ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಹಬ್ಬಗಳ ಉಳಿವಿಗೆ ಶ್ರಮಿಸಿ: ಶ್ರೀನಿವಾಸ ರೆಡ್ಡಿ ಮನವಿ

Last Updated 28 ಜನವರಿ 2019, 13:10 IST
ಅಕ್ಷರ ಗಾತ್ರ

ಆನೇಕಲ್: ನಶಿಸಿ ಹೋಗುತ್ತಿರುವ ಗ್ರಾಮೀಣ ಹಬ್ಬಗಳ ಆಚರಣೆಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಬೇಕು. ಈ ಮೂಲಕ ಭಾರತೀಯ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಗುರುತರವಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ತಿಳಿಸಿದರು.

ಅವರು ತಾಲ್ಲೂಕಿನ ಕೊಮ್ಮಸಂದ್ರದ ಬಯಲು ಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್ ಸಂಘದ ವತಿಯಿಂದ ಆಯೋಜಿಸಿದ್ದ ಸಂಕ್ರಾಂತಿ ಉತ್ಸವ (ಸುಗ್ಗಿ ಹಬ್ಬ) ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಕ್ರಾಂತಿ ಹಬ್ಬ ರೈತರ ಹಾಗೂ ಜಾನುವಾರು ಹಬ್ಬವಾಗಿದೆ. ಇತ್ತೀಚಿನ ದಿನಗಳಲ್ಲಿ ರಾಸುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಸಂಕ್ರಾಂತಿಯ ಆಚರಣೆಯೂ ಕಡಿಮೆಯಾಗುತ್ತಿದೆ. ಆದರೆ ಸಂಕ್ರಾಂತಿ ಸುಗ್ಗಿ ಹಬ್ಬದ ಮೂಲಕ ಪದ್ದತಿ, ಆಚರಣೆಯ ವಿಧಾನಗಳನ್ನು ಯುವ ಪೀಳಿಗೆಗೆ ತಿಳಿಸುವ ಉದ್ದೇಶ ಹೊಂದಲಾಗಿದೆ. ಸುಗ್ಗಿ ಹಬ್ಬ ಸಂಕ್ರಾಂತಿಗೆ ಹಲವಾರು ವೈಜ್ಞಾನಿಕ ಕಾರಣಗಳಿದ್ದು ಸೂರ್ಯನು ತನ್ನ ಪಥವನ್ನು ಬದಲಿಸಿದಂತೆ ಪ್ರತಿಯೊಬ್ಬರು ಯಶಸ್ಸಿನ ಪಥದತ್ತ ಸಾಗಬೇಕು ಎಂದರು.

ಭಾರತೀಯ ಕಿಸಾನ್ ಸಂಘದ ಕಾನೂನು ಸಲಹೆಗಾರ ರಾಮಸ್ವಾಮಿ ರೆಡ್ಡಿ ಮಾತನಾಡಿ, ಭಾರತೀಯ ಇತಿಹಾಸದಲ್ಲಿ ಹಬ್ಬಗಳಿಗೆ ಪ್ರಮುಖ ಸ್ಥಾನವಿದ್ದು ಹಬ್ಬ ಹರಿದಿನಗಳು ಜನರಲ್ಲಿ ಪ್ರೀತಿ ವಿಶ್ವಾಸವನ್ನು ಬೆಳೆಸುವ ಹಾಗೂ ಧಾರ್ಮಿಕ ಭಾವನೆಗಳನ್ನು ಬೆಳೆಸುವ ಸಾಂಪ್ರದಾಯಿಕ ಆಚರಣೆಗಳಾಗಿವೆ. ಹಬ್ಬಗಳಲ್ಲಿನ ಮಹತ್ವಗಳನ್ನು ಪೋಷಕರು ತಮ್ಮ ಮಕ್ಕಳಿಗೆ ತಿಳಿಸಬೇಕು ಎಂದು ತಿಳಿಸಿದರು.

ನಗರೀಕರಣದ ಪ್ರಭಾವದಿಂದಾಗಿ ಹಬ್ಬಗಳು ಮೂಲಪದ್ಧತಿಗಳನ್ನು ಕಳೆದುಕೊಳ್ಳುತ್ತಿದ್ದು ಸುಗ್ಗಿ ಹಬ್ಬದ ಆಚರಣೆಯನ್ನು ಇಂದಿನ ಯುವ ಸಮುದಾಯಕ್ಕೆ ಪರಿಚಯಿಸಲು ಸಂಕ್ರಾಂತಿ ಸುಗ್ಗಿ ಹಬ್ಬ ಸಹಕಾರಿಯಾಗಲಿದೆ ಎಂದರು.

ತಾಲ್ಲೂಕಿನ ಕೊಮ್ಮಸಂದ್ರ ಸಮೀಪದ ಬಯಲು ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಉತ್ಸವದಲ್ಲಿ (ಸುಗ್ಗಿ ಹಬ್ಬ) ಗೋವುಗಳಿಗೆ ಪೂಜೆ, ಭಾರತಾಂಬೆಯ ಪೂಜೆ, ರಾಗಿ ರಾಶಿಗಳ ಪೂಜೆ ನೆರವೇರಿತು. ಮಹಿಳೆಯರು ಭಜನೆಗಳು ಹಾಗೂ ಲಲಿತಾ ಸಹಸ್ರನಾಮದಲ್ಲಿ ತೊಡಗಿದ್ದರು. ಕೋಲಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿತ್ತು.

ಗ್ರಾಮೀಣ ಶೈಲಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಗಿ ರಾಶಿಯ ಸುತ್ತಲೂ ಕಬ್ಬಿನ ಜಲ್ಲೆಗಳಿಂದ ಮಾಡಿದ ಅಲಂಕಾರ ಎಲ್ಲರ ಕಣ್ಮನ ಸೆಳೆಯುತ್ತಿತ್ತು. ವಿಶೇಷ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಯಿತು.

ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಕಾರ್ಯದರ್ಶಿ ಪ್ರಸನ್ನಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT