ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಡಿ ಮುಕ್ತ ಗ್ರಾಮ: ಮನವಿ

ಪ್ರಜಾ ವಿಮೋಚನಾ ಚಳವಳಿ ಸಂಘಟನೆಯಿಂದ ಬೇಡಿಕೆ
Last Updated 12 ಫೆಬ್ರುವರಿ 2021, 3:31 IST
ಅಕ್ಷರ ಗಾತ್ರ

ಆನೇಕಲ್ : ಬಡವರಿಗೆ ಸರ್ಕಾರದಿಂದ ಮಂಜೂರಾಗಿರುವ ಜಮೀನು ಹಲವು ವರ್ಷಗಳಿಂದ ಪೋಡಿಯಾಗದೆ ಉಳಿದಿರುವುದರಿಂದ ರೈತರಿಗೆ ಸರ್ಕಾರದ ಸೌಲಭ್ಯ ದೊರೆಯುತ್ತಿಲ್ಲ. ಕೂಡಲೇ ಸರ್ಕಾರದಿಂದ ಮಂಜೂರಾಗಿರುವ ಜಮೀನು ಪೋಡಿ ಮಾಡಬೇಕು ಎಂದು ಪ್ರಜಾ ವಿಮೋಚನಾ ಚಳವಳಿ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್‌ ಕೃಷ್ಣಪ್ಪ ತಿಳಿಸಿದರು.

ಅವರು ಪಟ್ಟಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಪೋಡಿ ಮುಕ್ತ ಗ್ರಾಮ
ಗಳೆಂದು ಘೋಷಿಸುವಂತೆ ಸರ್ಕಾರ ಭೂಮಾಪನ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದ್ದರೂ 30-40 ವರ್ಷಗಳ ಹಿಂದೆ ಮಂಜೂರಾಗಿರುವ ಜಮೀನುಗಳು ಪೋಡಿಯಾಗಿಲ್ಲ. ಸರ್ವೆ ಸ್ಕೆಚ್‌ ಮತ್ತು ಹದ್ದುಬಸ್ತು ನಿಗದಿ ಮಾಡದಿರುವುದರಿಂದ ಪಹಣಿ ಕಾಲಂನಲ್ಲಿ ಮಾಲೀಕರ ಹೆಸರು ದಾಖಲಾಗುತ್ತಿಲ್ಲ. ಇದರಿಂದ ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ರೈತರಿಗೆ ದೊರೆಯಬೇಕಾದ ಯಾವುದೇ ಸೌಲಭ್ಯ ದೊರೆಯದೇ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ವೆ ಇಲಾಖೆ ಕಚೇರಿಗಳಿಗೆ ರೈತರು ನಿತ್ಯ ಓಡಾಡುವುದೇ ಕೆಲಸವಾಗಿದೆ. ಸರ್ಕಾರದ ಘೋಷಣೆಗೂ ಯಾವುದೇ ಕಿಮ್ಮತ್ತು ನೀಡದೆ ಅಧಿಕಾರಿಗಳು ಕೇವಲ ಡೆವಪಲರ್‌ಗಳು ಮತ್ತು ಶ್ರೀಮಂತರ ಜಮೀನು ಮಾತ್ರ ಭೂಮಾಪನ ಇಲಾಖೆ ಪೋಡಿ ಮಾಡುತ್ತಿದ್ದು ಬಡವರನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಅವರು ಹೇಳಿದರು.

ಜಿಗಣಿ ಹೋಬಳಿ ಕೊಪ್ಪ ಗ್ರಾಮದ ಸರ್ವೆ ನಂ.109ರ ಜಮೀನು ಅಳತೆ ಮಾಡಿ ಸ್ಕೆಚ್‌ ನೀಡುವಂತೆ ಸರ್ವೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಸೂಚನೆ ನೀಡಿದ್ದರೂ ಇದುವರೆಗೆ ಸ್ಕೆಚ್‌ ಮಾಡಿಲ್ಲ. ಮೇಲಧಿಕಾರಿ ಆದೇಶ ಪಾಲಿಸುತ್ತಿಲ್ಲ. ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ತಾಲ್ಲೂಕಿನ ಮೂರು ಮಂದಿ ಎಸಿಬಿ ದಾಳಿಗೆ ಸಿಲುಕಿರುವುದು ಇದಕ್ಕೆ ಸಾಕ್ಷಿಯಾಗಿದೆ. ಭೂಮಾಪನ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ರಾಮಗಳನ್ನು ಪೋಡಿ ಮುಕ್ತ ಮಾಡುವತ್ತಾ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಕಂದಾಯ ಸಚಿವ ಆರ್.ಅಶೋಕ್‌ ಅವರು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮಾಡಿ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸಬೇಕು ಎಂದು ಸೂಚನೆ ನೀಡಿದ್ದಾರೆ. ಆದರೆ, ಬೆಂಗಳೂರು ನಗರ ಜಿಲ್ಲಾಧಿಕಾರಿ ಇದುವರೆಗೂ ಒಂದು ಗ್ರಾಮ ವಾಸ್ತವ್ಯ ಮಾಡಿಲ್ಲ ಎಂದು ತಿಳಿಸಿದರು. ಗ್ರಾಮ ವಾಸ್ತವ್ಯ ಮಾಡುವ ಮೂಲಕ ಆಯಾ ಗ್ರಾಮಗಳ ಮತ್ತು ತಾಲ್ಲೂಕಿನ ಸಮಸ್ಯೆಗಳ ಪರಿಹಾರಕ್ಕೆ ವೇಗ ನೀಡಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಆನೇಕಲ್‌ ಟೌನ್‌ ಅಧ್ಯಕ್ಷ ಆರ್.ವೆಂಕಟೇಶ್, ಉಪಾಧ್ಯಕ್ಷ ಎ.ಲವ, ಕಾರ್ಯದರ್ಶಿಗಳಾದ ಸಬ್‌ಮಂಗಲ ರವಿ ಮತ್ತು ಆರ್‌.ಗಣೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT