ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡಬಳ್ಳಾಪುರ: ಮೇ 27ಕ್ಕೆ ‘ಹೋರಾಟದ ನಡಿಗೆ ಹಾಸನದ ಕಡೆಗೆ’

ಪ್ರಜಲ್‌ ರೇವಣ್ಣ ಬಂಧನಕ್ಕೆ ಒತ್ತಾಯ
Published 25 ಮೇ 2024, 15:38 IST
Last Updated 25 ಮೇ 2024, 15:38 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮಹಿಳೆಯರ ಲೈಂಕಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಈ ಕೂಡಲೇ ಬಂಧಿಸಬೇಕು. ಸಂತ್ರಸ್ತರಿಗೆ ಧೈರ್ಯ ತುಂಬಿ, ಅವರಿಗೆ ನೆರವು ನೀಡಬೇಕೆಂದು ಒತ್ತಾಯಿಸಿ ತಾಲ್ಲೂಕಿನ ಜನಪರ ಸಂಘಟನೆಗಳ ನೇತೃತ್ವದಲ್ಲಿ ಮೇ 30ರಂದು ‘ಹೋರಾಟದ ನಡಿಗೆ ಹಾಸನದ ಕಡೆಗೆ’ ಬೃಹತ್ ಪ್ರತಿಭಟನೆ ಹಾಗೂ ಬಹಿರಂಗ ಸಭೆ ನಡೆಯಲಿದೆ.

ಈ ಸಂಬಂಧ ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆಯಿಂದ ನಗರದ ರೈತ ಕಾರ್ಮಿಕರ ಸಂಘದ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ವೇದಿಕೆ ಸಂಚಾಲಕ ಆರ್.ಚಂದ್ರತೇಜಸ್ವಿ, ನೂರಾರು ಜನ ಕಾರ್ಯಕರ್ತರು ಅಂದು ದೊಡ್ಡಬಳ್ಳಾಪುರದಿಂದ ಹಾಸನಕ್ಕೆ ತೆರಳಿ ಅಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿ ಪ್ರಜ್ವಲ್‌ ರೇವಣ್ಣ ಹೀನ‌ ಕೃತ್ಯ ಎಸಗಿದ್ದಾರೆ. ಇಂತಹ ನೀಚ ಕೃತ್ಯದಲ್ಲಿ ಭಾಗಿಯಾಗಿರುವ ಅರಿವಿದ್ದರೂ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಲೋಕಸಭಾ ಚುನಾವಣೆಯಲ್ಲಿ ಅವರನ್ನೇ ಮತ್ತೆ ಹಾಸನ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತದಾರರ ಮೇಲೆ ಪ್ರಭಾವ ಬೀರುವ ದುರುದ್ದೇಶದಿಂದ ಲೈಂಗಿಕ ದೌರ್ಜನ್ಯದ ವಿಡಿಯೊ ಮತ್ತು ಚಿತ್ರವನ್ನು ಪೆನ್‌ಡ್ರೈವ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿರುವುದು‌ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ. ದೌರ್ಜನ್ಯಕ್ಕೊಳಗಾದ ಮಹಿಳೆಯರ ಗೌಪ್ಯತೆ ಮತ್ತು ಘನತೆಗೆ ಚ್ಯುತಿ ತಂದಿರುವುದು ಹೇಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಸನದ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಮಾಧ್ಯಮ ಮೂಲಕ ಹಲವು ತಿಂಗಳ ಹಿಂದೆಯೇ ಪೆನ್‌ಡ್ರೈವ್‌ ವಿಚಾರ ಪ್ರಸ್ತಾಪ ಮಾಡಿದ್ದರು. ಆ ತಕ್ಷಣವೇ ಅವರನ್ನು ಮತ್ತು ಪ್ರಜ್ವಲ್ ರೇವಣ್ಣ ಕಾರಿನ ಮಾಜಿ ಚಾಲಕ ಕಾರ್ತಿಕ್ ಇಬ್ಬರನ್ನು ಬಂಧಿಸಿದ್ದರೆ, ಹೆಚ್ಚಿನ ವಿಡಿಯೊ ಹಂಚಿಕೆಯಾಗದಂತೆ ತಡೆಯಬಹುದಿತ್ತು. ಇದರಲ್ಲಿ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿರುವುದರಿಂದ ಸಾಮಾಜಿಕ ತಲ್ಲಣ ಉಂಟಾಗಿದೆ ಎಂದು ಬೇಸಿರಿಸಿದರು.

ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರು ನೇರವಾಗಿ ಎಸ್‌ಐಟಿ ಮುಂದೆ ಹಾಜರಾಗಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಎಸ್‌ಐಟಿಯೇ ನೇರವಾಗಿ ಇವರನ್ನು ಸಂಪರ್ಕಿಸಿ ಅವರಲ್ಲಿ ಧೈರ್ಯ ತುಂಬಬೇಕು. ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಒದಗಿಸಿ ಅವರ ಗೌಪ್ಯತೆ ಕಾಪಾಡಿ ಹಾಗೂ ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಕೃತ್ಯದ ಬಗ್ಗೆ ಮಾಹಿತಿ ಇದ್ದರೂ ಮೌನವಹಿಸಿರುವ ಬಿಜೆಪಿಗೆ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯಕ್ಕಿಂತ ಜೆಡಿಎಸ್ ಮೈತ್ರಿಯಿಂದ ಆಗಬಹುದಾದ ರಾಜಕೀಯ ಲಾಭವಷ್ಟೇ ಮುಖ್ಯವಾಗಿದೆ. ಪ್ರಜ್ವಲ್ ರೇವಣ್ಣನನ್ನು ಬಂಧಿಸಲು ಕೇಂದ್ರ ಸರ್ಕಾರ ಅನುಸರಿಸಬೇಕಾದ ರಾಜತಾಂತ್ರಿಕ ಕ್ರಮ ಅನುಸರಿಸದೆ, ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ದೂರಿದರು.

ಸಂವಿಧಾನ ರಕ್ಷಣೆಗಾಗಿ ನಾಗರಿಕ ವೇದಿಕೆ ಸಂಚಾಲಕ ರಾಜುಸಣ್ಣಕ್ಕಿ, ಸಿಪಿಐಎಂ ತಾಲ್ಲೂಕು ಕಾರ್ಯದರ್ಶಿ ರುದ್ರಾರಾಧ್ಯ, ಕನ್ನಡ ಪಕ್ಷದ ಮುಖಂಡ ಸಂಜೀವನಾಯಕ, ಮುನಿಪಾಪಯ್ಯ, ಪಿ.ಎ.ವೆಂಕಟೇಶ್, ಮಾನವ ಬಂಧುತ್ವ ವೇದಿಕೆಯ ವೆಂಕಟೇಶ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಶಿವಶಂಕರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT