ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡಿಗರ ಸ್ವಾಭಿಮಾನಕ್ಕಾಗಿ ಜೈಲಿಗೆ ಹೋಗಲು ಸಿದ್ಧ: ಡಿ.ಕೆ.ಸುರೇಶ್

Published 3 ಫೆಬ್ರುವರಿ 2024, 16:22 IST
Last Updated 3 ಫೆಬ್ರುವರಿ 2024, 16:22 IST
ಅಕ್ಷರ ಗಾತ್ರ

ಆನೇಕಲ್ : ‘ದೇಶ ವಿಭಜನೆ ಮಾಡಿ ಎಂದು ನಾನು ಎಲ್ಲಿಯೂ ಹೇಳಿಲ್ಲ. ಬಿಜೆಪಿಯವರು ಪೊಲೀಸ್‌ ಠಾಣೆಗೆ ದೂರು ನೀಡಿದರೆ ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿಯಲು ಜೈಲಿಗೆ ಹೋಗಲೂ ಸಿದ್ಧ’ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ ಸವಾಲು ಹಾಕಿದ್ದಾರೆ.

‘ಕೇಂದ್ರ ಸರ್ಕಾರದ ತಾರತಮ್ಯ ಧೊರಣೆ ವಿರುದ್ಧ ದನಿ ಎತ್ತಿದ್ದೇನೆ. ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಕೇಂದ್ರದ ತಾರತಮ್ಯ ನೀತಿಯ ವಿರುದ್ಧ ಧ್ವನಿ ಎತ್ತಿವೆ. ಕೇಂದ್ರದ ಈ ಧೋರಣೆ ದೇಶದ ಏಕತೆ ಮತ್ತು ಒಕ್ಕೂಟ ವ್ಯವಸ್ಥೆಗೆ ಮಾರಕ’ ಎಂದು  ವಾಗ್ದಾಳಿ ನಡೆಸಿದರು.

ಬನ್ನೇರುಘಟ್ಟದಲ್ಲಿ ಶನಿವಾರ ಕಾವೇರಿ ಪೈಪ್‌ಲೈನ್‌ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಲತಾಯಿ ಧೊರಣೆ ಕೈಬಿಡುವಂತೆ ಕೇಂದ್ರ ಸರ್ಕಾರಕ್ಕೆ ಹೇಳಿದ್ದೇನೆಯೇ ಹೊರತು, ದೇಶ ವಿಭಜನೆಯ ಬಗ್ಗೆ ಮಾತನಾಡಿಲ್ಲ’ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.

‘ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನದಲ್ಲಿ ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಈ ಬಗ್ಗೆ ಕನ್ನಡಿಗರ ಧ್ವನಿಯಾಗಿ ಮಾತನಾಡಿದ್ದೇನೆ. ಆದರೆ, ನನ್ನ ಹೇಳಿಕೆಯನ್ನು ದೇಶ ವಿಭಜನೆ ಎಂದು ತಿರುಚಲಾಗಿದೆ’ ಎಂದು ಸುರೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ತ್ರಿಭಾಷಾ ನೀತಿ ಜಾರಿಯಲ್ಲಿದೆ. ದಕ್ಷಿಣ ಭಾರತದವರು ತೃತೀಯ ಭಾಷೆಯಾಗಿ ಹಿಂದಿ ಕಲಿಯುತ್ತಿದ್ದಾರೆ. ಆದರೆ ಉತ್ತರ ಭಾರತದವರು ತೃತೀಯ ಭಾಷೆಯಾಗಿ ದಕ್ಷಿಣ ಭಾರತದ ಯಾವ ಭಾಷೆಯನ್ನೂ ಕಲಿಯುತ್ತಿಲ್ಲ. ದಕ್ಷಿಣ ಭಾರತದ ಮೇಲೆ ಹಿಂದಿ ಹೇರಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹತ್ತು ಗ್ಯಾರಂಟಿ ನೀಡಲು ಸಿದ್ಧ: ‘ಕರ್ನಾಟಕದಿಂದ ಪ್ರತಿ ವರ್ಷ ₹4ಲಕ್ಷ ಕೋಟಿ ತೆರಿಗೆ ಹಣ ಸಂಗ್ರಹವಾಗುತ್ತಿದೆ. ಆದರೆ ಕರ್ನಾಟಕಕ್ಕೆ ಕೇವಲ ₹50 ಸಾವಿರ ಕೋಟಿ ಅನುದಾನ ನೀಡಲಾಗುತ್ತಿದೆ. ತೆರಿಗೆ ಸಂಗ್ರಹದ ಕರ್ನಾಟಕ ಪಾಲು ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ರಾಜ್ಯದ ಆದಾಯದ ಶೇ.17ರಷ್ಟು ದೊರೆಯುತ್ತಿದೆ. ತೆರಿಗೆ ಆದಾಯದ ಶೇ.337 ರಷ್ಟು ಉತ್ತರ ಪ್ರದೇಶಕ್ಕೆ ಮತ್ತು ಶೇ.430ರಷ್ಟು ಬಿಹಾರ ರಾಜ್ಯಕ್ಕೆ ಅನುದಾನ ನೀಡಲಾಗುತ್ತಿದೆ. ಈ ಅನ್ಯಾಯವನ್ನು ಸರಿಪಡಿಸಿ ಕಾನೂನು ಬದ್ಧವಾಗಿ ರಾಜ್ಯಕ್ಕೆ ದೊರೆಯಬೇಕಾದ ಪಾಲನ್ನು ನೀಡಬೇಕು’ ಎಂದು ಒತ್ತಾಯ ಮಾಡಿದ್ದೇನೆ’ ಎಂದು ಸುರೇಶ್‌ ಹೇಳಿದರು.

‘ಕೇಂದ್ರ ಸರ್ಕಾರ ಕರ್ನಾಟಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗಲೂ ಮೇಕೆದಾಟು ಯೋಜನೆಗೆ ಅನುಮತಿ ನೀಡಿಲ್ಲ. ಕಾಂಗ್ರೆಸ್‌ ಸರ್ಕಾರವಿದ್ದಾಗಲೂ ನೀಡುತ್ತಿಲ್ಲ. ಪ್ರತಿಯೊಂದಕ್ಕೂ ಕೊಕ್ಕೆ ಹಾಕಲಾಗುತ್ತಿದೆ. ನಮ್ಮ ತೆರಿಗೆಯ ಭಾಗವನ್ನು ಸರಿಯಾಗಿ ನೀಡಿದರೆ ರಾಜ್ಯವನ್ನು ಸಿಂಗಾಪುರ, ಅಮೆರಿಕ  ಮಾಡಬಹುದು. ಆದರೆ ಕೇಂದ್ರದ ತಾರತಮ್ಯ ನೀತಿಯಿಂದಾಗಿ ರಾಜ್ಯದಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿಗೆ ತೊಡಕಾಗಿದೆ’ ಎಂದು ಹೇಳಿದರು.

‘ಗ್ಯಾರಂಟಿಗಳನ್ನು ನೀಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿಯವರು ಹೇಳುತ್ತಿದ್ದರು. ಆದರೆ ರಾಜ್ಯದ ತೆರಿಗೆ ಪಾಲಿನಲ್ಲಿಯೇ ಇಂತಹ ಐದಲ್ಲ ಹತ್ತು ಗ್ಯಾರಂಟಿಗಳನ್ನು ನೀಡಬಹುದಾಗಿದೆ. ಸಮಪಾಲು ಕೇಳುವುದು ನಮ್ಮ ಹಕ್ಕು ಭಿಕ್ಷೆಯಲ್ಲ. ಕೂಲಿ ಕಾರ್ಮಿಕರಿಂದಲೂ ಜಿಎಸ್‌ಟಿ ಸಂಗ್ರಹ ಮಾಡಲಾಗುತ್ತಿದೆ. ಆದರೆ ರಾಜ್ಯ ನೆರವು ನೀಡಲು ಕೇಂದ್ರಕ್ಕೆ ಮನಸ್ಸಿಲ್ಲ. ರಾಜ್ಯದ 224 ತಾಲ್ಲೂಕುಗಳಲ್ಲಿ ಬರಗಾಲವಿದ್ದರೂ ಬರ ಪರಿಹಾರ ನೀಡಿಲ್ಲ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ, ಮಂತ್ರಿಗಳು, ಅಧಿಕಾರಿಗಳು ಮನವಿಗಳನ್ನು ಸಲ್ಲಿಸಿದರೂ ಕೇಂದ್ರದಿಂದ ಸ್ಪಂದನೆಯಿಲ್ಲ ’ ಎಂದು ಅವರು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT