ವಿಜಯಪುರ(ದೇವನಹಳ್ಳಿ): ವಿಜಯಪುರ–ಶಿಡ್ಲಘಟ್ಟ ಮುಖ್ಯರಸ್ತೆಯ ನಡುವೆ ಇರುವ ಚರಂಡಿ ಕಿರಿದಾಗಿದ್ದು, ಅದನ್ನು ತೆರವುಗೊಳಿಸಿ, ಕೆರೆಯಿಂದ ಹರಿದು ಬರುವ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಎರಡು ವರ್ಷದ ಹಿಂದೆ ಅಮಾನಿಕೆರೆ ಕೋಡಿ ಬಿದ್ದಿದಾಗ ಇಲ್ಲಿನ ಮೋರಿಯಲ್ಲಿ ಅಷ್ಟು ನೀರು ಹರಿಯಲು ಸಾಧ್ಯವಾಗದೇ ಸುತ್ತಮುತ್ತಲಿನ ಪ್ರದೇಶವು ಮುಳುಗಡೆಯಾಗಿತ್ತು. ಮೋರಿಗೆ ಅಡ್ಡಲಾಗಿ ನಿರ್ಮಿಸಿದ್ದ ತಡೆಗೋಡೆ ಕೊಚ್ಚಿಕೊಂಡು ಹೋಗಿತ್ತು. ಸಮೀಪದ ಮನೆಗಳಿಗೆ ನೀರು ನುಗ್ಗಿತ್ತು. 10 ದಿನಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಮತ್ತೊಮ್ಮೆ ಕೆರೆ ತುಂಬಿ ಕೋಡಿ ಹರಿದರೆ ಮೋರಿ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇದೆ. ಹೀಗಾಗಿ ವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸಚಿವ ಕೆ.ಎಚ್.ಮುನಿಯಪ್ಪ ತಮ್ಮ ಸ್ವ ಗ್ರಾಮ ಕಂಬದಹಳ್ಳಿ ಹೋಗಬೇಕಾದರೂ ಇದೇ ರಸ್ತೆಯಲ್ಲಿ ಹೋಗಿ ಬರುತ್ತಾರೆ. ಈ ಮೋರಿಯ ಬಗ್ಗೆ ಅವರು ಗಮನಹರಿಸಬೇಕು ಎಂದು ಸ್ಥಳೀಯ ಒತ್ತಾಯಿಸಿದ್ದಾರೆ.
ಮೋರಿಯಲ್ಲಿ ನೀರು ಸಾರಾಗವಾಗಿ ಹರಿಯದ ಕಾರಣ 2 ವರ್ಷಗಳ ಹಿಂದೆ ಸುತ್ತಮುತ್ತಲಿನ ಪ್ರದೇಶ ನೀರಿನಲ್ಲಿ ಮುಳುಗಡೆಯಾಗಿತ್ತು.(ಸಂಗ್ರಹ ಚಿತ್ರ)