ಶುಕ್ರವಾರ, ಮಾರ್ಚ್ 31, 2023
26 °C
ದೇವನಹಳ್ಳಿ: ಶಿಕ್ಷಕರ ಮತಯಾಚನೆ ಕಾರ್ಯಕ್ರಮದಲ್ಲಿ ಎ.ಪಿ.ರಂಗನಾಥ್‌

ಶಿಕ್ಷಕರ ಕಲ್ಯಾಣನಿಧಿ ಸರ್ಕಾರದ್ದಲ್ಲ : ಎ.ಪಿ.ರಂಗನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ಶಾಲಾ ಮಕ್ಕಳು ಮತ್ತು ಶಿಕ್ಷಕರು ನೀಡಿರುವ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ₹ 450 ಕೋಟಿ ಸರ್ಕಾರದ ಹಣವಲ್ಲ’ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ದೂರಿದರು.

ಇಲ್ಲಿನ ನಂದಿ ಉಪಚಾರ ಪಾರ್ಟಿ ಸಭಾಂಗಣದಲ್ಲಿ ಶಿಕ್ಷಕರ ಮತಯಾಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೋವಿಡ್ 19ರ ಸೋಂಕಿನ ಪರಿಣಾಮ ಖಾಸಗಿ ಶಾಲಾ ಶಿಕ್ಷಕರು ಮತ್ತು ಉಪನ್ಯಾಸಕರ ಪರಿಸ್ಥಿತಿ ಶೋಚನೀಯವಾಗಿದೆ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿ.ಯು.ಸಿ ಫಲಿತಾಂಶದಲ್ಲಿ ಶೇಕಡಾವಾರು ಏರಿಕೆ ಮತ್ತು ಗುಣಮಟ್ಟ ಕಾಯ್ದುಕೊಳ್ಳಲು ಅವರ ಪಾತ್ರವನ್ನು ಕಡೆಗಣಿಸುವಂತಿಲ್ಲ. ಅಂತಹ ಶಿಕ್ಷಕರಿಗೆ ಸರ್ಕಾರ ಪ್ಯಾಕೇಜ್ ಘೋಷಿಸಬೇಕು’ ಎಂದು ಒತ್ತಾಯಿಸಿದರು.

‘ಶಿಕ್ಷಕರ ಮತ್ತು ಉಪನ್ಯಾಸಕರ ವಿವಿಧ ಬೇಡಿಕೆ ಈಡೇರಿಕೆಗೆ ಕಳೆದ ಒಂದು ವರ್ಷದಿಂದ 10 ಬಾರಿ ಹೋರಾಟ ನಡೆಸಿದ್ದೇನೆ. 11ನೇ ಬಾರಿ ನಡೆದ ಹೋರಾಟದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ನಡೆಸಿದ ಪರಿಣಾಮ ಶಾಲೆಗಳಲ್ಲಿ ದಾಖಲಾತಿಗೆ ಅವಕಾಶ ನೀಡಿ, ಖಾಸಗಿ ಶಾಲಾ ಶಿಕ್ಷಕರಿಗೆ ವೇತನ ನೀಡುವಂತೆ ಶಾಲಾ ಆಡಳಿತ ಮಂಡಳಿಗೆ ಶಿಕ್ಷಣ ಸಚಿವ ತಾಕೀತು ಮಾಡಿದ್ದಾರೆ’ ಎಂದು ಹೇಳಿದರು.

‘ರಾಜ್ಯದೆಲ್ಲೆಡೆ ಕೊರೊನಾ ಸೋಂಕಿನ ಭಯ ಹೆಚ್ಚುತ್ತಿರುವಾಗಲೇ ಭೂಸುಧಾರಣಾ ಕಾಯ್ದೆಗೆ ಮತ್ತು ಎ.ಪಿ.ಎಂ.ಸಿ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಯಾವ ಉದ್ದೇಶಕ್ಕೆ ಎಂಬುದು ಬಹುತೇಕ ರೈತರಿಗೆ ಇನ್ನು ಅರ್ಥವಾಗಿಲ್ಲ’ ಎಂದು ಹೇಳಿದರು.

‘ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಮಾಸಿಕ ₹ 400 ಹೆಚ್ಚುವರಿ ಭತ್ಯೆ ನೀಡಿದ್ದಾರೆ. 7ನೇ ವೇತನ ಆಯೋಗದ ಅನ್ವಯ ₹ 1,300 ಕೋಟಿ ಉಪನ್ಯಾಸಕರಿಗೆ ದೊರಕಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ ವ್ಯಾಪ್ತಿಯಲ್ಲಿ 36 ವಿಧಾನಸಭಾ ಕ್ಷೇತ್ರಗಳಿದ್ದು 21,500 ಮತದಾರರಿದ್ದಾರೆ’ ಎಂದು ಹೇಳಿದರು.

‘2014ರ ಮತದಾರ ಪಟ್ಟಿಯಲ್ಲಿ ಬಸ್ ಚಾಲಕರು, ಗಾರ್ಮೆಂಟ್ ಉದ್ಯೋಗಿಗಳು ಇದ್ದರು. ಒಟ್ಟು 2 ಸಾವಿರಕ್ಕಿಂತ ಹೆಚ್ಚು ನಕಲಿ ಮತದಾರರನ್ನು ಈ ಬಾರಿ ಚುನಾವಣಾ ಆಯೋಗ ಪರಿಷ್ಕರಿಸಿ ಕೈಬಿಟ್ಟಿದೆ. ಇದರಲ್ಲಿ ಭಾಗಿಯಾಗಿದ್ದ 9 ಅಧಿಕಾರಿಗಳ ಪೈಕಿ ಕೆಲವರು ಅಮಾನತುಗೊಂಡಿದ್ದು ಕೆಲವರಿಗೆ ನೋಟಿಸ್ ನೀಡಲಾಗಿದೆ’ ಎಂದು ಹೇಳಿದರು.

‘3 ಬಾರಿ ಈ ಹಿಂದೆ ಆಯ್ಕೆಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಸುಫಾರಿ ಕಿಲ್ಲರ್ ತರಹ ಸಮ್ರಿಶ್ರ ಸರ್ಕಾರ ಉರುಳಿಸಲು ನೆರವಾದರೂ, ಸುಫಾರಿ ಹಣದಿಂದಲೇ ಮತ್ತೆ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಮತದಾರರು ಜೆಡಿಎಸ್ ಪಕ್ಷವನ್ನು ಎಂದಿಗೂ ಕೈಬಿಡಲ್ಲ ಎನ್ನುವ ವಿಶ್ವಾಸವಿದೆ’ ಎಂದು ಹೇಳಿದರು.

ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘ ರಾಜ್ಯ ಘಟಕ ಜಂಟಿ ಕಾರ್ಯದರ್ಶಿ ಹೂಡಿ ಸುರೇಶ್, ಸಂಘಟನಾ ಕಾರ್ಯದರ್ಶಿ ನರಸೇಗೌಡ, ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘರಾಜ್ಯ ಘಟಕ ಅಧ್ಯಕ್ಷ ಮುಕುಂದ್ ರಾಜ್, ಕಸಾಪ ತಾಲ್ಲೂಕು ಉಪಾಧ‍್ಯಕ್ಷ ರಾಮಾಂಜನಪ್ಪ, ಬೆಂಗಳೂರು ಉತ್ತರ ಜಿಲ್ಲೆ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು