ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗೆ ಅಧ್ಯಯನಾಸಕ್ತಿ ಅನಿವಾರ್ಯ

ಕಾವ್ಯದ ಒಡನಾಟ ಸಾಹಿತ್ಯ ಸಾಂಸ್ಕೃತಿಕ ಶಿಬಿರ ಸಮಾರೋಪ ಸಮಾರಂಭ
Last Updated 1 ಡಿಸೆಂಬರ್ 2019, 15:09 IST
ಅಕ್ಷರ ಗಾತ್ರ

ಆನೇಕಲ್: ಅಧ್ಯಯನದಲ್ಲಿ ಏಕಾಗ್ರತೆ, ಆಸಕ್ತಿಯಿರಬೇಕು. ಕೆಲಸದಲ್ಲಿ ಶಿಸ್ತನ್ನು ರೂಢಿಸಿಕೊಂಡರೆ ಯಶಸ್ಸು ಸಾಧ್ಯ. ಹಾಗಾಗಿ ಶಿಕ್ಷಕರು ಸತತ ಅಧ್ಯಯನ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ತಮ್ಮ ಶಿಷ್ಯರಿಗೆ ಅನುಭವಗಳನ್ನು ಕಟ್ಟಿಕೊಡಬೇಕು ಎಂದು ಸಾಹಿತಿ ಜಿ.ಎಸ್‌.ಸಿದ್ದಲಿಂಗಯ್ಯ ತಿಳಿಸಿದರು.

ಅವರು ತಾಲ್ಲೂಕಿನ ತಿರುಮಗೊಂಡನಹಳ್ಳಿ ರಮಣ ಮಹರ್ಷಿ ಆಶ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ ಕಾವ್ಯದ ಒಡನಾಟ-2019 ಸಾಹಿತ್ಯ ಸಾಂಸ್ಕೃತಿಕ ಶಿಬಿರದಲ್ಲಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕುವೆಂಪು ಅವರು ರಾಮಾಯಣ ದರ್ಶನಂ ಅಂತಹ ಮಹಾ ಕಾವ್ಯವನ್ನು ರಚಿಸಲು 9 ವರ್ಷ ತೆಗೆದುಕೊಂಡರು. ಈ ಏಕಾಗ್ರತೆ ಹಾಗೂ ಬದ್ಧತೆಯನ್ನು ಬೆಳೆಸಿಕೊಂಡಿದ್ದರಿಂದ ಕುವೆಂಪು ರಾಷ್ಟ್ರಕವಿಯಾದರು. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಎಂತಹವರನ್ನು ಎದುರಿಸುವ ಶಕ್ತಿ ಹೊಂದಿದ್ದರು. ಅಖಂಡ ಕರ್ನಾಟಕದ ಬಗ್ಗೆ ಮಾತನಾಡಿದ್ದರಿಂದ ಸರ್ಕಾರ ನೋಟಿಸ್‌ ನೀಡಿದಾಗ ಕುವೆಂಪು ಅವರು ತಮ್ಮ ಕವನದ ಮೂಲಕ ಸರ್ಕಾರಕ್ಕೆ ಉತ್ತರ ನೀಡಿದರು. ಅಖಂಡ ಕರ್ನಾಟಕಕ್ಕೆ ನೃಪತುಂಗನೇ ಚಕ್ರವರ್ತಿ, ಪಂಪನೇ ಮುಖ್ಯಮಂತ್ರಿ ಇದು ಶಾಶ್ವತ ಮಂತ್ರಿಮಂಡಲ, ಇಂದು ಬಂದು ನಾಳೆ ಹೋಗುವ ಸರ್ಕಾರಗಳಲ್ಲ ಎಂದು ಕಟು ಟೀಕೆಯ ಪದ್ಯವನ್ನು ಬರೆಯುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ನಂತರ ಸರ್ಕಾರ ನೋಟಿಸ್‌ ವಾಪಸ್‌ ಪಡೆಯಿತು ಎಂದರು.

ಸಮಾರೋಪದಲ್ಲಿ ಕುವೆಂಪು ಅವರ ಜೀವನ, ಸಾಧನೆ, ಸಾಹಿತ್ಯದ ಬಗ್ಗೆ ಜಿ.ಎಸ್‌.ಸಿದ್ಧಲಿಂಗಯ್ಯ ಅವರು ಹೆಚ್ಚಿನ ಮಾಹಿತಿ ನೀಡಿದರು.

ಎರಡು ದಿನಗಳ ಶಿಬಿರದಲ್ಲಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಕುಮಾರವ್ಯಾಸನ ಗದುಗಿನ ಭಾರತದ ಬಗ್ಗೆ, ಸಾಹಿತಿ ಶೂದ್ರ ಶ್ರೀನಿವಾಸ್‌ ಅವರು ಜಿ.ಎಸ್‌.ಶಿವರುದ್ರಪ್ಪ ಅವರ ಕಾವ್ಯ ಸಂದರ್ಭ, ಡಾ.ಜಯಶಂಕರ್‌ ಹಲಗೂರು ಅವರು ನಮ್ಮ ಕಾಲಘಟ್ಟದ ಕಾವ್ಯಾನುಸಂಧಾನ, ಖ್ಯಾತ ಕವಿ ಬಿ.ಆರ್‌.ಲಕ್ಷ್ಮಣರಾವ್‌ ಅವರು ಕಾವ್ಯಲೋಕ ಹಾಗೂ ಪ್ರಾಧ್ಯಾಪಕಿ ಡಾ.ಪದ್ಮಿನಿ ನಾಗರಾಜು ಅವರು ಕಾವ್ಯವಾಚನ ನಡೆಸಿಕೊಟ್ಟರು. ರಾಘವೇಂದ್ರ ಬಿಜಾಡಿ, ಎನ್‌.ಶ್ರೀನಿವಾಸ್‌, ರಾಮಕೃಷ್ಣಯ್ಯ, ಪ್ರಭಾಕರರೆಡ್ಡಿ ಭಾವಸಂಗಮ ಗೀತ ಗಾಯನ ನಡೆಸಿಕೊಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ರಾಮಮೂರ್ತಿ, ಸಮನ್ವಯಾಧಿಕಾರಿ ಎನ್‌.ಶಂಕರಮೂರ್ತಿ, ಬೊಮ್ಮಸಂದ್ರ ಕೈಗಾರಿಕ ಮಾಲೀಕರ ಸಂಘದ ಅಧ್ಯಕ್ಷ ಎ.ಪ್ರಸಾದ್‌, ಪುರಸಭಾ ಸದಸ್ಯೆ ಮಂಜುಳ ನೀಲಕಂಠಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾಕರ ರೆಡ್ಡಿ, ಆನೇಕಲ್‌ ಸರಸ್ವತಿ ವಿದ್ಯಾ ಮಂದಿರ ಶಾಲೆಯ ಕಾರ್ಯದರ್ಶಿ ಎನ್.ಸುರೇಶ್‌, ಮುಖಂಡರಾದ ಪುರುಷೋತ್ತಮ್‌ರೆಡ್ಡಿ, ಪಿ.ಧನಂಜಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT