ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ನಮ್ಮೆಲ್ಲರ ಕಣ್ಣು

ಚನ್ನಾದೇವಿಅಗ್ರಹಾರ: ವಿಶ್ವ ಮಣ್ಣಿನ ದಿನಾಚರಣೆ
Last Updated 6 ಡಿಸೆಂಬರ್ 2022, 5:52 IST
ಅಕ್ಷರ ಗಾತ್ರ

ಕನಸವಾಡಿ (ದೊಡ್ಡಬಳ್ಳಾಪುರ): ‘ಮಾನವರು ಸೇರಿದಂತೆ ಭೂಮಿ ಮೇಲಿನ ಸಕಲ ಜೀವರಾಶಿಗಳ ಆರೋಗ್ಯಯುತ ಬದುಕಿಗೆ ಮಣ್ಣಿನ ಆರೋಗ್ಯವೇ ಮೂಲವಾಗಿದೆ. ಆದರೆ, ಮಣ್ಣಿನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವ ಕೆಲಸ ಹೊರತುಪಡಿಸಿ ಬೇರೆಲ್ಲದರ ಬಗ್ಗೆಯೂ ಕಾಳಜಿವಹಿಸಲಾಗುತ್ತಿದೆ’ ಎಂದು ಬೆಂಗಳೂರಿನ ಸಾಯಿಲ್‌ ಸಂಸ್ಥೆಯ ವಾಸು ಹೇಳಿದರು.

ತಾಲ್ಲೂಕಿನ ಚನ್ನಾದೇವಿಅಗ್ರಹಾರ ಗ್ರಾಮದ ರೈತ ಮಹಿಳೆ ಕಾಂತಲಕ್ಷ್ಮೀ ಅವರ ತೋಟದಲ್ಲಿ ಬೆಂಗಳೂರಿನ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ, ಸಾಯಿಲ್‌ ಸಂಸ್ಥೆ, ಯುವ ಸಂಚಲನದಿಂದ ಸೋಮವಾರ ನಡೆದ ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ‘ಮಣ್ಣಿನೊಂದಿಗೆ ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಣ್ಣಿಗೆ ವಿಷ ಉಣಿಸಿದರೆ ಅದು ಮತ್ತೆ ಮರಳಿ ನಮ್ಮ ದೇಹವನ್ನೇ ಸೇರುತ್ತದೆ. ಈ ಸತ್ಯದ ಅರಿವನ್ನು ತಿಳಿದಿದ್ದ ನಮ್ಮ ಹಿರಿಯರು ಮಣ್ಣಿನ ಫಲವತ್ತತೆಗೆ ಪ್ರಥಮ ಆದ್ಯತೆ ನೀಡಿದ್ದರು. ಯಾವುದೇ ದೇಶದ ಸಂಪತ್ತು ಅಲ್ಲಿನ ಮಣ್ಣಿನ ಆರೋಗ್ಯವನ್ನು ಅವಲಂಬಿಸಿರುತ್ತದೆ. ಸಂಪತ್ತನ್ನು ಸೃಷ್ಟಿಸುವ ಶಕ್ತಿ ಹೊಂದಿರುವ ಮಣ್ಣು ಇಂದು ವಿವಿಧ ಕಾರಣಗಳಿಂದ ಫಲವತ್ತತೆ ಕಳೆದುಕೊಳ್ಳುತ್ತಿದೆ ಎಂದರು.

ನಾವು ಸೇರಿದಂತೆ ನಮ್ಮ ಮಕ್ಕಳು ಮಣ್ಣಿನ ಒಡನಾಟದಿಂದ ದೂರವಾಗುತ್ತಿದ್ದೇವೆ. ಇದರ ಪರಿಣಾಮವೇ ನಾನಾ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಮಣ್ಣಿಗೂ ಜೀವ ಇದೆ ಎಂಬ ಸತ್ಯದ ಅರಿವನ್ನು ಮಕ್ಕಳಿಗೆ ಮೂಡಿಸಬೇಕಿದೆ ಎಂದು ಸಲಹೆ ನೀಡಿದರು.

ವಿಶ್ವ ಮಣ್ಣಿನ ದಿನಾಚರಣೆಯಲ್ಲಿ ಭಾಗವಹಿಸಿದ್ದ ರೈತರಿಗೆ ತಮ್ಮ ಜಮೀನುಗಳಿಂದ ಸಂಗ್ರಹಿಸಿ ತಂದಿದ್ದ ಮಣ್ಣಿನಲ್ಲಿ ಇರುವ ಫಲವತ್ತತೆಯ ಪ್ರಮಾಣವನ್ನು ಪರೀಕ್ಷೆ ಮಾಡಿಕೊಳ್ಳುವ ಸರಳ ವಿಧಾನದ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು. ಮಣ್ಣಿನಲ್ಲಿ ಸಾವಯವ ಪದಾರ್ಥಗಳ ಪ್ರಮಾಣ ಸೇರಿದಂತೆ ವಿವಿಧ ಪೋಷಕಾಂಶಗಳನ್ನು ತಿಳಿದುಕೊಳ್ಳುವ ಹಾಗೂ ಅವುಗಳನ್ನು ಹೆಚ್ಚಿಸುವ ವಿಧಾನಗಳ ಬಗ್ಗೆ ತಿಳಿಸಲಾಯಿತು.

ಮಣ್ಣಿನೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ರವಿ, ರಮಾ, ಯುವ ಸಂಚಲನ ಅಧ್ಯಕ್ಷ ಚಿದಾನಂದಮೂರ್ತಿ, ಚನ್ನಾದೇವಿ ಅಗ್ರಹಾರ ಗ್ರಾಮದ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT