ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ 67 ಕೆರೆಗಳಿಗೆ ನೀರು ಪೂರೈಕೆ

ಕೆರೆ ಅಂಗಳ ಸ್ವಚ್ಛಗೊಳಿಸಿ: ಅಧಿಕಾರಿಗಳಿಗೆ ಸಂಸದ ಡಿ.ಕೆ. ಸುರೇಶ್ ಸೂಚನೆ
Last Updated 2 ಸೆಪ್ಟೆಂಬರ್ 2021, 3:43 IST
ಅಕ್ಷರ ಗಾತ್ರ

ಆನೇಕಲ್:ತಾಲ್ಲೂಕಿನ 67 ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಯ ಮೊದಲನೇ ಹಂತದ ಕಾಮಗಾರಿಯು ಸಂಪೂರ್ಣ ಪೂರ್ಣಗೊಂಡಿದ್ದು ಶೀಘ್ರವೇ ಉದ್ಘಾಟನೆ ಮಾಡಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್‌ ತಿಳಿಸಿದರು.

ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಮತ್ತು ರಾಜಕಾಲುವೆ ಒತ್ತುವರಿ ತೆರವು ಸಂಬಂಧ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕೆರೆಗಳಿಗೆ ನೀರು ತುಂಬಿಸುವ ಸಂಬಂಧ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಪ್ರಾಯೋಗಿಕವಾಗಿ ಕೆಲವು ಕೆರೆಗಳಿಗೆ ಕೆ.ಸಿ. ವ್ಯಾಲಿಯಿಂದ ನೀರು ಹರಿಸಲಾಗುತ್ತಿದೆ ಎಂದರು.

ಎರಡನೇ ಹಂತದಲ್ಲಿ ಗುರುತಿಸಲಾಗಿರುವ 67 ಕೆರೆಗಳಿಗೂ ನೀರು ತುಂಬಿಸುವ ಕಾರ್ಯ ಮಾಡಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಕೆರೆ ಒತ್ತುವರಿ ತೆರವು, ಕೆರೆಗಳ ತ್ಯಾಜ್ಯ ನೀರು ಮತ್ತು ಕಸ ತೆರವುಗೊಳಿಸಿ ಸ್ವಚ್ಛಗೊಳಿಸುವುದು ಗುರುತಿಸಲಾಗಿರುವ ಕೆರೆಗಳ ಸುತ್ತಲೂ ಗಡಿ ಗುರುತಿಸುವುದು ಮತ್ತು ಕಟ್ಟೆಯನ್ನು ಅಭಿವೃದ್ಧಿ ಪಡಿಸುವುದು, ಕೆರೆಗಳಲ್ಲಿನ ಅನಾವಶ್ಯಕ ಗಿಡಗಂಟಿಗಳನ್ನು ತೆರವುಗೊಳಿಸುವುದು, ಅರಣ್ಯ ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಸಹಕಾರದಿಂದ ಕೆರೆಯ ಸುತ್ತಲೂ ಕಟ್ಟೆಯ ಮೇಲೆ ಗಿಡ ನೆಡುವುದು ಸೇರಿದಂತೆ ವಿವಿಧ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನರೇಗಾ ಯೋಜನೆಯಡಿ ಕೆಲಸ ಮಾಡುವುದು, ಸ್ತ್ರೀಶಕ್ತಿ ಗುಂಪುಗಳು, ಸ್ವಯಂ ಸೇವಾ ಸಂಘಗಳನ್ನು ಬಳಸಿಕೊಂಡು ಕೆರೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲಾಖೆಗಳು ಕ್ರಮ ಕೈಗೊಳ್ಳಬೇಕು. ಕೆರೆಗಳಲ್ಲಿ ಬೆಸ್ಕಾಂನ ಲೈನ್‌ಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳು ಹಲವೆಡೆ ಇವೆ. ಹಾಗಾಗಿ ಇವುಗಳನ್ನು ತೆರವುಗೊಳಿಸುವ ಸಂಬಂಧ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಮೊದಲನೇ ಹಂತದಲ್ಲಿ 17 ಕೆರೆಗಳಿಗೆ ನೀರು ಹರಿಸುವ ಸಂಬಂಧ ಕಾಮಗಾರಿ ಕಾರ್ಯ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ 19 ಕೆರೆಗಳಿಗೆ ನೀರು ಹರಿಸಲಾಗುವುದು. ಈ ಪೈಕಿ ಚಂದಾಪುರದಲ್ಲಿ ಪೈಪ್‌ಲೈನ್‌ ಹಾಕುವ ಸಂಬಂಧ ಸಮಸ್ಯೆಯಿದೆ. ಇದನ್ನು ಪರಿಹರಿಸಿ ರಾಜಕಾಲುವೆಗಳನ್ನು ತೆರವುಗೊಳಿಸಿ ಪೈಪ್‌ಲೈನ್‌ ಮತ್ತು ಗುರುತ್ವಾಕರ್ಷಣೆ ಮೂಲಕ ನೀರು ಹರಿಸಲಾಗುವುದು ಎಂದರು.

ಶಾಸಕ ಬಿ. ಶಿವಣ್ಣ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವುದು ಮಹತ್ವಕಾಂಕ್ಷೆಯ ಯೋಜನೆಯಾಗಿದೆ. ಈ ಸಂಬಂಧ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ತ್ವರಿತವಾಗಿ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡಲಾಗುವುದು. ಇದರಿಂದ ತಾಲ್ಲೂಕಿನ ಕೃಷಿ ಮತ್ತು ತೋಟಗಾರಿಕೆಗೆ ಅನುಕೂಲವಾಗುತ್ತದೆ. ಅಂತರ್ಜಲ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ಪುರಸಭಾ ಅಧ್ಯಕ್ಷ ಎನ್‌.ಎಸ್. ಪದ್ಮನಾಭ ಮಾತನಾಡಿ, ಆನೇಕಲ್‌ ದೊಡ್ಡಕೆರೆಯು ಸುಮಾರು 200 ಎಕರೆ ವಿಸ್ತೀರ್ಣ ಹೊಂದಿದೆ. ಆನೇಕಲ್‌ಗೆ ನೀರು ಪೂರೈಕೆ ಮಾಡುವ ಹಲವಾರು ಕೊಳವೆಬಾವಿಗಳು ಕೆರೆಯಲ್ಲಿವೆ. ಹಾಗಾಗಿ ದೊಡ್ಡಕೆರೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ತಹಶೀಲ್ದಾರ್‌ ಪಿ. ದಿನೇಶ್‌, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT