ಮಂಗಳವಾರ, ಜನವರಿ 21, 2020
19 °C

ವಿಜಯಪುರದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ: ಧರ್ಮ ಶ್ರೇಷ್ಠತೆ ಸಾರಿದ ಸಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಮಾನವನ ಸೇವೆಯೇ ನಿಜವಾದ ಧರ್ಮ ಎಂದು ವಿಶ್ವಕ್ಕೆ ಸಾರಿದ ಮಹಾನ್ ಸಂತ ಸ್ವಾಮಿ ವಿವೇಕಾನಂದ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ತಿಳಿಸಿದರು.

ಇಲ್ಲಿನ ಮಹಾತ್ಮ ಪ್ರೌಢಶಾಲೆಯ ಅವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದ ಸರ್ವಧರ್ಮ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ಮೊದಲ ಸಂತ. ಅವರ ಸಂದೇಶಗಳಲ್ಲಿ ಭೌತಿಕವಾದಕ್ಕಿಂತಲೂ ಮಾನವತಾವಾದವೇ ಪ್ರಮುಖವಾಗಿದೆ. ವಿಶ್ವದಾದ್ಯಂತ ಸಾಮಾಜಿಕ, ನೈತಿಕ, ಅಧ್ಯಾತ್ಮಿಕ ಮೌಲ್ಯಗಳನ್ನು ಬಿತ್ತಿದ ಸ್ವಾಮಿ ವಿವೇಕಾನಂದರು ಶ್ರೇಷ್ಠ ತತ್ವಜ್ಞಾನಿ, ರಾಷ್ಟ್ರ ಪ್ರೇಮದ ಪ್ರತೀಕ. ಧರ್ಮ ಎಂಬುದು ಜಾತಿಮತಗಳಿಗೆ ಮೀರಿದ ವಿಶಾಲವಾದ ಮನುಷ್ಯತ್ವದ ವ್ಯಾಪ್ತಿಯನ್ನು ಒಳಗೊಂಡಿದೆ ಎಂಬುದು ಅವರ ಆಶಯವಾಗಿತ್ತು ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ಶಕ್ತಿಯೇ ಜೀವನ, ನಿಶ್ಯಕ್ತಿಯೇ ಮರಣ ಎಂದು ಪ್ರತಿಪಾದಿಸಿದ ಸ್ವಾಮಿ ವಿವೇಕಾಂದ ತಮ್ಮ ಅಲ್ಪ ಅವಧಿಯ ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟರು. ವಿಶ್ವದಾದ್ಯಂತ ಪರ್ಯಟನೆ ಮಾಡಿ ಮಾನವ ಸಂದೇಶವನ್ನು ಸಾರಿದರು ಎಂದರು.

ಜೀವನ ಕರ್ಮ ಭೂಮಿ. ಅನುಕಂಪ, ಪ್ರೀತಿ, ಸಹೋದರತೆ, ಸರ್ವಧರ್ಮ ಸಹಿಷ್ಣುತೆ, ಕಲೆ, ಸಾಹಿತ್ಯ, ಉನ್ನತ ಪರಂಪರೆಯನ್ನು, ಜೀವರಾಶಿಗಳಿಗೆ ಮುಕ್ತಿ ಕರುಣಿಸುವ ಶ್ರೇಷ್ಠವಾದ ಭೂಮಿ ಭಾರತ ಮಾತ್ರ ಎಂದು ವಿಶ್ವಕ್ಕೆ ಸಂದೇಶವನ್ನು ನೀಡಿದ ವ್ಯಕ್ತಿ ವಿವೇಕಾನಂದ. ವೀರ ಸನ್ಯಾಸಿಯಾಗಿ ಶ್ರೇಷ್ಠ ಪಥದಲ್ಲಿ ಸಾಗಲು ಮಾರ್ಗೋಪಾಯಗಳನ್ನು ಹಾಗೂ ನಾಡಿನ ಸಂಸ್ಕೃತಿಯ ಮಹತ್ವವನ್ನು ಜಗತ್ತಿಗೆ ತಿಳಿಸಿದ ಶ್ರೇಷ್ಠ ಸಂತ ಎಂದರು.

ಮಹಾತ್ಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಅಶ್ವತ್ಥನಾರಾಯಣ ಮಾತನಾಡಿ, ಸ್ವಾಮಿ ವಿವೇಕಾನಂದರು ವ್ಯಕ್ತಿಯಲ್ಲ ಅವರೊಂದು ಶಕ್ತಿ. ಆದ್ದರಿಂದ ಅವರ ಜೀವನ ಮತ್ತು ತತ್ವಾದರ್ಶಗಳು ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವಿವೇಕಾನಂದರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಇಂದಿನ ಯುವಜನಾಂಗ ಸ್ವಾಮಿವಿವೇಕಾನಂದ, ಗೌತಮಬುದ್ಧ, ಅಂಬೇಡ್ಕರ್, ಗಾಂಧೀಜಿಯಂತಹ ಮಹಾನ್ ನಾಯಕರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ರಾಜಗೋಪಾಲ್, ನಗರ ಘಟಕದ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ವಿಶ್ವನಾಥ್, ಮುನಿರಾಜು, ಜೇಸಿಐ ಅಧ್ಯಕ್ಷ ಜನಾರ್ಧನಮೂರ್ತಿ, ಶಿಕ್ಷಕರಾದ ರವಿ, ರಶ್ಮಿ, ಭವ್ಯ, ನಾಗಭೂಷಣ್, ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು