ಬುಧವಾರ, ಮಾರ್ಚ್ 3, 2021
31 °C

ರೈತರ ಸಮಸ್ಯೆ ಪರಿಹಾರಕ್ಕೆ ವಿಎಸ್ಎಸ್ಎನ್ ಮುಂದಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ‘ಸಹಕಾರ ಸಂಘಗಳು ಪರಸ್ಪರ ವಿಶ್ವಾಸದಿಂದ ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸಬೇಕು. ಈ ಮೂಲಕ ರಾಜಕೀಯ ರಹಿತವಾಗಿ ಸಹಕಾರ ಸಂಘಗಳನ್ನು ಬೆಳೆಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ ತಿಳಿಸಿದರು.

ಅವರು ಪಟ್ಟಣದಲ್ಲಿ ವ್ಯವಸಾಯ ಸೇವಾ ಸಹಕಾರ ನಿಯಮಿತ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

‘ಸದಸ್ಯರು ಒಗ್ಗೂಡಿ ಕೆಲಸ ಮಾಡಬೇಕು. ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಿದರೆ ಎಲ್ಲಾ ಸಂಘಗಳು ಮಾದರಿ ಸಂಘಗಳಾಗಲು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಿದೆ. ವ್ಯವಸಾಯ ಸೇವಾ ಸಹಕಾರ ಸಂಘಗಳು ರೈತರ ಸೇವೆಗಾಗಿ ಇರುವ ಸಂಘಗಳಾಗಿದ್ದು ಈ ಮೂಲಕ ರೈತರಿಗೆ ಸಾಲ ಸೌಲಭ್ಯ ಹಾಗೂ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು. ರೈತರು ಮೀಟರ್‌ ಬಡ್ಡಿಗೆ ಸಿಲುಕದಂತೆ ರೈತರಿಗೆ ಸಾಲ ಸೌಲಭ್ಯ ಸಹಕಾರ ಸಂಘಗಳ ಮೂಲಕ ದೊರೆಯಬೇಕು’ ಎಂದರು.

‘ಇತ್ತೀಚೆಗೆ ಮಳೆಯ ಅಭಾವದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಮನ್ನಾ ಮಾಡಿದರೂ ಮಳೆ ಬೀಳದಿದ್ದರೆ ರೈತರ ಬದುಕು ಕಷ್ಟವಾಗುತ್ತದೆ. ಪ್ರಗತಿಪರ ರೈತರು ಸಾಲಮನ್ನಾ ಬೇಡ. ರೈತರಿಗೆ ಬೆಂಬಲ ಬೆಲೆ, ವಿದ್ಯುತ್ ಹಾಗೂ ನೀರಿನ ಸೌಲಭ್ಯ ನೀಡಿದರೆ ಸ್ವತಂತ್ರವಾಗಿ ಆದಾಯಗಳಿಸುತ್ತೇವೆ ಎಂಬ ಮಾತನ್ನು ಹೇಳುತ್ತಾರೆ. ಆದರೆ ಸರ್ಕಾರಗಳು ಇವರ ಬೇಡಿಕೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಸಹಕಾರ ಸಂಘಗಳು ರೈತರ ಬೆನ್ನೆಲಬಾಗಿ ಕೆಲಸ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜು ಮಾತನಾಡಿ, ‘ಆನೇಕಲ್ ತಾಲ್ಲೂಕಿನಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘಗಳು ಉತ್ತಮ ಆಡಳಿತ ನೀಡುತ್ತಿವೆ. ರೈತರ ಬೇಕು ಬೇಡಗಳನ್ನು ಗುರುತಿಸಿ ಅವರ ಸಮಸ್ಯೆಗಳಿಗೆ ದನಿಯಾಗಿವೆ. ಸಾಲ ಸೌಲಭ್ಯಗಳನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡುವ ಮೂಲಕ ಸಹಕಾರ ಸಂಘಗಳನ್ನು ನಮ್ಮದು ಎಂಬ ಭಾವನೆಯಿಂದ ಕೆಲಸ ಮಾಡಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕವಿತಾ ಸಂಪತ್, ಉಪಾಧ್ಯಕ್ಷ ಚಂದ್ರಕಲಾ.ಟಿ.ವಿ.ಬಾಬು, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುನಿರಾಮರೆಡ್ಡಿ, ಉಪಾಧ್ಯಕ್ಷ ದಿನ್ನೂರು ಪಿ.ರಾಜು, ಕಾರ್ಯದರ್ಶಿ ವೆಂಕಟಮಾರೇಗೌಡ, ನಿರ್ದೇಶಕರಾದ ಪದ್ಮ ಮುನಿರಾಜು, ಕೆ.ಪದ್ಮಮ್ಮ, ಮಂಜುನಾಥ್, ಆನಂದ್, ಪಿ.ಜಯರಾಮಯ್ಯ, ನಾರಾಯಣಪ್ಪ, ನಾಗರತ್ನಮ್ಮ, ವೆಂಕಟೇಶ್‌ರೆಡ್ಡಿ, ಬಮೂಲ್ ನಿರ್ದೇಶಕ ಬಿ.ಜಿ.ಆಂಜಿನಪ್ಪ, ಪುರಸಭಾ ಸದಸ್ಯ ರವಿಚೇತನ್, ಮುಖಂಡರಾದ ಎಂ.ಯಂಗಾರೆಡ್ಡಿ, ಆರ್.ಕೆ.ರಮೇಶ್, ಜಿ.ಗೋಪಾಲ್, ಕೆ.ಸಿ.ರಾಮಚಂದ್ರ, ಎಂ.ಕೆಂಪರಾಜು, ಚಿಕ್ಕರೇವಣ್ಣ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.