ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ಮಾರಾಟಕ್ಕೆ ತಟ್ಟಿದ ಕೊರೊನಾ ಭೀತಿ

ಮಾವಿನ ವ್ಯಾಪಾರಕ್ಕಾಗಿ ತಲೆಎತ್ತದ ಮಂಡಿಗಳು
Last Updated 13 ಮೇ 2021, 9:13 IST
ಅಕ್ಷರ ಗಾತ್ರ

ದೇವನಹಳ್ಳಿ/ವಿಜಯಪುರ: ಲಾಕ್‌ಡೌನ್ ಜಾರಿಗೊಳಿಸಿರುವ ಪರಿಣಾಮ ಮಾವಿನ ಬೆಳೆಗಳ ಖರೀದಿಗಾಗಿ ವ್ಯಾಪಾರಸ್ಥರು ಬಾರದೆ ಇರುವ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 620 ಹೆಕ್ಟೇರ್ ಪ್ರದೇಶದಲ್ಲಿ 90 ಮಂದಿ ರೈತರು ಮಾವು ಬೆಳೆದಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಈಗಾಗಲೇ ಮಾವು ಮಾರುಕಟ್ಟೆಗೆ ಬಂದಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ಬೆಳೆದಿರುವ ಮಾವಿನ ಬೆಳೆಯ ಕಟಾವಿಗೆ ವ್ಯಾಪಾರಸ್ಥರು ಮುಂದಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೇನು ಎನ್ನುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ.

ಪ್ರತಿ ವರ್ಷ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಅಲ್ಲಲ್ಲಿ ಮಾವಿನಹಣ್ಣಿನ ಮಾರಾಟಕ್ಕೆ ಮಂಡಿಗಳು ತಲೆ ಎತ್ತುತ್ತಿದ್ದವು. ಆದರೆ, ಈ ವರ್ಷದಲ್ಲಿ ಮಾರ್ಚ್ ತಿಂಗಳಿನಲ್ಲೆ ಕೊರೊನಾದ ಅಬ್ಬರ ಶುರುವಾಗಿದ್ದರಿಂದ ಮಾವಿನ ವ್ಯಾಪಾರಕ್ಕಾಗಿ ಮಂಡಿಗಳು ತಲೆ ಎತ್ತಿಲ್ಲ. ಈ ಕಾರಣದಿಂದಾಗಿ ರೈತರಲ್ಲಿ ಸಹಜವಾಗಿಯೇ ಆತಂಕ ಶುರುವಾಗಿದೆ.

‘ಮರಗಳಲ್ಲಿ ಮಾವಿನ ಕಾಯಿಗಳು ಬಲಿತಿದ್ದು, ಮುಂದಿನ ಹದಿನೈದು ದಿನಗಳ ಒಳಗೆ ಹಣ್ಣಾಗಲಿದೆ. ಮರಗಳಲ್ಲಿ ಹಣ್ಣಾದರೆ ವ್ಯಾಪಾರಸ್ಥರು ಖರೀದಿ ಮಾಡುವುದಿಲ್ಲ. ಕಾಯಿ ಕಿತ್ತು ಹೆಚ್ಚು ದಿನ ಶೇಖರಣೆ ಮಾಡುವುದು ಕಷ್ಟವಾಗುತ್ತದೆ. ಹದಿನೈದು ದಿನಗಳ ಒಳಗಾಗಿ ಮರಗಳಲ್ಲಿನ ಕಾಯಿಗಳನ್ನು ಕಿತ್ತು ಮಾರಾಟ ಮಾಡಬೇಕು. ಇಲ್ಲವಾದರೆ ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಳ್ಳಬೇಕಾಗುತ್ತದೆ’ ಎಂದು ರೈತ ವಿಜಯಕುಮಾರ್ ತಿಳಿಸಿದರು.

ರಾಜಗಿರಿ ತಳಿ ಕೊಯ್ಲಿಗೆ ಬಂದಿದ್ದು, ಕ್ವಿಂಟಲ್‌ಗೆ ₹10 ಸಾವಿರದಿಂದ ₹15 ಸಾವಿರದವರೆಗೂ ಮಾರಾಟವಾಗುತ್ತಿದೆ. ಮುಂದಿನ 15-20 ದಿನಗಳಲ್ಲಿ ಇತರ ತಳಿಗಳು ಕೊಯ್ಲಿಗೆ ಬರಲಿದೆ. ಆದರೆ, ಇಲ್ಲಿನ ಮಾವು ಉತ್ತರ ಭಾರತದ ಕಡೆ ಹೆಚ್ಚು ರವಾನೆಯಾಗುತ್ತದೆ. ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್ ಇನ್ನಿತರ ರಾಜ್ಯಗಳ ವ್ಯಾಪಾರಸ್ಥರು ಬಂದರೆ ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆ ರೈತರದ್ದು.

ಮಾವಿನ ಗಿಡಗಳಲ್ಲಿ ಹೂ ಬಿಡುತ್ತಿದ್ದಂತೆ ತೋಟಗಳಿಗೆ ಹೋಗುತ್ತಿದ್ದ ವ್ಯಾಪಾರಸ್ಥರು, ಮರಗಳನ್ನು ಪೂರ್ತಿ ವ್ಯಾಪಾರ ಮಾಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಮಾವಿನ ಬೆಳೆಯೂ ಕಡಿಮೆಯಾಗಿದ್ದು, ಇರುವ ಬೆಳೆ ಮಾರಾಟ ಮಾಲು ರೈತರು ಪರದಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT