ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ನಾಳೆ ಗ್ರಾಮೀಣ ಭಾರತ ಬಂದ್‌

ಕುಸಿದು ಹೋಗಿರುವ ಆರ್ಥಿಕತೆ ಮರೆಮಾಚಲು ಅನಗತ್ಯ ಕಾಯ್ದೆಗಳ ಜಾರಿ
Last Updated 6 ಜನವರಿ 2020, 13:04 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ದೇಶದಲ್ಲಿ ಆರ್ಥಿಕ ಪ್ರಗತಿ ತೀವ್ರವಾಗಿ ಕುಸಿತವಾಗಿದೆ. ಇದನ್ನು ಮರೆಮಾಚುವ ಸಲುವಾಗಿಯೇ ಪೌರತ್ವ ತಿದ್ದುಪಡಿ, ಎನ್‌ಆರ್‌ಸಿ ಇಂತಹ ಕಾಯ್ದೆ ಜಾರಿಗೆ ತಂದು ಸತ್ಯವನ್ನು ಮರೆಮಾಚಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎನ್‌.ಆರ್‌.ಪ್ರಸನ್ನ ಹೇಳಿದರು.

ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ‘ಬಿಜೆಪಿ ಮುಖಂಡರು ನಾವು ಪ್ರಣಾಳಿಕೆಯಲ್ಲಿ ತಿಳಿಸಿದಂತೆ ನಡೆಯುತಿದ್ದೇವೆ. ಇದಕ್ಕೆಲ್ಲ ದೇಶದ ಜನರನ್ನು ಕೇಳುವ ಅಗತ್ಯ ಇಲ್ಲ ಎನ್ನುತ್ತಿದ್ದಾರೆ. ಚುನಾವಣೆ ಪೂರ್ವ ಸಾರ್ವಜನಿಕ ರ‍್ಯಾಲಿಗಳಲ್ಲಿ ಹಾಗೂ ಪ್ರಣಾಳಿಕೆಯಲ್ಲಿ ಡಾ.ಸ್ವಾಮಿನಾಥನ್‌ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಹೇಳುತ್ತಿದ್ದ ನರೇಂದ್ರ ಮೋದಿ ಅವರಿಗೆ ಅದು ಈಗ ಮರೆತೇ ಹೋಗಿದೆ' ಎಂದು ಟೀಕಿಸಿದರು.

ರೈತರು ತಮ್ಮ ನೋವುಗಳನ್ನು ಹೇಳಿಕೊಳ್ಳಲು ಅವಕಾಶ ನೀಡದೆ ರೈತರನ್ನು ಬಂಧನದಲ್ಲಿಟ್ಟು ರೈತರ ಸಮಾವೇಶ ನಡೆಸುತ್ತಾರೆ. ಇದನ್ನು ನಿಜವಾದ ರೈತ ಸಮಾವೇಶ ಎಂದು ಹೇಳಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.

ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಆರ್‌.ಚಂದ್ರತೇಜಸ್ವಿ ಮಾತನಾಡಿ, ರೈತರು, ಕಾರ್ಮಿಕರ ಪರವಾದ ಕಾನೂನುಗಳು ಹಾಗೂ ಡಾ.ಸ್ವಾಮಿನಾಥನ್‌ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಜ.8 ರಂದು ಗ್ರಾಮೀಣ ಭಾರತ ಬಂದ್‌ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ. ಗ್ರಾಮೀಣ ಭಾರತ ಬಂದ್‌ಗೆ ವಿವಿಧ ರೈತ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು.

ಜ.8 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಪ್ರವಾಸಿ ಮಂದಿರ ಬಳಿಯಿಂದ ಬೈಕ್‌ ರ‍್ಯಾಲಿ ನಡೆಸಿ ಹಳೇ ಬಸ್‌ ನಿಲ್ದಾಣದ ಸಿದ್ದಲಿಂಗಯ್ಯ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಗುವುದು ಎಂದರು.

ರಾಜ್ಯ ರೈತ ಸಂಘದ ಮುಖಂಡ ಜಿಂಕೆಬಚ್ಚಹಳ್ಳಿ ಸತೀಶ್‌ ಮಾತನಾಡಿ, ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿಸುವಂತೆ ಮುಸುಕಿನ ಜೋಳನು ಖರೀದಿಸಬೇಕು. ಒಬ್ಬ ರೈತರಿಂದ 75 ಕ್ವಿಂಟಲ್‌ ರಾಗಿ ಮಾತ್ರ ಖರೀದಿ ಮಾಡಲಾಗುತ್ತಿದೆ. ಈ ಮಿತಿಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮೇಗೌಡ, ಮುಖಂಡರಾದ ಶಿವರಾಜ್‌, ಸತೀಶ್‌, ಉಮಾದೇವಿ, ಮಹದೇವ್‌, ಪ್ರಾಂತ್ಯ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಸಿ.ಎಚ್‌.ರಾಮಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT