ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿರಾಶ್ರಿತರಿಗೆ ಸ್ಪಂದಿಸದ ಪ್ರಧಾನಿ ಮೋದಿ’

ಅನರ್ಹರ ಗೆಲುವಿಗೆ ಚಪ್ಪಾಳೆ ಹಾಸ್ಯಾಸ್ಪದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ ಟೀಕೆ
Last Updated 14 ಡಿಸೆಂಬರ್ 2019, 12:32 IST
ಅಕ್ಷರ ಗಾತ್ರ

ವಿಜಯಪುರ: ‘ಉತ್ತರ ಕರ್ನಾಟಕ ಭಾಗದಲ್ಲಿ ಜಲಪ್ರವಾಹ ಬಂದಾಗ ಸಾವಿರಾರು ಮಂದಿ ನಿರಾಶ್ರಿತರಾಗಿದ್ದರು. ಅವರ ಕಷ್ಟ ವಿಚಾರಿಸಲು, ನೆರೆ ವೀಕ್ಷಣೆ ಮಾಡಲು ಬಾರದ ಪ್ರಧಾನಿ ನರೇಂದ್ರ ಮೋದಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಶಾಸಕರನ್ನು ಅಭಿನಂದಿಸುವ ಸಮಯದಲ್ಲಿ ಎದ್ದು ನಿಂತು ಚಪ್ಪಾಳೆ ಹೊಡೆದಿರುವುದು ಹಾಸ್ಯಾಸ್ಪದ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ ಟೀಕಿಸಿದರು.

ಇಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ನೆರೆ ಹಾವಳಿಯಿಂದ ನಿರಾಶ್ರಿತರು ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದರು. ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಜನರಿಂದ ಆಯ್ಕೆಯಾಗಿದ್ದ ಪ್ರತಿನಿಧಿಗಳು ಸಹಾಯಕ್ಕೆ ಧಾವಿಸಲಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ನರೇಂದ್ರ ಮೋದಿ ಇತ್ತ ತಲೆ ಹಾಕಲಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಪರಿಹಾರಕ್ಕಾಗಿ ಮೊರೆ ಇಡುವ ಪರಿಸ್ಥಿತಿ ಎದುರಾಗಿತ್ತು’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಮೈತ್ರಿ ಸರ್ಕಾರ ಕೆಡವಲು ಶಾಸಕರಿಂದ ರಾಜೀನಾಮೆ ಕೊಡಿಸಿ, ಅವರನ್ನು ಮುಂಬೈ ಹೋಟೆಲ್‌ನಲ್ಲಿ ಪೋಷಣೆ ಮಾಡಿದ್ದ ಬಿಜೆಪಿ ನಾಯಕರು, ತಮಗೇನು ಗೊತ್ತಿಲ್ಲದಂತೆ ನಟಿಸಿ, ಉಪಚುನಾವಣೆಯಲ್ಲಿ ಅನರ್ಹರು ಗೆಲ್ಲುತ್ತಿದ್ದಂತೆ ಕಷ್ಟ ಕಾಲದಲ್ಲಿ ನಾವು ನೆರವಾಗದಿದ್ದರೂ ಜನ ನಮ್ಮ ಪಕ್ಷದವರನ್ನು ಗೆಲ್ಲಿಸಿದ್ದಾರೆ ಎಂದು ಪ್ರಧಾನಿ ಚಪ್ಪಾಳೆ ಹೊಡೆದರೇ. ಇದು ರಾಜ್ಯದ ಜನತೆಯನ್ನು ಅಣಕಿಸುವಂತಿದೆ’ ಎಂದು ವ್ಯಂಗ್ಯವಾಡಿದರು.

‘ರಾಜ್ಯದಲ್ಲಿ ಸ್ಥಿರ ಸರ್ಕಾರ ಬಂದರೆ ರೈತರ ₹ 1 ಲಕ್ಷ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದ ಬಿ.ಎಸ್.ಯಡಿಯೂರಪ್ಪ ಅವರು ಸಾಲ ಮನ್ನಾ ಮಾಡಬೇಕು. ಬಯಲು ಸೀಮೆ ಭಾಗಗಳಿಗೆ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT