ಚರಿತ್ರಾರ್ಹರ ಕೃತಿ ರಚನೆಗೆ ಸಂಶೋಧನೆ ಅಗತ್ಯ

ಶನಿವಾರ, ಜೂಲೈ 20, 2019
27 °C

ಚರಿತ್ರಾರ್ಹರ ಕೃತಿ ರಚನೆಗೆ ಸಂಶೋಧನೆ ಅಗತ್ಯ

Published:
Updated:
Prajavani

ದೇವನಹಳ್ಳಿ: ನೆಲವನ್ನಾಳಿದ ರಾಜರ ಮೂಲವನ್ನು ಹುಡುಕಿ ಆಳವಾದ ಸಂಶೋಧನೆ ಮಾಡಿದಾಗ ಚರಿತ್ರಾರ್ಹರ ಕೃತಿ ರಚನೆಗೆ ಅರ್ಹವಾಗಲಿದೆ ಎಂದು ಇತಿಹಾಸ ತಜ್ಞ ಗೋಪಾಲಗೌಡ ಕಲ್ಪಮಂಜಲಿ ಅಭಿಪ್ರಾಯಪಟ್ಟರು.

ಇಲ್ಲಿನ ಕೋಡಿಮಂಚೇನಹಳ್ಳಿ ಬಡಾವಣೆಯಲ್ಲಿ ಪ್ರೊ.ಎಚ್.ಗವಿಸಿದ್ಧಯ್ಯ ಬರೆದಿರುವ ‘ಆವತಿ ನಾಡ ಪ್ರಭು ರಣಭೈರೇಗೌಡ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

1508ರ ಕುರುವತ್ತಿ ಶಾಸನದಲ್ಲಿ ಉಲ್ಲೇಖಿಸಿರುವಂತೆ ಹೊಸಕೋಟೆ, ಗುಡಿಬಂಡೆ, ತುಮಕೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ, ದೊಡ್ಡಬಳ್ಳಾಪುರ, ಯಲಹಂಕ ಪ್ರಾಂತ್ಯವನ್ನು ಆವತಿ ನಾಡಪ್ರಭುಗಳು ಆಳ್ವಿಕೆ ನಡೆಸುತ್ತಿದ್ದರು, 320 ವರ್ಷಗಳ ಕಾಲ ನಾಡಪ್ರಭುಗಳು ಆಳ್ವಿಕೆ ನಡೆಸಿರುವ ಬಗ್ಗೆ ಅನೇಕ ಶಾಸನಗಳಲ್ಲಿ ಉಲ್ಲೇಖವಿದೆ ಎಂದು ಅವರು ಹೇಳಿದರು.

‘ಕೆಲ ಇತಿಹಾಸಕಾರರು ಸೂಕ್ತ ಮಾಹಿತಿಯನ್ನು ತಿಳಿದುಕೊಳ್ಳದೆ ತಮ್ಮ ಸ್ವಾರ್ಥಕ್ಕಾಗಿ ತಿರುಚಿ ಕಲ್ಪನೆಯಿಂದ ಪುಸ್ತಕಗಳನ್ನು ಬರೆದಿರುವುದು ದುರದೃಷ್ಟಕರ’ ಎಂದು ವಿಷಾದಿಸಿದರು.

ಸಾಹಿತಿ ಮಹಾಲಿಂಗಯ್ಯ ಮಾತನಾಡಿ, ಯಾವುದೇ ಒಂದು ಇತಿಹಾಸಕಾರ ಪುಸ್ತಕ ಬರೆಯುವ ಮೊದಲು ಚರಿತ್ರೆಯ ನಾಯಕರ ಬಗ್ಗೆ ವಿಮರ್ಶೆಗಳು, ಪರಸ್ಪರ ತಜ್ಞ ಇತಿಹಾಸಕಾರರೊಂದಿಗೆ ಚರ್ಚೆಯಾಗಬೇಕು, ಅಧ್ಯಯನ ನಡೆಸಬೇಕು. ಇತಿಹಾಸ ಭವಿಷ್ಯದ ಮೆಟ್ಟಿಲು, ವಾಸ್ತವ ಅರಿತು ಬರೆಯಬೇಕೆ ಹೊರತು ಊಹೆ ಮಾಡಿ ಬರೆಯುವುದು ತಪ್ಪಾಗುತ್ತದೆ ಎಂದು ಹೇಳಿದರು.

ಸಾಹಿತಿ ಪ್ರೊ. ಗವಿಸಿದ್ಧಯ್ಯ ಮಾತನಾಡಿ, ‘ಈವರೆಗೆ 19 ಪುಸ್ತಕಗಳನ್ನು ಬರೆದಿದ್ದೇನೆ, ಪ್ರಸ್ತುತ ಬಿಡುಗಡೆಯಾಗಿರುವ ಇತಿಹಾಸಕಾರ ಪುಸ್ತಕಕ್ಕಾಗಿ ಅನೇಕ ಕಡೆ ತಿರುಗಾಡಿದ್ದೇನೆ. ಬೇರೆಯವರು ಬರೆದಿರುವ ಪುಸ್ತಕ ಅಧ್ಯಯನ ಮಾಡಿ ಅನೇಕ ಘಟನೆಗಳನ್ನು ಮನವರಿಕೆ ಮಾಡಿಕೊಂಡು ಬರೆದಿದ್ದೇನೆ’ ಎಂದು ಹೇಳಿದರು.

ಮುಖಂಡ ಬಿ.ಕೆ.ಶಿವಪ್ಪ, ಪುರಸಭೆ ಸದಸ್ಯ ಎಚ್. ನಾಗೇಶ್ ಮಾತನಾಡಿದರು. ನಿವೃತ್ತ ಶಿಕ್ಷಕ ಬಿಟ್ಟಸಂದ್ರ ಗುರುಸಿದ್ಧಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಬುಳ್ಳಹಳ್ಳಿ ರಾಜಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !