ಮಂಗಳವಾರ, ಅಕ್ಟೋಬರ್ 26, 2021
26 °C
ತೆರವುಗೊಳಿಸಲು ಅಧಿಕಾರಿಗಳ ಮೀನ ಮೇಷ: ನಾಗರಿಕರ ಆಕ್ರೋಶ

ಸರ್ಕಾರಿ ಕುಂಟೆ, ಕಾಲುವೆಗಳ ಒತ್ತುವರಿ

ಸಾಧಿಕ್ ಪಾಷ ಸೂಲಿಬೆಲೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ಪಟ್ಟಣದಲ್ಲಿರುವ ಸರ್ಕಾರಿ ಕುಂಟೆ ಸಂರಕ್ಷಿಸಲು ಅಧಿಕಾರಿಗಳು ಮುಂದಾಗಬೇಕು ಹಾಗೂ ಅಭಿವೃದ್ಧಿಪಡಿಸಲಾಗಿರುವ ಕುಂಟೆ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹವಾಗಿದೆ.

ಯಾವುದೇ ಒಂದು ಪಟ್ಟಣದ ಅಭಿವೃದ್ಧಿ ಆಗಬೇಕಾದರೆ ನೀರಿನ ಸಂಪನ್ಮೂಲ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ. ನೀರಿನ ಮೂಲ ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ಸ್ಥಳೀಯ ಅಧಿಕಾರಿಗಳು ಹಾಗೂ ಸಾರ್ವಜನಿಕರದ್ದಾಗಿದೆ. ಈ ನಿಟ್ಟಿನಲ್ಲಿ ಜಲಮೂಲ ರಕ್ಷಿಸಲು ಅಧಿಕಾರಿಗಳು ಮುಂದಾಗಬೇಕಾಗಿದೆ.

ಸೂಲಿಬೆಲೆ ಹೋಬಳಿ ಕೇಂದ್ರ, ಹೊಸಕೋಟೆ ತಾಲ್ಲೂಕಿನಲ್ಲಿ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವಾಗಿದೆ. ತಾಲ್ಲೂಕಿನಲ್ಲಿಯೇ ಒಂದೇ ಗ್ರಾಮದ ಪಂಚಾಯಿತಿ ಸದಸ್ಯರನ್ನು ಹೊಂದಿರುವಂತಹ ಗ್ರಾಮ ಪಂಚಾಯಿತಿ ಸಹ ಆಗಿದೆ. 2011 ಜನಗಣತಿ ಪ್ರಕಾರ ಸುಮಾರು 10ಸಾವಿರ ಜನಸಂಖ್ಯೆ ಹೊಂದಿದೆ. ಪ್ರಸ್ತುತ ಮತ್ತಷ್ಟು ಜನಸಂಖ್ಯೆ ವೃದ್ಧಿಸಿರುವುದರಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರುವ ಎಲ್ಲ ರೀತಿ ಅರ್ಹತೆ ಹೊಂದಿರುವ ಪಟ್ಟಣವಾಗಿರುವ ಇಲ್ಲಿ ಜಲಮೂಲ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಆದರೆ, ಪಟ್ಟಣದಲ್ಲಿರುವ ಬಹುತೇಕ ನೀರಿನ ಮೂಲಗಳಾದ ದೊಡ್ಡ ಕಾಲುವೆ, ರಾಜಕಾಲುವೆ ಹಾಗೂ ಕುಂಟೆಗಳು ಖಾಸಗಿ ವ್ಯಕ್ತಿಗಳಿಂದ ಒತ್ತುವರಿಯಾಗಿದೆ. ಸರ್ಕಾರಿ ಕಡತಗಳ ದಾಖಲೆಗಳಲ್ಲಿ ಮಾತ್ರ ಉಳಿದುಕೊಂಡಿದೆ. ಸರ್ಕಾರಿ ಕುಂಟೆ, ಕಾಲುವೆ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಮೀನ ಮೇಷ ಎಣಿಸುತ್ತಿದ್ದಾರೆ ಎನ್ನುತ್ತಾರೆ ಸಾರ್ವಜನಿಕರು.

ಸರ್ವೆ ನಂಬರ್ 381 ರ ಸರ್ಕಾರಿ ಕುಂಟೆ ಒತ್ತುವರಿ: ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿರುವ ಸರ್ವೆ ನಂಬರ್ 381 ರಲ್ಲಿ 16ಗುಂಟೆ ವಿಸ್ತೀರ್ಣ ಹೊಂದಿರುವ ಸರ್ಕಾರಿ ಕುಂಟೆ ಒತ್ತುವರಿಯಾಗಿದೆ. ಕುಂಟೆ ಇದ್ದ ಸ್ಥಳದಲ್ಲಿ ಗಿಡಗಂಟಿ ಬೆಳೆದಿದೆ. ಸಾರ್ವಜನಿಕರು ಓಡಾಡುವ ರಸ್ತೆಯಾಗಿ ಮಾರ್ಪಟ್ಟಿದ್ದು, ಕುಂಟೆ ಕುರುಹು ಕಾಣದ ರೀತಿಯಲ್ಲಿ ಮೈದಾನವಾಗಿ ಮಾರ್ಪಟ್ಟಿದೆ.

ಹಲವು ವರ್ಷಗಳ ಹಿಂದೆಯೇ ಕುಂಟೆ ಒತ್ತುವರಿಯಾಗಿದ್ದರೂ ಇಲ್ಲಿವರೆಗೂ ಕುಂಟೆ ಒತ್ತುವರಿ ತೆರವುಗೊಳಿಸಲಾಗಿಲ್ಲ. ಇದರ ಜತೆಗೆ ಕುಂಟೆಗೆ ನೀರಿನ ಮೂಲ ಒದಗಿಸುತ್ತಿದ್ದ ದೊಡ್ಡ ಕಾಲುವೆ ಒತ್ತುವರಿಯಾಗಿ ನಶಿಸಿ ಹೋಗಿದೆ.

ಕಲ್ಯಾಣಿಯಲ್ಲಿ ಕಲುಷಿಯ ನೀರು: ಸೂಲಿಬೆಲೆ ಗಿಡ್ಡಪ್ಪನಹಳ್ಳಿ ಮುಖ್ಯ ರಸ್ತೆ ಸಮೀಪ ಇರುವ ಪುರಾತನ ಕಲ್ಯಾಣಿಯೂ ಕೊಳಚೆ ತೊಟ್ಟಿಯಾಗುತ್ತಿದೆ. ಪಟ್ಟಣದ ಮಧ್ಯಭಾಗ ಹಾದು ಹೋಗುವ ರಾಜಕಾಲುವೆಯಲ್ಲಿ ಹರಿಯುವ ಪಟ್ಟಣದ ನೀರು ಪಂಚಾಯಿತಿ ಅವೈಜ್ಞಾನಿಕ ಕಾಲುವೆ ಕಾಮಗಾರಿಯಿಂದ ಮಳೆಗಾಲದಲ್ಲಿ ಕಲ್ಯಾಣಿ ಒಡಲು ಸೇರುತ್ತಿದೆ.

ಸರ್ಕಾರಿ ಕುಂಟೆಗೆ ಬೇಲಿ ಹಾಕಿ
ಸುಮಾರು ಅರ್ಧ ಎಕರೆ ವಿಸ್ತೀರ್ಣ ಹೊಂದಿರುವ ಸರ್ವೆ ನಂಬರ್ 375ರ ಸರ್ಕಾರಿ ಕುಂಟೆ ಗ್ರಾಮ ಪಂಚಾಯಿತಿ 2017-18ರಲ್ಲಿ ಸುಮಾರು ₹9.97ಲಕ್ಷ ಅಭಿವೃದ್ಧಿಪಡಿಸಿತ್ತು. ಈ ಕುಂಟೆಗೆ ನೀರಿನ ಮೂಲ ಒದಗಿಸುತ್ತಿದ್ದ ಕಾಲುವೆ ಒತ್ತುವರಿಯಾಗಿದೆ. ಪಟ್ಟಣದ ಮಾರುತಿನಗರದ ಮನೆಗಳ ಕೊಳಚೆ ನೀರು ಹರಿದು ಬರುತ್ತಿರುವುದರಿಂದ ಇಡೀ ಕುಂಟೆ ನೀರು ಕಲುಷಿತವಾಗಿದೆ. ಕುಂಟೆಯಲ್ಲಿ ಗಿಡಗಂಟೆ ಬೆಳೆದು ನೀರು ಹಸಿರು ಬಣ್ಣಕ್ಕೆ ತಿರುಗಿದೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಕುಂಟೆಯಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಕುಂಟೆ ಅಳತೆ ಮಾಡಿಸಿ, ತಡೆಗೋಡೆ ನಿರ್ಮಿಸಲು ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಲೋಕೇಶ್

ಪ್ಲಾಸ್ಟಿಕ್‌ ಸೇರ್ಪಡೆ
ಗ್ರಾಮ ಪಂಚಾಯಿತಿ ರಾಜಕಾಲುವೆ ಅಭಿವೃದ್ಧಿಪಡಿಸಲು ರೂಪಿಸಿರುವ ಯೋಜನೆಯಲ್ಲಿ ಕಾಲುವೆಯ ಮಧ್ಯಭಾಗದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದಿರುವುದರಿಂದ ಕೊಳಚೆ ನೀರು ಕಲ್ಯಾಣಿ ಒಡಲು ಸೇರುತ್ತಿದ್ದು, ಕಸ ಮತ್ತು ಪ್ಲಾಸ್ಟಿಕ್ ವಸ್ತುಶೇಖರಣೆಯಾಗುತ್ತಿದೆ.
-ಫಾರೂಕ್, ಸ್ಥಳೀಯ ನಿವಾಸಿ

ಸ್ವಚ್ಛತೆ ನಿರ್ಲಕ್ಷ್ಯ
ಗ್ರಾಮ ಪಂಚಾಯಿತಿ ಇಚೆಗೆ ಕಲ್ಯಾಣಿ ಸ್ವಚ್ಛಗೊಳಿಸಲು ಸುಮಾರು ₹20 ಸಾವಿರ ವೆಚ್ಚ ಮಾಡಿದೆ. ಕಾಲುವೆ ದುರಸ್ತಿಗೊಳಿಸದ ಕಾರಣ, ಗ್ರಾಮ ಪಂಚಾಯಿತಿ ವೆಚ್ಚ ಮಾಡಿದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
-ಸುಂದರ್, ಗ್ರಾ.ಪಂ.ಪಿಡಿಒ

ವರದಿ ಸಲ್ಲಿಕೆ
ಸರ್ವೆ ನಂಬರ್ 381ರ ಸರ್ಕಾರಿ ಕುಂಟೆ ಒತ್ತುವರಿ ಆಗಿರುವುದರ ಬಗ್ಗೆ ತಹಶೀಲ್ದಾರ್ ಅವರಿಗೆ ವರದಿ ಮಾಡಲಾಗಿದೆ. ಅಳತೆ ಮಾಡಲು ಸರ್ವೆ ಇಲಾಖೆಗೆ ಪತ್ರ ಬರೆಯಲಾಗಿದೆ. ಸರ್ವೆ ಕಾರ್ಯ ಮುಗಿದ ನಂತರ ಒತ್ತುವರಿ ತೆರವುಗೊಳಿಸಲಾಗುವುದು.
-ನ್ಯಾನ ಮೂರ್ತಿ, ಗ್ರಾಮ ಲೆಕ್ಕಿಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.