ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡೆಲ್ ಅಧಿಕಾರಿ ನೇಮಕಕ್ಕೆ ವಿರೋಧ

Last Updated 11 ಸೆಪ್ಟೆಂಬರ್ 2020, 15:59 IST
ಅಕ್ಷರ ಗಾತ್ರ

ದೇವನಹಳ್ಳಿ: ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಯನ್ನು ವಿಶೇಷ ವಿಕಲ ಚೇತನರ ಯೋಜನೆಗಳ ನೋಡಲ್‌ ಅಧಿಕಾರಿಯನ್ನಾಗಿ ನೇಮಕ ಮಾಡಿರುವ ಸರ್ಕಾರದ ವಿರುದ್ಧ ಅಂಗವಿಕಲರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಆರ್.ಡಬ್ಲ್ಯೂ. ಮತ್ತು ವಿ.ಆರ್.ಡ್ಲ್ಯೂ ಒಕ್ಕೂಟದ ನಿರ್ದೇಶಕ ನಂಜುಂಡಪ್ಪ, ‘ಅಂಗವಿಕಲರ ಸಮಸ್ಯೆಗಳು ಮತ್ತು ಅಗತ್ಯತೆಗಳನ್ನು ಅಂಗವಿಕಲರೇ ಅರಿತು ಕ್ರಮ ಕೈಗೊಳ್ಳುವುದರಿಂದ ಸರ್ಕಾರ ಅಂಗವಿಕಲರನ್ನೇ ನೋಡಲ್ ಅಧಿಕಾರಿಯನ್ನಾಗಿ ಮತ್ತು ಕಾರ್ಯಕರ್ತರನ್ನಾಗಿ ನೇಮಕ ಮಾಡಿತ್ತು. ಪ್ರಸ್ತುತ ಸರ್ಕಾರ ಇದಕ್ಕೆ ವ್ಯತಿರಿಕ್ತವಾಗಿ ಇಲಾಖೆ ಅಧಿಕಾರಿಗಳನ್ನು ನೇಮಕ ಮಾಡಿ ಅಂಗವಿಕಲರ ಬದುಕಿಗೆ ಕೊಳ್ಳಿ ಇಟ್ಟಿದೆ’ ಎಂದು ದೂರಿದರು.

ಒಕ್ಕೂಟದ ನಿರ್ದೇಶಕ ಎಂ.ಮಾರಪ್ಪ ಮಾತನಾಡಿ, ‘ರಾಜ್ಯದಲ್ಲಿ 6,022 ಗ್ರಾಮ ಪಂಚಾಯಿತಿಗಳಲ್ಲಿ 4,906 ಅರ್ಹ ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿರುವ ಅಂಗವಿಕಲರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನಾಗಿ ಮತ್ತು 169 ತಾಲ್ಲೂಕು ಪಂಚಾಯಿತಿಗಳಲ್ಲಿ ಅರ್ಹ ಪದವೀಧರ ಅಂಗವಿಕಲರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನಾಗಿ ನೇಮಕ ಮಾಡಲಾಗಿದೆ. ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆ ಸೇರಿ ಒಟ್ಟು 5,150 ಅಂಗವಿಕಲರು ಮೂಲ ಸೌಲಭ್ಯವಿಲ್ಲದೆ, ತರಬೇತಿಯನ್ನೂ ಪಡೆಯದೆ, ಕೆಲಸ ನಿರ್ವಹಿಸಿ ಸರ್ಕಾರ ನೀಡದಿದ್ದರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿರುವಾಗಲೇ ಕೈಬಿಡಲು ಮುಂದಾಗಿರುವ ಕ್ರಮ ಸರ್ಕಾರದ ನಿರ್ಧಾರ ಅಂಗವಿಕಲರನ್ನು ಅವಮಾನಗೊಳಿಸುವುದಾಗಿದೆ’ ಎಂದರು.

ರಾಜ್ಯ ಸರ್ಕಾರ 2007-08ನೇ ಸಾಲಿನಲ್ಲಿ ವಿಕಲ ಚೇತನರನ್ನು ನೇಮಕ ಮಾಡಿಕೊಂಡಿದೆ. ಆರಂಭದಲ್ಲಿ ₹ 2 ಸಾವಿರ ಗೌರವಧನದ ನಂತರ ಇತ್ತೀಚೆಗೆ ₹ 6 ಸಾವಿರಕ್ಕೆ ಹೆಚ್ಚಿಸಿದೆ. ₹15 ಸಾವಿರ ನೀಡಬೇಕು ಎಂಬುದು ನಮ್ಮ ಮನವಿ. ನೀಡುವ ಗೌರವಧನ 6 ತಿಂಗಳಿಗೊಮ್ಮೆ ಮಾತ್ರ. ಎನ್.ಪಿ.ಆರ್.ಪಿ.ಡಿ ಮಾರ್ಗದರ್ಶಿ ನಿಯಮಗಳನ್ನು ಗಾಳಿಗೆ ತೂರಿ ನೇಮಕ ಮಾಡಿರುವ ಸರ್ಕಾರ ವಿಕಲರಿಗೆ ಮರಣ ಶಾಸನವನ್ನಾಗಿಸಿದೆ ಎಂದು ಆರೋಪಿಸಿದರು.

ಕಾರ್ಯಕರ್ತರಾದ ಆಂಜಿನಪ್ಪ, ವರದರಾಜು, ಶ್ರೀನಿವಾಸ್, ಕಿರಣ್, ನಾರಾಯಣಸ್ವಾಮಿ, ರತ್ನಮಾಲಾ, ನಂಜುಂಡೇಗೌಡ, ಜಯಲಕ್ಷ್ಮಿ, ಗಂಗಾಧರ್, ರೇಣುಕಮ್ಮ, ಬೀರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT