಯಲು ಸಾಧ್ಯ. ಇಲ್ಲದಿದ್ದರೆ ಈ ಕಂಪ್ಯೂಟರ್ ಯುಗದಲ್ಲೆ ಸಮಸ್ಯೆ ಪರಿಹಾರವಾಗಲು ತಲೆಮಾರು ಕಳೆದರೂ ಸಾಧ್ಯವಿಲ್ಲ. ಕಂದಾಯ ಇಲಾಖೆ ತಿದ್ದುಪಡಿ ನಿಯಮಗಳನ್ನು ತಿಳಿದುಕೊಳ್ಳಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯ್ಕ, ಹೊಸಕೋಟೆ ತಹಶೀಲ್ದಾರ್ ಗೀತಾ, ದೇವನಹಳ್ಳಿ ತಹಶೀಲ್ದಾರ್ ಅಜಿತ್ ಕುಮಾರ್ ರೈ, ನೆಲಮಂಗಲ ತಹಶೀಲ್ದಾರ್ ಎ.ಶ್ರೀನಿವಾಸ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು