ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರೋಪಿಗಳ ಎನ್‌ಕೌಂಟರ್ ಸಮರ್ಥನೀಯ’ 

ಪಶುವೈದ್ಯೆಗೆ ಶ್ರದ್ಧಾಂಜಲಿ, ಆರೋಪಿಗಳ ಬಲಿಗೆ ಸಂತಸ ಸೂಚಿಸಿ ಸಿಹಿ ವಿತರಣೆ
Last Updated 7 ಡಿಸೆಂಬರ್ 2019, 13:07 IST
ಅಕ್ಷರ ಗಾತ್ರ

ದೇವನಹಳ್ಳಿ: ಹೈದರಾಬಾದಿನ ಬಳಿ ಶುಕ್ರವಾರ ಮುಂಜಾನೆ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ನಡೆಸಿರುವುದು ಸಮರ್ಥನೀಯವಾಗಿದೆ ಎಂದು ಮುಖಂಡ ತ್ಯಾಗರಾಜ್ ಹೇಳಿದರು.

ಇಲ್ಲಿನ ಸರೋವರ ಬೀದಿ ಶ್ರೀಆಂಜನೇಯ ಸ್ವಾಮಿ ದೇವಾಲಯದ ಪುಷ್ಕರಣಿ ಬಳಿ ಮೃತ ಪಶುವೈದ್ಯೆಗೆ ಶ್ರದ್ಧಾಂಜಲಿ ಮತ್ತು ಎನ್‌ಕೌಂಟರ್‌ನಲ್ಲಿ ಆರೋಪಿಗಳ ಬಲಿಗೆ ಸಂತಸ ಸೂಚಿಸಿ ಸಿಹಿ ವಿತರಿಸಿ ಮಾತನಾಡಿದರು.

ದೇಶದ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೃತ್ಯ ನಡೆಸಿರುವುದು ಅಘಾತಕಾರಿ ಬೆಳೆವಣಿಗೆ. ಇಂತಹ ನೀಚ ಕೆಲಸಗಳು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ಒಂದೆಡೆಯಾದರೆ, ಸ್ತ್ರೀಯನ್ನು ದೇವತೆಗೆ ಸಮವೆಂದು ಭಾವಿಸುವ ಪರಂಪರೆಗೆ ಇಂತಹ ಕೃತ್ಯಗಳಿಂದ ಧಕ್ಕೆ ಬರಲಿದೆ ಎಂದು ಹೇಳಿದರು.

‘ಆರೋಪಿಗಳು ನಾವು ಸಹ ಒಂದು ಹೆಣ್ಣಿನಿಂದ ಜನ್ಮ ಪಡೆದಿದ್ದೇವೆ ಎಂಬುದರ ಪರಿವೆ ಇಲ್ಲದೆ ದುಷ್ಕೃತ್ಯ ಎಸಗಿದ್ದಾರೆ. ಅತ್ಯಾಚಾರ ಮಾಡಿ ಹತ್ಯೆ ಮಾಡಿದರೆ ಕಠಿಣ ಶಿಕ್ಷೆ ಆಗಲಿದೆ ಎಂಬ ಸಾಮಾನ್ಯ ಜ್ಞಾನ ಇಲ್ಲದೆ ಮಾಡಿದ್ದಾರೆ. ಮೃಗೀಯ ವರ್ತನೆಯ ಹತ್ಯೆ, ಹೆಣ್ಣುಕುಲದ ಮೇಲಿನ ದೌರ್ಜನ್ಯವನ್ನು ದೇಶವೇ ಖಂಡಿಸಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಜಾತ್ಯತೀತ ರಾಷ್ಟ್ರದಲ್ಲಿ ಇಂತಹ ಘಟನೆಗಳು ಅಪಾಯಕಾರಿಯಾಗಿವೆ. ಈ ಬರ್ಬರ ಹತ್ಯೆಯ ನಂತರ ಉತ್ತರ ಪ್ರದೇಶದಲ್ಲಿ ಇಂತಹದ್ದೆ ಮತ್ತೊಂದು ಪ್ರಕರಣ ನಡೆದಿರುವುದು ಮತ್ತೆ ಸಮಾಜ ಬೆಚ್ಚಿ ಬೀಳುವಂತಿದೆ. ಹೆಣ್ಣು ಮಕ್ಕಳಿಗೆ, ಯುವತಿಯರಿಗೆ ಮತ್ತು ಮಹಿಳೆಯರಿಗೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಉರುಳಿದರೂ ಸುರಕ್ಷತೆ ಇಲ್ಲವೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವಂತಿದೆ ಎಂದು ತಿಳಿಸಿದರು.

ಕೇಂದ್ರ ಮತ್ತು ಗೃಹ ಇಲಾಖೆ ಮಹಿಳೆಯರ ರಕ್ಷಣೆಗಾಗಿ ಪೊಲೀಸರಿಗೆ ನೈತಿಕ ಬೆಂಬಲ ನೀಡಬೇಕು ಎಂದು ಹೇಳಿದರು.

ಭಾರತ ಸೇವಾದಳ ತಾಲ್ಲೂಕು ಘಟಕ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣಪ್ಪ ಮಾತನಾಡಿ, ಪೊಲೀಸರ ಎನ್‌ಕೌಂಟರ್‌ಗೆ ದೇಶದ ಬಹುತೇಕ ಜನರು ಬೆಂಬಲ ಸೂಚಿಸಿದ್ದಾರೆ. ಬೆರಳೆಣಿಕೆಯ ಜನರು ನ್ಯಾಯಾಲಯ ಕಾನೂನಿನ ಪ್ರಕಾರ ಶಿಕ್ಷೆ ನೀಡುತ್ತಿತ್ತು ಎಂದು ಹೇಳಿದ್ದಾರೆ. ಒಂದೊಂದು ಅಪರಾಧ ಪ್ರಕರಣ ಇತ್ಯರ್ಥವಾಗಲು ಹತ್ತಾರು ವರ್ಷಗಳು ಬೇಕು. ಇಂತಹ ಸ್ಥಿತಿಯಲ್ಲಿ ಪ್ರಕರಣದ ನೆನಪು ಇರುವುದಿಲ್ಲ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಅತ್ಯಾಚಾರದ ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ನೇರಗಲ್ಲು ಶಿಕ್ಷೆಗೆ ಗುರಿ ಪಡಿಸುವ ಕಾನೂನು ತಿದ್ದುಪಡಿ ಮಾಡಬೇಕು. ಅರಬ್ ರಾಷ್ಟ್ರಗಳಲ್ಲಿ ಅತ್ಯಾಚಾರ ನಡೆದ ಒಂದೆರಡು ತಾಸಿನಲ್ಲಿ ಬೀದಿಯಲ್ಲಿ ನಿಲ್ಲಿಸಿ ಗುಂಡಿಕ್ಕುವಂತೆ ಇಲ್ಲಿಯೂ ಆಗಬೇಕು. ಅಗ ಮಾತ್ರ ಇಂತಹ ಹೇಯ ಕೃತ್ಯ ತಡೆಗಟ್ಟಲು ಸಾಧ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT