ಗುರುವಾರ , ಫೆಬ್ರವರಿ 20, 2020
27 °C

ಮೂರು ಸಾವಿರ ಕುಟುಂಬಗಳಿಗೆ ಕಸ ವಿಲೇವಾರಿ ಚೀಲ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ಕನ್ನಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮೂರು ಸಾವಿರ ಕುಟುಂಬಗಳಿಗೆ ಒಣ ಕಸ ವಿಲೇವಾರಿಗೆ ಚೀಲ ವಿತರಿಸಲಾಗುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಹೇಳಿದರು.

ಇಲ್ಲಿನ ಕನ್ನಮಂಗಲ ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜು, ಇನ್ಫೋಸಿಸ್ ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಒಣ ಕಸ ವಿಲೇವಾರಿಗೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಣ ಕಸದ ವ್ಯಾಪ್ತಿಯಲ್ಲಿ ಕಾಗದ, ರಟ್ಟು, ಪೆಟ್ಟಿಗೆ, ಡಬ್ಬ, ಪ್ಲಾಸ್ಟಿಕ್ ಶೀಟ್ ಮತ್ತು ಕವರ್, ಹಾಲು– ಎಣ್ಣೆ ಇತರ ಪ್ಲಾಸ್ಟಿಕ್ ಚೀಲ, ಬಾಟಲಿ, ಚಾಕಲೇಟ್ ಕವರ್, ಒಡೆದ ಗಾಜಿನ ವಸ್ತುಗಳು, ರಬ್ಬರ್, ಬಟ್ಟೆ ಕರ್ಟನ್ ಸೇರಿದಂತೆ ಅನೇಕ ತ್ಯಾಜ್ಯ ಕ್ರೋಢೀಕರಿಸಬೇಕಾಗುತ್ತದೆ’ ಎಂದು ಹೇಳಿದರು.

‘ಹರಿದ ಚಪ್ಪಲಿ, ಬೂಟು, ಬಲ್ಬ್ ಟ್ಯೂಬ್ ತಂತಿ ಮತ್ತು ಇತರ ವಿದ್ಯುತ್ ವ್ಯರ್ಥ ವಸ್ತುಗಳು, ಸಿ.ಡಿ, ಡಿ.ವಿ.ಡಿ, ಸ್ಯಾನಿಟರಿ ಪ್ಯಾಡ್, ಡೈಪರ್, ಸೌಂದರ್ಯ ಸಾಮಗ್ರಿಯನ್ನು ಒಣಕಸ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ. ವಾರಕ್ಕೊಮ್ಮೆ ಪಂಚಾಯಿತಿ ಕಾರ್ಮಿಕರು ಶೇಖರಿಸಿ, ವಿಂಗಡಿಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಸ್ತೆ ನಿರ್ಮಾಣಕ್ಕೆ ಪ್ಲಾಸ್ಟಿಕ್‌ ಅನ್ನು ವಿಲೇವಾರಿ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಮೊದಲ ಹಂತವಾಗಿ ಒಣ ಕಸಕ್ಕೆ ಚೀಲ ವಿತರಿಸಲಾಗುತ್ತಿದ್ದು ಎರಡನೇ ಹಂತವಾಗಿ ಒಂದು ತಿಂಗಳ ನಂತರ ಹಸಿ ಕಸ ಸಂಗ್ರಹಕ್ಕೆ 5ರಿಂದ 10 ಕೆ.ಜಿ ಡಬ್ಬ ನೀಡಲಾಗುತ್ತದೆ. ತರಕಾರಿ ತಿರುಳು, ಸಿಪ್ಪೆ, ಹಣ್ಣಿನ ತಾಜ್ಯ, ಬಾಳೆ ಎಲೆ, ವ್ಯರ್ಥ ಚಹ ಮತ್ತು ಕಾಫಿಪುಡಿ ಒಣ ಹೂವು, ಮೊಟ್ಟೆಯ ಸಿಪ್ಪೆ, ಮೂಳೆ, ಮಾಂಸ, ಕೋಳಿಪುಕ್ಕ ಮುಂತಾದವುಗಳನ್ನು ಪ್ರತ್ಯೇಕವಾಗಿ ಕ್ರೋಢೀಕರಿಸಿ ಪಂಚಾಯಿತಿ ಸಿಬ್ಬಂದಿಗೆ ನೀಡಿದರೆ ಈಗಾಗಲೇ ತ್ಯಾಜ್ಯ ದಾಸ್ತಾನು ಮಾಡಲು ಗುರುತಿಸಿರುವ ಜಾಗದಲ್ಲಿ ಡಂಪಿಂಗ್ ಮಾಡಿ ಸಾವಯುವ ಗೊಬ್ಬರವನ್ನಾಗಿ ಪರಿವರ್ತಿಸಲಾಗುವುದು’ ಎಂದು ಹೇಳಿದರು.

‘40 ಮೈಕ್ರಾನ್‌ನಂತಹ ನಿಷೇಧಿತ ವಸ್ತುಗಳನ್ನು ಬಳಸುವಂತಿಲ್ಲ. 24 ಸೂಚನೆಗಳನ್ನು ಕರಪತ್ರ ಮುದ್ರಿಸಿ ವಿತರಿಸಲಾಗುತ್ತಿದೆ. ಸ್ವಚ್ಛ ಪಂಚಾಯಿತಿಗೆ ಸ್ಥಳೀಯರು ಸಹಕಾರ ನೀಡಿ ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಎಂಜಿನಿಯರಿಂಗ್ ಕಾಲೇಜಿನ ಸಂಪನ್ಮೂಲ ವ್ಯಕ್ತಿ ಮಂಜುನಾಥ್, ಇನ್ಫೋಸಿಸ್ ಸಂಸ್ಥೆ ಸಂಯೋಜಕ ಸಾಗರ್ ಮಾತನಾಡಿ, ‘ಒಂದು ಕೆ.ಜಿ ಪೇಪರ್ ಪರಿವರ್ತನೆಯಿಂದ 32 ಲೀಟರ್ ನೀರು ಉಳಿತಾಯ ಮತ್ತು ಒಂದು ಸಾವಿರ ವ್ಯಾಟ್‌ ವಿದ್ಯುಚ್ಛಕ್ತಿ ಉಳಿತಾಯ ಮಾಡಬಹುದು. ಒಂದು ಟನ್ ಪೇಪರ್ ಪರಿವರ್ತನೆ ಮಾಡಿದರೆ 22 ಮರಗಳನ್ನು ರಕ್ಷಣೆ ಮಾಡಿದಂತೆ. ಪ್ರತಿಯೊಬ್ಬರು ಸ್ವಚ್ಛ ಪರಿಸರ ಕಾಯ್ದುಕೊಂಡಾಗ ಮಾತ್ರ ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು