ಮರದ ರೆಂಬೆ ಬಿದ್ದು ಜೆಸಿಬಿ ಜಖಂ

ಶುಕ್ರವಾರ, ಮೇ 24, 2019
29 °C
ಹಳೆಯ ಆರಳಿ ಮರ ಮುರಿದು ಬೀಳುವ ಆತಂಕದಲ್ಲಿ ವಿದ್ಯಾರ್ಥಿಗಳು

ಮರದ ರೆಂಬೆ ಬಿದ್ದು ಜೆಸಿಬಿ ಜಖಂ

Published:
Updated:
Prajavani

ದೇವನಹಳ್ಳಿ: ಇಲ್ಲಿನ ಪುಟ್ಟಪ್ಪನ ಗುಡಿ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಶತಮಾನದ ಹಳೆಯ ಆರಳಿ ಮರದ ರೆಂಬೆ ತಡರಾತ್ರಿ ಮುರಿದು ಬಿದ್ದಿದೆ. 

ಮರದ ಬುಡ ಸೇರಿದಂತೆ ರೆಂಬೆಗಳು ಬಲವಾಗಿವೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಒಳಗೆ ಸಂಪೂರ್ಣ ಟೊಳ್ಳಾಗಿದೆ. ರೆಂಬೆ ಬಿದ್ದ ರಭಸಕ್ಕೆ ಮರದ ಕೆಳಗೆ ನಿಲ್ಲಿಸಿದ್ದ ಜೆ.ಸಿ.ಬಿ ಯಂತ್ರ ಜಖಂ ಆಗಿದೆ. ರಾತ್ರಿ ವೇಳೆ ಬಿದ್ದಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲೂ ಹಾಲು ಮತ್ತು ಬಿಸಿಯೂಟ ನೀಡಲಾಗುತ್ತಿದೆ. ಹಾಗಾಗಿ ಹತ್ತಾರು ಮಕ್ಕಳು ಶಾಲಾ ಮೈದಾನದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಆಟವಾಡುತ್ತಿರುತ್ತಾರೆ. ರಾತ್ರಿ ಘಟನೆ ನಡೆದಿರುವುದರಿಂದ ಆಗಬಹುದಾದ ದುರಂತ ತಪ್ಪಿದೆ ಎನ್ನುತ್ತಾರೆ ಸ್ಥಳೀಯರು.

ಅನೇಕ ವರ್ಷಗಳಿಂದ ಮರವನ್ನು ತೆರವುಗೊಳಿಸಲು ಸ್ಥಳೀಯರು ಒತ್ತಾಯಿಸುತ್ತಲೇ ಇದ್ದಾರೆ. 2016 ಡಿ. 27 ರಂದು ‘ಜೀವಭಯದಲ್ಲಿ ವಿದ್ಯಾರ್ಥಿಗಳ ವ್ಯಾಸಂಗ’ ತಲೆ ಬರಹದಡಿಯಲ್ಲಿ ಪ್ರಜಾವಾಣಿ ಸಮಗ್ರ ವರದಿಯನ್ನ ಪ್ರಕಟಿಸಿತ್ತು. ಅದರೂ ಪುರಸಭೆಯಾಗಲಿ, ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ಎಚ್ಚತ್ತುಕೊಂಡಿಲ್ಲ ಎಂದು ಪೋಷಕರು ದೂರಿದ್ದಾರೆ.

ಆರ್.ಟಿ.ಇ ಕಾರ್ಯಕರ್ತ ಎಂ.ಆಂಜಿನಪ್ಪ ಮಾತನಾಡಿ ‘180 ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಮರದ ಅಪಾಯದ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಮಾಡಿ ಕಟಾವಿಗೆ ಅನುಮತಿ ನೀಡುವಂತೆ ಒತ್ತಾಯಿಸಿದ್ದೆ. 2016 ನ. 15 ರಂದು ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಆದರೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈವರೆಗೆ ಆ ಕೆಲಸ ಆಗಿಲ್ಲ’ ಎಂದು ಕಿಡಿಕಾರಿದರು.

ಒಂದು ರೆಂಭೆ ಮುರಿದು ಬಿದ್ದಿದೆ. ಮತ್ತೊಂದು ಬೃಹತ್ ರೆಂಭೆ ಶಾಲಾ ಕಟ್ಟಡದ ಮೇಲೆ ಚಾಚಿದ್ದು ಯಾವುದೇ ಕ್ಷಣದಲ್ಲಿ ಬೀಳುವ ಸಾಧ್ಯತೆ ಇದೆ. ಸಂಬಂಧಿಸಿದ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಮಾತನಾಡಿ ‘ಅಂದಾಜು ಇನ್ನೂರು ವರ್ಷದ ಮರ. ಅದರ ಕೆಳಗೆ ನಾಗರಕಟ್ಟೆ ಇದೆ. ದೇವರ ಮರವೆಂದು ಯಾರು ಕಟಾವು ಮಾಡಲು ಮುಂದಾಗುತ್ತಿಲ್ಲ. ಈ ಬಗ್ಗೆ ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !