ವಿಜಯಪುರ(ದೇವನಹಳ್ಳಿ): ಹೋಬಳಿಯ ಚಂದೇನಹಳ್ಳಿ, ಪುರ, ಎ.ರಂಗನಾಥಪುರ, ಪಿ.ರಂಗನಾಥಪುರ, ಸಿ.ಎನ್.ಹೊಸೂರು ಸೇರಿದಂತೆ ಹಲವು ಹಳ್ಳಿಗಳಿಗೆ ಸಾರಿಗೆ ಸೌಲಭ್ಯ ಇಲ್ಲದೆ ವಿದ್ಯಾರ್ಥಿಗಳು ನಿತ್ಯ ಎರಡು ಕಿಲೋ ಮೀಟರ್ ನಡೆದುಕೊಂಡು ಪ್ರೌಢಶಾಲೆ ತಲುಪಬೇಕಿದೆ.
ಈ ಐದು ಗ್ರಾಮಗಳು ನಿತ್ಯ ವಿಜಯಪುರದಲ್ಲಿರುವ ಪ್ರೌಢಶಾಲೆಗೆ ನಡೆದುಕೊಂಡು ಹೋಗಬೇಕು.
ಪ್ರತಿನಿತ್ಯ ಶಾಲೆಗೆ ಹೋಗುವ ಚಂದೇನಹಳ್ಳಿ, ಪುರ ಗ್ರಾಮಗಳ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕೆರೆಯಲ್ಲಿ ನಡೆದುಕೊಂಡು ಬರುತ್ತಾರೆ. ಮಳೆ ಬಂದರೆ, ಮುಖ್ಯರಸ್ತೆಯ ಮೂಲಕ ನಡೆದುಕೊಂಡು ಶಾಲೆ ಮುಟ್ಟಬೇಕು.
ಬಸ್ ಸೌಲಭ್ಯ ಹಾಗೂ ರಾಜ್ಯ ಸರ್ಕಾರ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ನಿಲ್ಲಿಸಿರುವುದು ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟು ಮಾಡಿದೆ.
ಮುಖ್ಯರಸ್ತೆ ಮೂಲಕ ಶಾಲೆ ತಲುಪಿಬೇಕಾದರೆ ದೂರು ಆಗುತ್ತದೆ ಎಂಬ ಕಾರಣಕ್ಕೆ ಪ್ರೌಢಶಾಲೆಗೆ ಹೋಗುವ ವಿದ್ಯಾರ್ಥಿನಿಯರು ಕೆರೆ ಮೂಲಕ ಗಿಡಗೆಂಟಿ ಮೂಲಕ ನಡೆದುಕೊಂಡು ಹೋಗುತ್ತಾರೆ. ಇದು ಪೋಷಕರಲ್ಲಿ ಕಳವಳ ಹುಟ್ಟಿಸಿದೆ.
ರಾಜ್ಯ ಸರ್ಕಾರ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸೈಕಲ್ ವಿತರಣೆ ಮಾಡಿದರೆ ಉತ್ತಮ. ಹಳ್ಳಿಗಳಿಂದ ಪಟ್ಟಣಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇಲ್ಲವಾದರೆ, ನಡೆದುಕೊಂಡು ಹೋಗುವವರು, ಶಾಲೆ ಬಿಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಪೋಷಕರು ತಿಳಿಸಿದ್ದಾರೆ.
ಸಚಿವರ ಮಾತಿಗೆ ಕಿಮ್ಮತ್ತಿಲ್ಲ
ತಾಲ್ಲೂಕಿನಲ್ಲಿ ಸಾರಿಗೆ ಸೌಲಭ್ಯ ಇಲ್ಲದೆ ಹಳ್ಳಿಗಳಿಗೆ ಬಸ್ ನಿಯೋಜಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸೂಚಿಸಿದ್ದರು. ಬಸ್ ಇಲ್ಲದ ಗ್ರಾಮ ಹಾಗೂ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಬಿಡಬೇಕೆಂದು ಸಾರಿಗೆ ಮತ್ತು ಬಿಎಂಟಿಸಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಸಚಿವರ ಮಾತಿಗೂ ಕಿಮ್ಮತ್ತಿಲ್ಲ ಇಲ್ಲದಂತಾಗಿದೆ. ಚಂದೇನಹಳ್ಳಿ ಗೇಟ್ ನಿಂದ ಸಿ.ಎನ್.ಹೊಸೂರು ಮಾರ್ಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಕಡೆಗೆ ಸಾಗಲು ಒಂದು ಬಸ್ ಕೂಡಾ ಸಂಚಾರ ಮಾಡುತ್ತಿಲ್ಲ. ಅಧಿಕಾರಿಗಳು ಸಚಿವರ ಆದೇಶವನ್ನು ಪಾಲಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.