ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಕೋವಿಡ್‌ ಆರೈಕೆ ಕೇಂದ್ರ

ಮುಂಚೂಣಿ ಕೊರೊನಾ ವಾರಿಯರ್‌ಗಳಿಗೆ 50 ಹಾಸಿಗೆಗಳ ಸೌಲಭ್ಯ
Last Updated 22 ಮೇ 2021, 3:41 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕೊಡಿಗೇಹಳ್ಳಿ ಸಮೀಪದ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ನೂತನ ಕಟ್ಟಡದಲ್ಲಿ ಕೋವಿಡ್ ಮುಂಚೂಣಿ ವಾರಿಯರ್‌ಗಳಿಗಾಗಿ ನಿರ್ಮಿಸಲಾಗಿರುವ 50 ಹಾಸಿಗೆ ಸೌಲಭ್ಯ ಇರುವ ಕೋವಿಡ್ ರೋಗಿಗಳ ಆರೈಕೆ ಕೇಂದ್ರವನ್ನು ಶಾಸಕ ಟಿ.ವೆಂಕಟರಮಣಯ್ಯ ಶುಕ್ರವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸ್ಥಾಪಿಸಲಾಗಿರುವ ತಾಲ್ಲೂಕಿನ ಇಸ್ತೂರು, ಮಾಡೇಶ್ವರ ಕೋವಿಡ್ ರೋಗಿಗಳ ಆರೈಕೆ ಕೇಂದ್ರಗಳೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಇದರೊಂದಿಗೆ ನಗರದ ಕೆಆರ್‌ಎನ್ ಲೋಕದ ವಿದ್ಯಾರ್ಥಿ ನಿಲಯ, ಬಚ್ಚಹಳ್ಳಿ, ಸಕ್ಕರೆಗೊಲ್ಲಹಳ್ಳಿ, ಹಣಬೆ ವಸತಿ ನಿಲಯಗಳನ್ನು ಕೋವಿಡ್ ರೋಗಿಗಳ ಆರೈಕೆ ಕೇಂದ್ರಳಾಗಿ ಮಾಡಲಾಗಿದೆ. ಸರ್ಕಾರಿ ನೌಕರರು, ಆರೋಗ್ಯ ಕಾರ್ಯಕರ್ತರು ಮೊದಲಾಗಿ ಕೋವಿಡ್ ಮುಂಚೂಣಿ ವಾರಿಯರ್ಸ್‌ ತಮ್ಮ ಕರ್ತವ್ಯದ ಸಮಯದಲ್ಲಿ ಕೊರೊನಾ ಸೋಂಕಿಗೆ ಒಳಗಾದರೆ ಚಿಕಿತ್ಸೆ ಪಡೆಯಲು ಕೊಡಿಗೆಹಳ್ಳಿ ಕೋವಿಡ್ ರೋಗಿಗಳ ಆರೈಕೆ ಕೇಂದ್ರ ಅನುಕೂಲವಾಗಿದೆ ಎಂದರು.

ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿವೆ. ಸಾರ್ವಜನಿಕರಿಗೆ ಪ್ರತಿ ನಿತ್ಯ ಮನವಿ ಮಾಡಿದರು ಅನಾವಶ್ಯಕವಾಗಿ ರಸ್ತೆ ಗಿಳಿಯುತ್ತಿರುವ ಕಾರಣ ಸೋಂಕು ವ್ಯಾಪಕವಾಗಲು ಮುಖ್ಯ ಕಾರಣ. ತಾಲ್ಲೂಕಿನ ಜನತೆ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕಿದೆ. ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತಾಲ್ಲೂಕು ಆಡಳಿತ ಕೈಗೊಳ್ಳುತ್ತಿದೆ. ಜನತೆ ಸಾಧ್ಯವಾದಷ್ಟು ಮನೆಯಲ್ಲಿಯೇ ಇದ್ದು ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಬೇಕು ಎಂದರು.

ಇದೇ ವೇಳೆ ಸೇವ್ ದಿ ಚಿಲ್ಡ್ರನ್ ಸೇವಾ ಸಂಸ್ಥೆ ವತಿಯಿಂದ ಕೋವಿಡ್ ರೋಗಿಗಳ ಆರೈಕೆ ಕೇಂದ್ರಕ್ಕೆ 5 ಆಮ್ಲಜನಕ ಸಾಂದ್ರಕಗಳನ್ನು ವಿತರಿಸಲಾಯಿತು. ವಿವಿಧ ಕಂಪನಿಗಳಿಂದ ಬೆಡ್‍ಗಳು, ಪಿಪಿಇ ಕಿಟ್‍ಗಳು ಹಾಗೂ ಕೋವಿಡ್ ರಕ್ಷಣಾ ಪರಿಕರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್, ತಹಶೀಲ್ದಾರ್ ಟಿ.ಎಸ್.ಶಿವರಾಜ್‌, ಡಿವೈಎಸ್‍ಪಿ ಟಿ.ರಂಗಪ್ಪ,ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಸರ್ಕಲ್ ಇನ್‌ಸ್ಪೆಕ್ಟರ್‌ ಎಂ.ಬಿ.ನವೀನ್‌ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್, ಕಸಬಾ ಗ್ರಾಮ ಲೆಕ್ಕಾಧಿಕಾರಿ ರಾಜೇಂದ್ರಬಾಬು, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೈಕುಮಾರ್, ಪ್ರಧಾನ ಕಾರ್ಯದರ್ಶಿ ವಸಂತಗೌಡ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಉಪಾಧ್ಯಕ್ಷ ಎಂ.ಎಸ್‌.ರಾಜಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT