ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಕಾಲದ ಶಾಸನ ಪತ್ತೆ

Last Updated 6 ಫೆಬ್ರುವರಿ 2020, 13:56 IST
ಅಕ್ಷರ ಗಾತ್ರ

ದೇವನಹಳ್ಳಿ: ಇಲ್ಲಿನ ಕಸಬಾ ಹೋಬಳಿ ಬೊಮ್ಮವಾರ ಗ್ರಾಮದಿಂದ ಉಗನವಾಡಿ ಗ್ರಾಮದ ಕಡೆಗೆ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿರುವ ಆನಂದ್ ಕುಮಾರ್ ಮನೆಯ ಬಳಿ ವಿಜಯನಗರ ಕಾಲದ ಅಪ್ರಕಟಿತ ಕನ್ನಡ ಲಿಪಿ ಶಾಸನ ಪತ್ತೆಯಾಗಿದೆ ಎಂದು ಇತಿಹಾಸ ಸಂಶೋಧಕ ಬಿಟ್ಟಿಸಂದ್ರ ಗುರುಸಿದ್ಧಯ್ಯ ಹೇಳಿದರು.‌

ಇದರ ಬಗ್ಗೆ ಮಾಹಿತಿ ನೀಡಿ, ಕನ್ನಡ ಲಿಪಿ ಶಾಸನ ಪತ್ತೆ ಹಚ್ಚಿದ ನಂತರ ಮೈಸೂರಿನ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಮಾಹಿತಿಗಾಗಿ ಶಾಸನದ ರೂಪುರೇಷೆಯನ್ನು ನೀಡಿದಾಗ ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿನ ಶಾಸನವೆಂದು ಧೃಡಪಟ್ಟಿದೆ ಎಂದು ಹೇಳಿದರು.

ಶಾಸನದಲ್ಲಿ ಉಲ್ಲೇಖವಾಗಿರುವ ಅಂಶವೇನೆಂದರೆ ‘ಮಹಾ ಮಂಡಳೇಶ್ವರ ಭಾಷೆಗೆ ತಪ್ಪದ ರಾಯರ ಗಂಡ ಚತುಸಮುದ್ರಾಧಿಪತಿ ಹರಿಯಪ್ಪ ಒಡೆಯನ ಆಳ್ವಿಕೆ ಕುರಿತು 20 ಸಾಲುಗಳಲ್ಲಿ ವರ್ಣಿಸಲಾಗಿದೆ. ಕನ್ನಡ ಭಾಷೆ ವಿಜಯನಗರ ಸಾಮ್ರಾಜ್ಯದಲ್ಲಿ ಬಹಳಷ್ಟು ಪ್ರಬುದ್ಧಮಾನವಾಗಿ ಬೆಳೆದಿತ್ತು’ ಎಂಬುದನ್ನು ಇಲ್ಲಿ ಉಲ್ಲೇಖಿಸಿರುವ ಶಾಸನದಲ್ಲಿನ ಕಾಲವನ್ನು ಕನ್ನಡ ಸಂಖ್ಯೆಯಲ್ಲಿ ಶಕವರ್ಷ 1267 ಎಂದು ಇದೆ.

‘1200 ರಿಂದ 1346ರವರೆಗೆ ವಿಜಯನಗರ ಸಾಮ್ರಾಜ್ಯ ಅಸ್ತಿತ್ವದಲ್ಲಿತ್ತು. ಈ ಪ್ರಾಂತದವರೆಗೆ ವಿಸ್ತಾರಗೊಂಡಿತ್ತು. ಕಲ್ಲಿನ ಇತಿಹಾಸದಂತೆ ವಿಜಯನಗರ ಸಾಮ್ರಾಜ್ಯವನ್ನಾಳಿದ ಸಂಗಮ ವಂಶದ ಒಂದನೇ ಹರಿಹರ ದೊರೆ ಎಂದು ಸ್ವಷ್ಟಪಡಿಸಿದ್ದಾರೆ’ ಎಂದು ಹೇಳಿದರು.

ಶಾಸನದಲ್ಲಿ ಕನ್ನಡ ಅಕ್ಷರಗಳು ಒಂದಕ್ಕೊಂದು ಜೋಡಣೆಯಾಗಿವೆ. ಸೂಕ್ಷವಾಗಿ ಗಮನಿಸಬೇಕು ಇಂದಿನ ಯಲಹಂಕವನ್ನು ಎಲಹಕ್ಕ ನಾಡು ಎಂದು ಉಲ್ಲೇಖಿಸಲಾಗಿದೆ. ಚೆನ್ನಯ್ಯನಾಯಕನಿಗೆ ಬೊಮ್ಮವಾರ ಗ್ರಾಮವನ್ನು ದಾನ ನೀಡಿದ ವಿಷಯ ಪ್ರಸ್ತಾಪಿಸಲಾಗಿದೆ.

ಈ ಶಾಸನದ ವಿವರಣೆಯನ್ನು ಮೈಸೂರಿನ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಸಹಾಯ ಅಧೀಕ್ಷಕ ಡಾ.ಎಸ್ ನಾಗರಾಜಪ್ಪ ನೀಡಿದ್ದಾರೆ ಎಂದು ಹೇಳಿದರು.

ಪ್ರಾಗೈತಿಕ ನೆಲೆಯುಳ್ಳ ತಾಲ್ಲೂಕಿನಲ್ಲಿ ಇತ್ತೀಚೆಗೆ ಹಲವಾರು ಗ್ರಾಮಗಳಲ್ಲಿ 40ಕ್ಕೂ ಹೆಚ್ಚು ಅಪ್ರಕಟಿತ ಕನ್ನಡ ಮತ್ತು ತಮಿಳು ಭಾಷೆಯ ಶಾಸನಗಳು ಪತ್ತೆಯಾಗಿವೆ. ಕೆಲ ಶಾಸನಗಳನ್ನು ಇಲಾಖೆ ಅಧಿಕಾರಿಗಳಾದ ಕಾವ್ಯ, ಡಾ.ಟಿ. ಕೃಷ್ಣಮೂರ್ತಿ, ಇತಿಹಾಸ ಸಂಶೋಧಕ ಕೆ.ಆರ್.ನರಸಿಂಹನ್, ಗೋಪಾಲಗೌಡ ಕಲ್ವಮಂಜಲಿ, ಧನಪಾಲ್ ಅವರು ಶಾಸನಗಳಲ್ಲಿನ ಸಾರಾಂಶವನ್ನು ತಿಳಿಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದರು.

‘ದೇವನಹಳ್ಳಿ ನೆಲದ ಐತಿಹಾಸಿಕ ಕುರುಹುಗಳು ಚರಿತ್ರೆಯ ಪುಟದಲ್ಲಿ ಗುರುತಿಸುವ ಕೆಲಸ ಆಗಬೇಕು. ಜಿಲ್ಲಾ ಕೇಂದ್ರದ ಬಳಿ ಪ್ರಾಚೀನ ಶಾಸನ ಸಂಗ್ರಹಾಲಯ ನಿರ್ಮಾಣ ಮಾಡಿ ಯುವ ಸಮುದಾಯಗಳಿಗೆ ಮತ್ತು ಇತಿಹಾಸ ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಒತ್ತಾಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT