ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ವಿವಿಗೆ ರಾಷ್ಟ್ರಪತಿ ಭೇಟಿ

ಕುಲಪತಿ ಡಾ.ಎಚ್.ಆರ್.ನಾಗೇಂದ್ರ ಅವರೊಂದಿಗೆ ಮಾತುಕತೆ
Last Updated 12 ಅಕ್ಟೋಬರ್ 2019, 14:20 IST
ಅಕ್ಷರ ಗಾತ್ರ

ಆನೇಕಲ್: ಜಿಗಣಿ ಸಮೀಪದ ಪ್ರಶಾಂತಿ ಕುಟೀರದಲ್ಲಿನ ಎಸ್‌-ವ್ಯಾಸ ಯೋಗ ವಿಶ್ವವಿದ್ಯಾಲಯಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪತ್ನಿ ಸವಿತಾ ಕೋವಿಂದ್‌ ಅವರ ಜತೆ ಭೇಟಿ ನೀಡಿ ವಿಶ್ವವಿದ್ಯಾಲಯದ ವಿಶೇಷತೆಗಳ ಬಗ್ಗೆ ಮಾಹಿತಿ ಪಡೆದರು.

ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಅವರು ಯೋಗ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಆರ್.ನಾಗೇಂದ್ರ ಅವರೊಂದಿಗೆ ಮಾತುಕತೆ ನಡೆಸಿದರು. ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡರು.

‘2017ರಲ್ಲಿ ನನ್ನ ಜತೆ ಪರಿಚಯವಾದುದನ್ನು ಸ್ಮರಿಸಿಕೊಂಡ ರಾಷ್ಟ್ರಪತಿಗಳು, ಯೋಗ ವಿಶ್ವವಿದ್ಯಾಲಯದ ಎಲ್ಲ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಬೇಕೆಂಬ ಹಂಬಲವಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಒಂದು ದಿನಪೂರ್ತಿ ವಿಶ್ವವಿದ್ಯಾಲಯದಲ್ಲಿ ಉಳಿಯುತ್ತೇನೆ. ಮಗಳು ಹಾಗೂ ಪತ್ನಿಯನ್ನು ಯೋಗ ತರಬೇತಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು’ ಎಂದು ಡಾ.ಎಚ್.ಆರ್.ನಾಗೇಂದ್ರ ತಿಳಿಸಿದರು.

ಮಾತುಕತೆಯ ನಂತರ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗ ‘ಅನ್ವೇಷಣಾ’ಕ್ಕೆ ಭೇಟಿ ನೀಡಿ ಸಂಶೋಧನೆಗಳ ಬಗ್ಗೆ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್‌ ಅವರಿಂದ ಮಾಹಿತಿ ಪಡೆದರು. ಅರ್ಧ ಗಂಟೆ ಕಾಲ ಶೀರ್ಷಾಸನದಲ್ಲಿ ವ್ಯಕ್ತಿಯೊಬ್ಬರು ನಿಂತಿದ್ದ ಬಗ್ಗೆ ತಿಳಿದುಕೊಂಡರು. ಯೋಗದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸುತ್ತಿರುವ ದೇಶದ ಏಕೈಕ ವಿಶ್ವವಿದ್ಯಾಲಯ ಎಸ್‌-ವ್ಯಾಸ ವಿಶ್ವವಿದ್ಯಾಲಯವಾಗಿದ್ದು ಆಧಾರಗಳ ಸಮೇತ ವಿಷಯ ಮಂಡಿಸಿ ಸಮಾಜಕ್ಕೆ ಕೊಡುಗೆ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಯೋಗಭ್ಯಾಸವನ್ನು ಕ್ರಮಬದ್ಧವಾಗಿ ಮಾಡುವುದರಿಂದ ರೋಗಗಳು ನಿವಾರಣೆಯಾಗುತ್ತವೆ ಹಾಗೂ ರೋಗ ಬರದಂತೆ ತಡೆಯಬಹುದು. ಕ್ರಮ ಬದ್ಧತೆ ತಪ್ಪಿದರೆ ಬೇರೆ ಕಾಯಿಲೆಗಳಿಗೂ ದಾರಿಯಾಗಬಹುದು. ಈ ಬಗ್ಗೆ ಪ್ರಾಚೀನ ಗ್ರಂಥಗಳಲ್ಲಿ ಹೇಳಲಾಗಿದೆ ಎಂದು ಡಾ.ಎಚ್.ಆರ್.ನಾಗೇಂದ್ರ ಅವರು ತಿಳಿಸಿದರು.

ಆರೋಗ್ಯಧಾಮದಲ್ಲಿ ಕ್ಯಾನ್ಸರ್‌ ಸೇರಿದಂತೆ ಎಲ್ಲ ಕಾಯಿಲೆಗಳಿಗೂ ಯೋಗದ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ಕಾಯಿಲೆಗಳಿಗೂ ಒಂದೇ ರೀತಿಯ ಯೋಗಾಸನ ಮಾಡದೇ ಕಾಯಿಲೆಗಳಿಗೆ ತಕ್ಕಂತೆ ಯೋಗಭ್ಯಾಸದ ವಿಧಾನಗಳನ್ನು ಸಂಶೋಧನೆ ಮಾಡಲಾಗಿದೆ. ವೈಜ್ಞಾನಿಕ ಸೂಕ್ಷ್ಮ ವಿಷಯಗಳು ಹಾಗೂ ಸಂಶೋಧನೆಗಳ ಬಗ್ಗೆ ರಾಷ್ಟ್ರಪತಿಗಳು ಆಸಕ್ತಿಯಿಂದ ವಿಚಾರಿಸಿದರು ಎಂದು ತಿಳಿಸಿದರು.

ಪ್ರಶಾಂತಿ ಕುಟೀರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಾಧ್ಯಮದವರೂ ಸೇರಿದಂತೆ ಜನಪ್ರತಿನಿಧಿಗಳನ್ನು ಕೇಂದ್ರದ ಆವರಣದಲ್ಲಿಯೇ ತಡೆಯಲಾಯಿತು. ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್‌, ಶಾಸಕ ಎಂ.ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜು, ಆರೋಗ್ಯಧಾಮದ ನಿರ್ದೇಶಕಿ ಡಾ.ಎಚ್.ಆರ್.ನಾಗರತ್ನ, ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಆರ್.ರಾಮಕೃಷ್ಣ, ರಾಮಚಂದ್ರ.ಜಿ.ಭಟ್‌, ಪ್ರೊ.ಕೆ.ಎಸ್.ಸುಬ್ರಮಣ್ಯ, ಅನ್ವೇಷಣಾ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎನ್.ಕೆ.ಮಂಜುನಾಥ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT