ಮಂಗಳವಾರ, ಜನವರಿ 21, 2020
20 °C
ಅಂತರ್ಜಲ ಮಟ್ಟ ಕುಸಿತಕ್ಕೆ ಬಿದಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಮುನಿರಾಜು ಕಳವಳ

ನೀರು ಮಿತ ಬಳಕೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಅಂತರ್ಜಲ ಮಟ್ಟ ಕುಸಿಯುತ್ತಿರುವ ಕಾರಣ ಸಾರ್ವಜನಿಕರು ನೀರಿನ ಮಿತಬಳಕೆಗೆ ಮುಂದಾಗಬೇಕು ಎಂದು ಬಿದಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಮುನಿರಾಜು ಮನವಿ ಮಾಡಿದರು.

ಇಲ್ಲಿನ ಸಾವಕನಹಳ್ಳಿ ಗ್ರಾಮದ ಬಳಿ ಇರುವ ದೊಡ್ಡಅಮಾನಿಕೆರೆಯಲ್ಲಿ ಟಾಸ್ಕ್ ಫೋರ್ಸ್ ಅನುದಾನದಲ್ಲಿ ಕೊರೆಯಿಸಲಾದ ಕೊಳವೆಬಾವಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.

‘ನನ್ನ ಪತ್ನಿ, ಜಿಲ್ಲಾ ಪಂಚಾಯಿತಿ ಸದಸ್ಯೆ ರಾಧಮ್ಮ ಅನುದಾನ ಮತ್ತು ಟಾಸ್ಕ್ ಫೋರ್ಸ್ ಅಡಿಯಲ್ಲಿ ಆವತಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ನಾಲ್ಕು ವರ್ಷಗಳಿಂದ 450ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ಶೇ 50 ರಷ್ಡು ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿಲ್ಲ. ಕೊಳವೆ ಬಾವಿ ಕೊರೆದು ಸಮೃದ್ಧ ನೀರು ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ ಹತ್ತಾರು ದಿನಗಳಲ್ಲೇ ನೀರು ಇರುವುದಿಲ್ಲ ಎಂದರೆ ಅಂತರ್ಜಲ ಮಟ್ಟ ಯಾವ ಸ್ಥಿತಿಗೆ ತಲುಪಿದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಪ್ರಸ್ತುತ ಕೆರೆಯಂಗಳದಲ್ಲಿ ಕೊರೆಯಿಸಿರುವ ಕೊಳವೆ ಬಾವಿ 1,200 ಅಡಿ ಇದೆ. ಇಲ್ಲಿ ಈ ಮಟ್ಟದಲ್ಲಿ ಆಳವೆಂದರೆ ಬೇರೆ ಕಡೆ ಎಷ್ಟು ಆಳದಲ್ಲಿ ಕೊರೆಯಿಸಿದರೆ ನೀರು ಸಿಗಲಿದೆ ಎನ್ನುವ ಖಾತರಿ ಇಲ್ಲ. ಸದ್ಯಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ನೀರಿನ ಅಭಾವ ಬೇಸಿಗೆಯಲ್ಲಿ ಬರಬಹುದು ಎಂಬ ಮುಂದಾಲೋಚನೆಯಿಂದ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಹೇಳಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ಮುನಿರಾಜು ಮಾತನಾಡಿ, ‘ಅಂತರ್ಜಲದ ಮೂಲಗಳು ನಾಶವಾಗುತ್ತಿವೆ. ನೀರನ್ನು ವಿಪರೀತವಾಗಿ ಬಳಸಲಾಗುತ್ತಿದೆ. ಗ್ರಾಮಗಳಲ್ಲಿ ಪೂರೈಕೆ ಮಾಡುವ ನೀರು ವ್ಯರ್ಥವಾಗಿ ಹರಿಯುತ್ತಿರುತ್ತದೆ. ಚರಂಡಿಗಳ ಸ್ವಚ್ಛತೆ, ಬೀದಿ ದೀಪಗಳ ಉರಿಯುವಿಕೆಗೆ ಪ್ರತಿಯೊಂದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳತ್ತ ಬೊಟ್ಟು ಮಾಡುವುದು ಸರಿಯಲ್ಲ; ನಮಗೂ ಕಾಳಜಿ ಬೇಕು’ ಎಂದು ಹೇಳಿದರು.

ಎಂ.ಪಿ.ಸಿ.ಎಸ್ ಕಾರ್ಯದರ್ಶಿ ಕುಮಾರ್, ಮುಖಂಡರಾದ ಚಿಕ್ಕನಾರಾಯಣಸ್ವಾಮಿ, ರಮೇಶ್, ಚಂದನ್ ಗೌಡ, ರಾಮಣ್ಣ, ಪಿಳ್ಳಪ್ಪ, ಮುನಿಯಪ್ಪ, ರಾಮಪ್ಪ, ಕಾಳಪ್ಪ, ನರಸಿಂಹಪ್ಪ, ಎಸ್.ಕೆ.ಮುನಿರಾಜು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು