ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರಿಯದ ಬೀದಿ ದೀಪ, ಕತ್ತಲಲ್ಲಿ ಪಟ್ಟಣ

ಕತ್ತಲಲ್ಲಿ ಜನಸಂಚಾರಕ್ಕೆ ತೊಂದರೆ, ಸರಿಪಡಿಸಲು ಅನುದಾನದ ಕೊರತೆ
Last Updated 16 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ವಿಜಯಪುರ:ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಬೀದಿದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲದ ಕಾರಣ ಇಲ್ಲಿನ ಜನರು ಕತ್ತಲಲ್ಲಿ ಭಯದಲ್ಲೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಪ್ರತಿ ವಾರ್ಡ್‌ನ ಬೀದಿಯಲ್ಲೂ ವಿದ್ಯುತ್ ಕಂಬಗಳಿವೆ. ಅವುಗಳಲ್ಲಿ ದೀಪಗಳೂ ಇವೆ. ಆದರೆ ರಾತ್ರಿಯಾದರೂ ಬೆಳಗುವುದಿಲ್ಲ. ಕತ್ತಲಾಗುತ್ತಿದ್ದಂತೆ ಪಟ್ಟಣದ ಬಹುತೇಕ ಭಾಗದಲ್ಲಿ ಮನೆ‌, ಅಂಗಡಿಗಳಲ್ಲಿ ಅಳವಡಿಸಿಕೊಂಡಿರುವ ದೀಪಗಳಿಂದ ಬರುವ ಬೆಳಕಿನಲ್ಲೆ ಜನರ ಸಂಚಾರ, ವ್ಯವಹಾರ ನಡೆಯುವ ಸ್ಥಿತಿ ಇದೆ.

ರಾತ್ರಿಯಾದರೆ ಬೀದಿದೀಪಗಳು ಉರಿಯದ ಕಾರಣದಿಂದ ಬೀದಿಯಲ್ಲಿ ಹಿಂಡಾಗಿ ತಿರುಗುವ ನಾಯಿ, ಗಿಡಗಂಟಿ ಬೆಳೆದಿರುವ ಕಡೆಯಲ್ಲಿ ಹಾವುಗಳ ಕಾಟ ಮುಂತಾದ ಸಮಸ್ಯೆಗಳ ನಡುವೆ ಓಡಾಡುವುದು ಕಷ್ಟವಾಗುತ್ತಿದೆ. ರಾತ್ರಿ ವೇಳೆ ಯಾರೇ ಓಡಾಡಿದರೂ ಅನುಮಾನದಿಂದ ನೋಡುವಂತಾಗಿದೆ. 6 ತಿಂಗಳಿಂದ ಇಲ್ಲಿನ ಬಸ್‌ ನಿಲ್ದಾಣ, ಬಲಮುರಿ ಗಣಪತಿ ದೇವಾಲಯದ ಸರ್ಕಲ್, ಟೌನ್‌ಹಾಲ್ ಸರ್ಕಲ್, ಚೌಡೇಶ್ವರಿ ಸರ್ಕಲ್, ದುರ್ಗಾತಾಯಿ ಕಾಲೊನಿ, ಬಸವನಕುಂಟೆ ಕಾಲೊನಿ, ಸತ್ಯಮ್ಮ ಕಾಲೊನಿ, ಗುವಲಪ್ಪ ನಾರಾಯಣಸ್ವಾಮಿ ಮನೆ ಸಮೀಪ‌ ಹಾಗೂ ಚಂದೇನಹಳ್ಳಿ ಗೇಟ್‌ನಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪಗಳೂ ಉರಿಯುತ್ತಿಲ್ಲ. ಕೆಲ ಕಂಬಗಳಲ್ಲಿ ದೀಪಗಳೇ ಇಲ್ಲ. ಪುರಸಭೆ ಮುಂಭಾಗದಲ್ಲಿ ಮಾತ್ರ ಈಚೆಗೆ ದೀಪ ಉರಿಯುತ್ತಿದೆ. ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಹೈಮಾಸ್ಟ್ ಸೇರಿದಂತೆ ಒಟ್ಟು 4,624 ವಿದ್ಯುತ್ ಕಂಬಗಳಲ್ಲಿ ದೀಪಗಳನ್ನು ಅಳವಡಿಸಲಾಗಿದ್ದು, ಶೇ 80ರಷ್ಟು ದೀಪಗಳು ಬೆಳಗುತ್ತಿಲ್ಲ.

ಕಳೆದ ಕೆಲ ವರ್ಷಗಳಿಂದ ಪಟ್ಟಣದ 23 ವಾರ್ಡ್‌ಗಳಲ್ಲಿ ಬೀದಿ ದೀಪ ನಿರ್ವಹಣೆ ಮಾಡಲು ದೊಡ್ಡಬಳ್ಳಾಪುರದ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿತ್ತು. ಈ ಟೆಂಡರ್ ಫೆ. 28ಕ್ಕೆ ಮುಕ್ತಾಯವಾಗಿದೆ. ಟೆಂಡರ್‌ನಂತೆ ಅವರಿಗೆ ಸಂದಾಯವಾಗಬೇಕಿರುವ ₹ 61.47 ಲಕ್ಷ ಹಣ ಪಾವತಿ ಮಾಡಿಲ್ಲದ ಕಾರಣ ಅವರು ನಿರ್ವಹಣೆ ಮಾಡುವುದನ್ನು ಬಿಟ್ಟಿದ್ದರ ಪರಿಣಾಮ ಪಟ್ಟಣದ ಜನತೆ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.

ವಿದ್ಯುತ್ ದೀಪಗಳ ನಿರ್ವಹಣೆಯಲ್ಲಿ ಆಗುತ್ತಿರುವ ವಿಳಂಬದಿಂದ ಆಗುತ್ತಿರುವ ತೊಂದರೆ ಕುರಿತು ಸಾರ್ವಜನಿಕರು ಪೌರಾಡಳಿತ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ ನಂತರ ತಹಶೀಲ್ದಾರರೇ ಸ್ಥಳಕ್ಕೆ ಭೇಟಿ ನೀಡಿ, ಮೂಲಸೌಕರ್ಯ ತುರ್ತಾಗಿ ಒದಗಿಸುವಂತೆ ಇಲ್ಲಿನ ಅಧಿಕಾರಿಗಳಿಗೆ ಆದೇಶ ನೀಡಿ, ತ್ವರಿತವಾಗಿ ದೀಪಗಳನ್ನು ಅಳವಡಿಸುವಂತೆ ಪುರಸಭೆಯವರಿಗೆ ಸೂಚನೆ ನೀಡಿದ್ದರು. ಆದರೆ ಈವರೆಗೂ ಅದು ಜಾರಿಯಾಗಿಲ್ಲವೆಂಬುದು ಸಾರ್ವಜನಿಕರ ದೂರು.

ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪುರಸಭೆಯವರು ಬೀದಿದೀಪಗಳ ನಿರ್ವಹಣೆ ಮಾಡಲುಮೇ 31ರಂದು ನಗರಾಭಿವೃದ್ಧಿ ಕೋಶದಿಂದ ತಾತ್ಕಾಲಿಕ ಅನುಮೋದನೆ ಪಡೆದು ಹಾಳಾದ ವಿದ್ಯುತ್ ದೀಪಗಳನ್ನು ಬದಲಾವಣೆ ಮಾಡಿ, ಹೊಸ ದೀಪಗಳನ್ನು ಅಳವಡಿಸುವ ಪ್ರಯತ್ನ ಮಾಡಿದರಾದರೂ ಜನರ ನಿರೀಕ್ಷೆಯಂತೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.

ಕೆಲ ವಾರ್ಡ್‌ಗಳಲ್ಲಿ ಮಳೆಗಾಲದಲ್ಲಿ ಬಿದ್ದಿರುವ ಗುಂಡಿಗಳು ಕತ್ತಲೆಯಲ್ಲಿ ಕಾಣದೆ, ಓಡಾಟ ದುಸ್ತರವಾಗಿದೆ. ಅಲ್ಲದೆ ಹಲವು ಅಪಾಯಗಳಿಗೂ ಕಾರಣವಾಗುತ್ತಿದೆ. ಕಳ್ಳರಿಗೆ ಕಳವು ಮಾಡಲು ಉಪಯುಕ್ತವಾಗಿ ಪರಿಣಮಿಸಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ, ಎಂಜಿನಿಯರುಗಳಿಗೆ ಹಲವು ಬಾರಿ ತಿಳಿಸಿದ್ದರೂ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಪುರಸಭೆ ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಒಮ್ಮೆಯೂ ಪಟ್ಟಣಕ್ಕೆ ಬಂದು, ಇಲ್ಲಿನ ಸಮಸ್ಯೆ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿಲ್ಲ. ಪಟ್ಟಣದಲ್ಲಿ ಸಂಚರಿಸಿ, ಇಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ, ತಕ್ಷಣ ಕ್ರಮ ಕೈಗೊಂಡು ಎಲ್ಲ ವಾರ್ಡ್‌ಗಳಲ್ಲಿ ಸಮರ್ಪಕವಾಗಿ ದೀಪಗಳು ಉರಿಯುವಂತೆ ಮಾಡಬೇಕು ಎಂದು ಸ್ಥಳೀಯರಾದ ರಮೇಶ್, ಶಿವಪ್ಪ, ರಾಮಾಂಜಿನಪ್ಪ ಒತ್ತಾಯಿಸಿದ್ದಾರೆ.

ಇಲ್ಲದ ಆಡಳಿತ ಮಂಡಳಿ: ಪುರಸಭೆಗೆ 23 ವಾರ್ಡ್‌ಗಳಿಂದಲೂ ಜನಪ್ರತಿನಿಧಿಗಳ ಆಯ್ಕೆಯಾಗಿದೆ. ಆದರೆ ಅಧ್ಯಕ್ಷ ಸ್ಥಾನದ ಮೀಸಲಾತಿ ವಿಚಾರದಲ್ಲಿ ಸದಸ್ಯರೊಬ್ಬರು ನ್ಯಾಯಾಲಯದ ಮೆಟ್ಟಿಲು ಹತ್ತಿದ ಕಾರಣ ಮೂರು ವರ್ಷಗಳಿಂದ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರು ಇಲ್ಲದೆ ಆಡಳಿತಾಧಿಕಾರಿಯೇ ಕರ್ತವ್ಯ ನಿರ್ವಹಿಸುವಂತಾಗಿದೆ.

ನಂತರ ವಾರ್ಡ್‌ಗಳ ಪುನರ್ ವಿಂಗಡಣೆಯಾಗಿ, ಚುನಾವಣೆಗೆ ಸ್ಪರ್ಧಿಸಲು ವಾರ್ಡ್‌ಗಳಿಗೆ ಮೀಸಲಾತಿ ನಿಗದಿ ಪಡಿಸುತ್ತಿದ್ದಂತೆ ಮೀಸಲಾತಿ ಪಟ್ಟಿಯಲ್ಲಿ ಲೋಪದೋಷವಿದೆ ಎಂದು ಸ್ಥಳೀಯರೊಬ್ಬರು ನ್ಯಾಯಾಲಯಕ್ಕೆ ಹೋಗಿದ್ದ ಕಾರಣ ಪುರಸಭೆಯ 23 ವಾರ್ಡ್‌ಗಳಿಗೆ ಇದುವರೆಗೂ ಚುನಾವಣೆ ನಡೆದಿಲ್ಲ. ಹಾಗಾಗಿ ಇಲ್ಲಿ ಆಡಳಿತ ಮಂಡಳಿಯೂ ಇಲ್ಲ. ಸದಸ್ಯರೂ ಇಲ್ಲದಿರುವುದು ಸಮಸ್ಯೆ ಮತ್ತಷ್ಟು ಉಲ್ಬಣವಾಗಲು ಕಾರಣವಾಗಿದೆ.

ಉಪಯೋಗವಾಗದ ಬಜೆಟ್: ಪುರಸಭೆಯಲ್ಲಿ ಪ್ರತಿವರ್ಷ ಆದಾಯ ಮತ್ತು ಖರ್ಚುಗಳ ಬಗ್ಗೆ ತಯಾರಿಸಲಾಗುತ್ತಿರುವ ಬಜೆಟ್‌ನಲ್ಲಿ ವಿದ್ಯುತ್ ದೀಪಗಳ ನಿರ್ವಹಣೆಗಾಗಿ ಇಂತಿಷ್ಟು ಅನುದಾನ ಮೀಸಲಿಡುತ್ತಿದ್ದರೂ, ವಿದ್ಯುತ್‌ದೀಪ ನಿರ್ವಹಣೆಗೆ ಅನುದಾನ ಪ್ರತ್ಯೇಕ ಮಾಡುತ್ತಿಲ್ಲ. ಗುತ್ತಿಗೆದಾರರಿಗೂ ಹಣ ಸಂದಾಯವಾಗಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಕೋಟ್:

ಓಡಾಡುವುದೇ ದುಸ್ತರ

ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ರಾತ್ರಿ ವೇಳೆ ಬೀದಿ ದೀಪಗಳಿಲ್ಲದ ಕಾರಣ ಓಡಾಡುವುದು ದುಸ್ತರವಾಗಿದೆ. ಪುರಸಭೆಯವರು ಕೂಡಲೇ ಕ್ರಮ ಕೈಗೊಳ್ಳಬೇಕು.
ಗೋವಿಂದರಾಜು ಸ್ಥಳೀಯ ನಿವಾಸಿ

ನಿಲ್ಲದ ಜನರ ಪರದಾಟ

ರಾತ್ರಿ ವೇಳೆ ಬೀದಿ ದೀಪಗಳಿಲ್ಲದ ಕಾರಣ ಮಹಿಳೆಯರು ಓಡಾಡಲು ಭಯ ಪಡುವಂತಾಗಿದೆ. ಮನೆಗಳಿಂದ ಹೊರಬರಲೂ ಆತಂಕವಾಗುತ್ತದೆ. ಆರು ತಿಂಗಳಿನಿಂದ ಜನತೆ ತುಂಬಾ ಪರದಾಡುವಂತಾಗಿದೆ.
ಎಸ್.ಎಲ್.ವಿ.ವೆಂಕಟೇಶ್ 9ನೇ ವಾರ್ಡ್ ನಿವಾಸಿ

ದೀಪಗಳನ್ನು ಸರಿಪಡಿಸಿ

ಸಂಜೆಯಾಗುತ್ತಿದ್ದಂತೆ ಪಟ್ಟಣವೆಲ್ಲಾ ಕತ್ತಲಲ್ಲಿ ಮುಳುಗಿ ಹೋಗುತ್ತದೆ. ರಸ್ತೆಗಳಲ್ಲಿ ಓಡಾಡಲು ಹಿಂಜರಿಕೆ ಇದೆ. ಕೋಲಾರ ಮುಖ್ಯ ರಸ್ತೆಯಲ್ಲಿ ಅಪಘಾತಗಳು ಪದೇ ಪದೇ ಸಂಭವಿಸುತ್ತಲೇ ಇವೆ. ಹೈಮಾಸ್ಟ್ ದೀಪದ ಕಂಬದಲ್ಲಿನ ದೀಪಗಳನ್ನು ಬಿಚ್ಚಿ ಹಾಕಿದ್ದಾರೆ. ಕೂಡಲೇ ಸರಿಪಡಿಸಬೇಕು.
ರಿಯಾಜ್ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಮುಖಂಡ

ಸಮನ್ವಯದ ಕೊರತೆ

ಪಟ್ಟಣದಲ್ಲಿ ಪುರಸಭೆಗೆ ಸದಸ್ಯರೂ ಇಲ್ಲ, ಅಧ್ಯಕ್ಷರೂ ಇಲ್ಲ. ಅವರನ್ನು ಕೇಳುವವರು ಯಾರು. ಅಧಿಕಾರಿಗಳನ್ನು ಕೇಳಿದರೆ ಅನುದಾನಗಳಿಲ್ಲ ಎನ್ನುತ್ತಾರೆ. ಸರ್ಕಾರದೊಂದಿಗೆ ಸಮನ್ವಯತೆ ಸಾಧಿಸಿ ಅನುದಾನ ತರಬೇಕು. ಆದರೆ ಅದನ್ನು ಮಾಡುವವರೇ ಇಲ್ಲ. ಇನ್ನು ಪಟ್ಟಣದಲ್ಲಿ ಅಭಿವೃದ್ಧಿ ಹೇಗಾದೀತು.
ಕನಕರಾಜು ತಾಲ್ಲೂಕು ಬಿಜೆಪಿ ಮುಖಂಡ

ಅಧಿಕಾರಿಗಳ ವಿಫಲತೆ

ಪ್ರತಿ ಬಾರಿ ಆದಾಯವಿಲ್ಲ ಎಂದು ಹೇಳುವ ಅಧಿಕಾರಿಗಳು, ಪುರಸಭೆ ಅಂಗಡಿ ಮಳಿಗೆಗಳು ಸೇರಿದಂತೆ ವಿವಿಧ ಮೂಲಗಳಿಂದ ಆದಾಯ ವಸೂಲಿ ಮಾಡುವಲ್ಲಿ ವಿಫಲರಾಗುತ್ತಿದ್ದಾರೆಯೇ ಎಂಬ ಅನುಮಾನವಿದೆ. ಆದಾಯವಿಲ್ಲ ಎನ್ನುವ ಕಾರಣಕ್ಕೆ ಜನರಿಗೆ ಸಿಗಬೇಕಾದ ಸೌಲಭ್ಯ ಒದಗಿಸದಿದ್ದರೆ ಹೇಗೆ.
ಅಸ್ಲಂ ಸ್ಥಳೀಯ ನಿವಾಸಿ

ಮಕ್ಕಳು, ಮಹಿಳೆಯರಿಗೆ ಸಂಕಷ್ಟ

ಇಲ್ಲಿನ ಶಾಂತಿನಗರದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಂಬಗಳಲ್ಲಿ ದೀಪಗಳಿಲ್ಲ. ರಾತ್ರಿ ವೇಳೆ ಮನೆಯಿಂದ ಹೊರಗೆ ಕಾಲಿಡಲೂ ಭಯ. ಮಹಿಳೆಯರು, ಮಕ್ಕಳು ಓಡಾಡುವುದೇ ದುಸ್ತರವಾಗಿದೆ. ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಳ್ಳಬೇಕು.
ರಾಜಣ್ಣ ಶಾಂತಿನಗರದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT