ಶುಕ್ರವಾರ, ಡಿಸೆಂಬರ್ 3, 2021
27 °C
ಶಾಸಕ ನಿಸರ್ಗ ನಾರಾಯಣಸ್ವಾಮಿ ಬಣ್ಣನೆ

ಮಾನವೀಯ ಮೌಲ್ಯ ಸಾರುವ ಮಹಾಕಾವ್ಯ: ಶಾಸಕ ನಿಸರ್ಗ ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಭೂಮಿಯ ಮೇಲೆ ಬೆಟ್ಟ, ನದಿಗಳು ಇರುವವರೆಗೂ ರಾಮಾಯಣ ಪ್ರಚಾರಗೊಳ್ಳುತ್ತಲೇ ಇರುತ್ತದೆ ಎಂಬ ಮಾತು ಈ ಗ್ರಂಥದಲ್ಲಿಯೇ ಬಂದಿದೆ. ರಾಮಾಯಣ ಇರುವವರೆಗೂ ವಾಲ್ಮೀಕಿಯ ಹೆಸರೂ ಇರುತ್ತದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಮಹರ್ಷಿ ವಾಲ್ಮೀಕಿ ಉದ್ಯಾನದಲ್ಲಿ ಬುಧವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಮಾಯಣದಲ್ಲಿ ವಾಲ್ಮೀಕಿ ಬರೆದ 24,000 ಶ್ಲೋಕಗಳು ಮತ್ತು ಏಳು ಖಂಡಗಳಿವೆ. ಇದು ಭಾರತೀಯರ ಜೀವನ ಚರಿತ್ರೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ ಎಂದರು.

ವಾಲ್ಮೀಕಿಯು ರಾಮಾಯಣದಲ್ಲಿ ಭರತ ಖಂಡದಲ್ಲಿನ ಅರಣ್ಯಗಳು, ಪರ್ವತಗಳು, ನದಿಗಳು, ಸರೋವರಗಳು, ಸಮುದ್ರಗಳು ಮತ್ತು ಜಲಪಾತಗಳ ಪ್ರಕೃತಿ ಸೌಂದರ್ಯವನ್ನು ವರ್ಣಿಸಿದ್ದಾರೆ. ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯ ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಎಂದು ಹೇಳಿದರು.

ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶ ಪ್ರೇಮ, ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. ಇಂತಹ ಅನನ್ಯವಾದ ರಾಮಾಯಣ ಮಹಾಕಾವ್ಯ ರಚಿಸಿದ ವಾಲ್ಮೀಕಿಯನ್ನು ಕವಿಗಳ ಕವಿ ಎಂದು ಮಹಾಕವಿ ಕಾಳಿದಾಸ ಗೌರವಿಸಿದ್ದಾರೆ ಎಂದರು.

ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಎಸ್. ಭಾಸ್ಕರ್ ಮಾತನಾಡಿ, ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲಿ ಒಂದಾದ ರಾಮಾಯಣ ರಚಿಸಿದ ವಾಲ್ಮೀಕಿ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ಪುರಸಭಾ ಮುಖ್ಯಾಧಿಕಾರಿ ಎ.ಬಿ. ಪ್ರದೀಪ್ ಕುಮಾರ್ ಮಾತನಾಡಿ, ಪ್ರಕೃತಿ ಸೌಂದರ್ಯ, ಬೆಟ್ಟಗುಡ್ಡ, ಪರ್ವತಗಳು ಸೇರಿದಂತೆ ಪ್ರತಿಯೊಂದು ಸ್ಥಳವನ್ನು ಒಂದು ಸ್ಥಳದಲ್ಲೇ ಕೂತು ಕರಾರುವಕ್ಕಾಗಿ ಮಹಾಕಾವ್ಯದಲ್ಲಿ ಉಲ್ಲೇಖಿಸಿರುವ ವಾಲ್ಮೀಕಿ ಅವರು, ವಿಶ್ವಕ್ಕೆ ಸಂಸ್ಕೃತಿಯನ್ನು ಪಸರಿಸಿದ ಆದಿಕವಿಯಾಗಿದ್ದಾರೆ ಎಂದರು.

ಪುರಸಭಾ ಸದಸ್ಯ ಹನೀಪುಲ್ಲಾ ಮಾತನಾಡಿದರು.

ಪುರಸಭಾ ಉಪಾಧ್ಯಕ್ಷ ಎಂ. ಕೇಶವಪ್ಪ, ಸದಸ್ಯರಾದ ರಾಜಣ್ಣ, ರಾಮು, ರಾಧಮ್ಮ ಪ್ರಕಾಶ್, ಮಾಜಿ ಅಧ್ಯಕ್ಷೆ ಅನಸೂಯಮ್ಮ ಸಂಪತ್ ಕುಮಾರ್, ವಾಲ್ಮೀಕಿ ಸಂಘದ ಅಧ್ಯಕ್ಷ ಶ್ರೀರಾಮಪ್ಪ, ಮುಖಂಡರಾದ ಎನ್. ನಾರಾಯಣಸ್ವಾಮಿ, ಎಸ್. ಭಾಸ್ಕರ್, ರಮೇಶ್, ಗೋಪಾಲ್‌
ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.