ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿನಾರಾಯಣಸ್ವಾಮಿ ದೇಗುಲ ಜೀರ್ಣೋದ್ಧಾರ: ಶತಮಾನದ ನಿರ್ಲಕ್ಷ್ಯ ನಂತರ ಪ್ರವರ್ಧಮಾನ

ದೊಡ್ಡಬಳ್ಳಾಪುರದ ಕುಲದೇವರು ದೇಗುಲ ಜೀರ್ಣೋದ್ಧಾರಗೊಳಿಸಲು ಚಿಂತನೆ
Last Updated 2 ಫೆಬ್ರುವರಿ 2019, 12:39 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಒಂದು ಕಾಲಕ್ಕೆ ದೊಡ್ಡಬಳ್ಳಾಪುರದ ಕುಲದೇವರು ಆದಿನಾರಾಯಣಸ್ವಾಮಿ. ಈ ದೇಗುಲ ಒಂದು ಶತಮಾನದ ಅಜ್ಞಾತ ವಾಸದ ನಂತರ ಮತ್ತೆ ಸುದ್ದಿಯಾಗುತ್ತಿದೆ. ದೇವಾಲಯದ ಪುನರ್ ಸ್ಥಾಪನೆ ಹಾಗೂ ಜೀರ್ಣೋದ್ಧಾರಕ್ಕಾಗಿ ಟ್ರಸ್ಟ್ ರಚನೆಗೆ ಸಿದ್ದತೆ ನಡೆದಿದೆ. ಇತ್ತೀಚೆಗಷ್ಟೇ ದೇವಾಲಯದ ಮುಖ ಮಂಟಪದ ಪ್ರವೇಶ ದ್ವಾರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಸಮ್ಮುಖದಲ್ಲಿ ಸ್ಥಳೀಯರು ಸಭೆ ನಡೆಸಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಕಾಲಾವಧಿಯಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಹಂಪಿ ವಿಶ್ವವಿದ್ಯಾಲಯದಲ್ಲಿ ಕಲ್ಲಿನ ಕಟ್ಟಡಗಳನ್ನು ನಿರ್ಮಿಸಿರುವ ಪುರಾತತ್ವ ಇಲಾಖೆ ವಾಸ್ತು ಶಿಲ್ಪಿಗಳೇ ಈ ದೇವಾಲಯದ ಗರ್ಭಗುಡಿ ನಿರ್ಮಾಣ ಹಾಗೂ ಶಿಥಿಲಾವಸ್ಥೆಯಲ್ಲಿನ ಮುಖ ಮಂಟಪ ನಿರ್ಮಿಸಲಿದ್ದು, ಅದೇ ಮಾದರಿಯಲ್ಲಿ ಜೋರ್ಣೋದ್ದಾರಕ್ಕೆ ಪರಿಶೀಲನೆ ನಡೆದಿದೆ.

ಗಾಂಧಿನಗರ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ಈ ದೇವಾಲಯ ಇದೆ. ಇಲ್ಲಿನ ಪಾಳೆಗಾರರಿಂದ ನಿರ್ಮಾಣವಾದ ಈ ದೇವಾಲಯದ ಪಳೆಯುಳಿಕೆ ಆಗಿ ಮಂಟಪ ಉಳಿದಿದೆ. ಮಲ್ಲಬೈರೇಗೌಡ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜನಾದ್ದರಿಂದ ಅಂದಿನ ಶೈಲಿಯಲ್ಲೇ ಈ ದೇವಾಲಯ ನಿರ್ಮಾಣಗೊಂಡಿದೆ. ವಿಜಯನಗರ ಸಾಮ್ರಾಜ್ಯದ ವಾಸ್ತು ಪ್ರಭಾವ ಇಲ್ಲಿ ಕಂಡು ಬಂದರೂ ಸ್ಥಳೀಯ ವಿಶಿಷ್ಟತೆ ಸೇರ್ಪಡೆಯಿಂದಾಗಿ ಪ್ರಾದೇಶಿಕ ಶೈಲಿಯೂ ಮೇಳೈಸಿದೆ ಎನ್ನುತ್ತಾರೆ ಇತಿಹಾಸ ತಜ್ಞ ಡಾ.ಎಸ್.ವೆಂಕಟೇಶ್.

ಇತಿಹಾಸದ ಸಂಶೋಧನೆಗಳ ಪ್ರಕಾರ ಈಗಿನ ಗಾಂಧಿನಗರ ಮತ್ತು ಹಳೆ ಬಸ್ ನಿಲ್ದಾಣ ಈ ದೇವಾಲಯದ ಪ್ರಾಕಾರದಲ್ಲಿದೆ. ನಾಗರಕೆರೆ ಕೋಡಿಕಟ್ಟೆ ಮತ್ತು ಮೆಟ್ಟಿಲುಗಳಿಗೆ ಹಾಕಿರುವ ಕಲ್ಲುಗಳು, ಇಲ್ಲಿರುವ ಆಂಜನೇಯಸ್ವಾಮಿ ದೇವಾಲಯದ ಸ್ತಂಬಗಳು ಈ ದೇಗುಲ ವಿಶಾಲವಾಗಿತ್ತು ಎನ್ನುವುದಕ್ಕೆ ಪುಷ್ಟಿ ನೀಡುತ್ತದೆ. ಈಗಿರುವ ಮುಖಮಂಟಪದ ಮೇಲೆ ಯಾವುದೇ ಗೋಪುರವಿಲ್ಲ. ಆದರೆ, ಪ್ರತೋಲಿ ಎಂದು ಕರೆಯುವ ಮಂಟಪದ ವಾಸ್ತು ಶಿಲ್ಪ ವಿಶಿಷ್ಟವಾಗಿದೆ. ಲತಾಂಗನಿಯರ ಶಿಲ್ಪಕಲೆ, ಸುಂದರ ಕಂಬಗಳ ಕೆತ್ತನೆ ಕಾಣಬಹುದು.

ನಿಧಿ ಶೋಧಕರಿಂದ ಮಂಟಪ ಹಾಳಾಗಿ ಬಿಕೋ ಎನ್ನುತ್ತಿದೆ. ದೇವಾಲಯವೂ ಸಂಪೂರ್ಣ ಹಾಳಾಗಿದೆ. ಈಗ ಸದ್ಯಕ್ಕೆ ಉಳಿದಿರುವ ಮಂಟಪವನ್ನಾದರೂ ಉಳಿಸಬೇಕು ಎನ್ನುತ್ತಾರೆ ಸ್ಥಳೀಯರು. ಇಂದಿಗೂ ನಗರದ ತೇರಿನ ಬೀದಿಯಲ್ಲಿರುವ ಪ್ರಸನ್ನ ಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ಆದಿನಾರಾಯಣಸ್ವಾಮಿ ಮೂಲವಿಗ್ರಹ ಇದೆ.

ಈ ದೇವಾಲಯದ ಮುಖ ಮಂಪಟದ ಪ್ರವೇಶದ್ವಾರ ಬಿರುಸಾದ ಕಲ್ಲುಗಳಿಂದ ಕೂಡಿದೆ. ಸಾಕಷ್ಟು ಅಗಲ, ಎತ್ತರ ಇದೆ. ದ್ವಾರದ ಇಕ್ಕೆಲಗಳಲ್ಲಿ ಗಂಗಾ – ಯಮುನಾ ನದಿ ದೇವತೆಯರ ಕೆತ್ತನೆ ಇದೆ. ಲತೆ ಹಿಡಿದು ಬಳುಕುವ ದೇಹ ಸಿರಿಯುಳ್ಳ ಸುಂದರ ಲತಾಂಗಿನಿಯರ ಶಿಲ್ಪಗಳಿವೆ. ಕೆಳಗೆ ಮಕರ ಶಿಲ್ಪವಿದೆ. ಇದು ಕೂಡ ವಿಜಯನಗರ ಕಾಲದಲ್ಲಿನ ವಾಸ್ತುಶಿಲ್ಪದ ಒಂದು ಪ್ರಮುಖ ಲಕ್ಷಣವೇ ಆಗಿದೆ.

ದೊಡ್ಡಬಳ್ಳಾಪುರ ಪಾಳೇಗಾರರ ಆರಾಧ್ಯ ದೈವ ಒಂದು ಶತಮಾನದ ಕಾಲ ಭಕ್ತರಿಂದ ಏಕೆ ನಿರ್ಲಕ್ಷ್ಯಕ್ಕೆ ಒಳಗಾಯಿತು ಎನ್ನುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT