ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತಕ್ಕೆ ನಿಯಮ ಉಲ್ಲಂಘನೆಯೇ ಕಾರಣ

ನ್ಯಾಯಾಧೀಶ ಎ.ಹರೀಶ್ ಅಭಿಮತ
Last Updated 18 ಡಿಸೆಂಬರ್ 2019, 13:11 IST
ಅಕ್ಷರ ಗಾತ್ರ

ದೇವನಹಳ್ಳಿ: ‘ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಎಚ್ಚರ ವಹಿಸಿ, ಕಡ್ಡಾವಾಗಿ ಪಾಲನೆ ಮಾಡಬೇಕು’ ಎಂದು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಹರೀಶ್ ಹೇಳಿದರು.

ಇಲ್ಲಿನ ಪ್ರಾದೇಶಿಕ ಸಹಾಯಕ ಸಾರಿಗೆ ಇಲಾಖೆ ಕಚೇರಿ ಆವರಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ವಕೀಲರ ಸಂಘ ಹಾಗೂ ಪ್ರಾದೇಶಿಕ ಸಹಾಯಕ ಸಾರಿಗೆ ಇಲಾಖೆ ಸಹಭಾಗಿತ್ವದಲ್ಲಿ ವಾಹನ ಚಾಲಕರಿಗೆ ನಡೆದ ಕಾನೂನು ಸಾಕ್ಷರತಾ ಮತ್ತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೋಟಾರು ವಾಹನ ಅಪಘಾತ ಸಂಬಂಧದ ಪರಿಹಾರದ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ರಸ್ತೆ ಸುರಕ್ಷತಾ ನಿಯಮ ಉಲ್ಲಂಘನೆ ಮುಖ್ಯ ಕಾರಣ. ಚಾಲಕ ಮತ್ತು ಇತರ ವ್ಯಕ್ತಿಗಳು ಅಪಘಾತದಲ್ಲಿ ಮೃತಪಟ್ಟರೆ ಅವರನ್ನು ಅವಲಂಬಿತ ಕುಟುಂಬದ ಸ್ಥಿತಿ ಏನಾಗಬಹುದು ಎಂಬುದರ ಅರಿವು ವಾಹನ ಚಾಲಕರಿಗೆ ಇರಬೇಕು. ಅಪಘಾತ ಪ್ರಕರಣದಲ್ಲಿ ಒಂದಷ್ಟು ಪರಿಹಾರಸಿಗಬಹುದು. ಪ್ರಾಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದರ ಬಗ್ಗೆ ವಾಹನ ಚಾಲಕರು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಅಪಘಾತ ಪ್ರಕರಣ ಸಾವಿನೊಂದಿಗೆ ಮಾತ್ರ ಅಂತ್ಯವಾಗುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಮಾರಣಾಂತಿಕ ಪೆಟ್ಟುಗಳೂ ಬೀಳುತ್ತವೆ. ಅಂತಹ ಗಾಯಾಳು ಕೋಮಾ ಸ್ಥಿತಿ ತಲುಪಿ ಲಕ್ಷಾಂತರ ಆರ್ಥಿಕ ವೆಚ್ಚದ ಜೊತೆಗೆ ಚಿಕಿತ್ಸೆಗೆ ಸ್ಪಂದಿಸದೆ ಮರಣ ಹೊಂದುವ ಸಾಧ್ಯತೆಗಳೂ ಇವೆ. ಕೆಲ ಘಟನೆಗಳಲ್ಲಿ ಶಾಶ್ವತ ಅಂಗವಿಕಲತೆಗೆ ಒಳಗಾಗಿ ಜೀವನ ಪರ್ಯಂತ ಜೀವಂತ ಶವವಾಗಿ ಜೀವನ ನಡೆಸಬೇಕಾಗುತ್ತದೆ’ ಎಂದು ಹೇಳಿದರು.

‘ವಾಹನಗಳಿಗೆ ವಿಮೆ ಕಡ್ಡಾಯವಾಗಿ ಮಾಡಿಸಿ, ಚಾಲಕರೂ ವೈಯಕ್ತಿಕ ವಿಮೆ ಮಾಡಿಸಿದರೆ ಅನುಕೂಲ. ಅನೇಕ ಪ್ರಕರಣಗಳಲ್ಲಿ ಸೂಕ್ತ ದಾಖಲೆ ಇಲ್ಲದೆ ಅರ್ಹರಿಗೆ ಪರಿಹಾರ ಸಿಗುತ್ತಿಲ್ಲ’ ಎಂದು ಹೇಳಿದರು.

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ಉಮೇಶ್ ಮಾತನಾಡಿ, ‘ರಸ್ತೆ ಸುರಕ್ಷತಾ ನಿಯಮ ಪಾಲನೆ ಮತ್ತು ವಾಹನ ಸುರಕ್ಷತೆ ಅತಿ ಮುಖ್ಯ. ವಾಹನಗಳನ್ನು ಸಕಾಲದಲ್ಲಿ ಪರೀಕ್ಷೆಗೆ ಒಳಪಡಿಸಿ ವಾಹನಗಳ ಕಾರ್ಯಕ್ಷಮತೆ ತಿಳಿದುಕೊಳ್ಳಬೇಕು. ಮಾಲಿನ್ಯ ತಪಾಸಣೆ ಪ್ರಮಾಣ ಪತ್ರ, ಚಾಲನಾ ಮತ್ತು ವಾಹನ ಪರವಾನಗಿ ಕಡ್ಡಾಯವಾಗಿ ಹೊಂದಿರಬೇಕು’ ಎಂದರು.

‘ವೇಗದ ಚಾಲನೆ, ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದೆ ವಾಹನ ಚಾಲನೆ, ಮದ್ಯ ಸೇವಿಸಿ ಚಾಲನೆ ಮಾಡಿದರೆ ದುಬಾರಿ ದಂಡ ವಿಧಿಸಲಾಗುತ್ತದೆ. ವಾಹನ ಚಾಲಕರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಚಾಲನೆ ಸಂದರ್ಭದಲ್ಲಿ ಏಕಾಗ್ರತೆ ಮುಖ್ಯ. ಬಸ್, ವ್ಯಾನ್ ಮುಂತಾದ ವಾಹನಗಳಲ್ಲಿನ ಪ್ರಯಾಣಿಕರ ಜೀವ ಚಾಲಕನ ಕೈನಲ್ಲಿರುತ್ತದೆ. ಆಟೊಗಳು ಕೂಡ ಇದಕ್ಕೆ ಹೊರತಲ್ಲ. ಮದ್ಯ ಸೇವಿಸಿ ಇತರ‌ ವಿವಿಧ ಪ್ರಕರಣಗಳಲ್ಲಿ ನಿಯಮ ಉಲ್ಲಂಘಿಸಿದವರ ಚಾಲನಾ ಪರವಾನಗಿ ರದ್ದುಗೊಳಿಸಲಾಗುತ್ತದೆ. ಇದು ಚಾಲಕರಿಗೆ ಎಚ್ಚರಿಕೆಯ ಸಂದೇಶ’ ಎಂದು ಹೇಳಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಯೋಗೇಶ್ವರಿ, ವಕೀಲರ ಸಂಘ ತಾಲ್ಲೂಕು ಅಧ್ಯಕ್ಷ ಆರ್. ಮಾರೇಗೌಡ, ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಮೋಹನ್ ಗಾಂವಕರ್, ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT