ಶುಕ್ರವಾರ, ಸೆಪ್ಟೆಂಬರ್ 25, 2020
28 °C
ನೆರೆ ಹೊರೆ ಯುವ ಸಂಸತ್ತು 2019 ಕಾರ್ಯಕ್ರಮ ಉದ್ಘಾಟನೆ

ಖಿನ್ನತೆಗೆ ವ್ಯಾಟ್ಸಪ್, ಫೇಸ್‌ಬುಕ್‌ಗಳ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಯುವಕರಲ್ಲಿ ಮೊಬೈಲ್ ಬಳಕೆಯ ಗೀಳು ಹೆಚ್ಚಾಗಿದ್ದು, ವ್ಯಾಟ್ಸಪ್, ಫೇಸ್‌ಬುಕ್‌ಗಳ ಅತಿಯಾದ ಬಳಕೆಯಿಂದ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದು ಆತಂಕಕಾರಿ ಸಂಗತಿ ಎಂದು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೃಷ್ಣಮೂರ್ತಿ ಹೇಳಿದರು.

ಇಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ನೆಹರು ಯುವ ಕೇಂದ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ಆಯೋಜಿಸಿದ್ದ ನೆರೆ ಹೊರೆ ಯುವ ಸಂಸತ್ತು 2019 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾರೀರಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯ ಕೂಡ ಅಷ್ಟೇ ಮುಖ್ಯ. ಆದರೆ ಇತ್ತೀಚೆಗೆ ಸುಮಾರು 15 ರಿಂದ 25 ವರ್ಷದೊಳಗಿನ ಯುವಜನರು ಹೆಚ್ಚು ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವುದು ಕಳವಳಕಾರಿ ವಿಷಯ. ಓದುವ ವಯಸ್ಸಿನಲ್ಲಿ ಪ್ರೀತಿ, ಪ್ರೇಮ, ದುಶ್ಚಟ, ಅತಿಯಾದ ಮೊಬೈಲ್ ಬಳಕೆ ಯುವಜನರನ್ನು ದಾರಿತಪ್ಪಿಸುತ್ತಿದೆ ಎಂದರು.

ಈಚೆಗಿನ ದಿನಗಳಲ್ಲಿ ಯುವ ಜನರಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿದೆ. ಯುವಜನರು ಒತ್ತಡಗಳನ್ನು ನಿಗ್ರಹಿಸಬೇಕು. ಮಾನಸಿಕ ದೌರ್ಬಲ್ಯ, ಒತ್ತಡದ ಜೀವ ಹಲವು ಸಮಸ್ಯೆಗಳು, ರೋಗಗಳಿಗೆ ಕಾರಣವಾಗುತ್ತಿವೆ. ಆದ್ದರಿಂದ ಎಲ್ಲರೂ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಬೇಕು ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಂಡಿಗಾನಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ಹಳ್ಳಿಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಮೂಲ ಸೌಕರ್ಯಗಳಾದ ಕುಡಿಯುವ ನೀರಿನ ಪೂರೈಕೆ, ಸ್ವಉದ್ಯೋಗ, ವಸತಿ, ನೈರ್ಮಲ್ಯ, ವಿದ್ಯುತ್ ಹಾಗೂ ಉದ್ಯೋಗ ಅವಕಾಶಗಳನ್ನು ಸರ್ಕಾರ ಎಲ್ಲೆಡೆ ಅರ್ಹರಿಗೆ ಸಿಗುವಂತೆ ಮಾಡಬೇಕು ಎಂದರು.

ಲಿಂಗ ಸಮಾನತೆ, ಮಹಿಳೆಯರ ಹಕ್ಕು, ಕಾನೂನು ಶಿಕ್ಷಣ, ಮಹಿಳೆಯರಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಮುಖಂಡತ್ವ ಗುಣಗಳು ಬೆಳೆಯುವಂತೆ ಅವರಿಗೆ ಇಂತಹ ಕಾರ್ಯಾಗಾರದ ಮೂಲಕ ತರಬೇತಿ ನೀಡುವುದರೊಂದಿಗೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಸಮಾನ ಅವಕಾಶವನ್ನು ದೊರಕಿಸಿಕೊಡಬೇಕು ಎಂದರು.

ನೆಹರೂ ಯುವಕೇಂದ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯಕ್ರಮ ಅಧಿಕಾರಿ ಪ್ರಕಾಶ್‌ ದಯಾಳ್ ಮಾತನಾಡಿ, ಯುವ ಸಂಘಗಳಿಗೆ ಸರ್ಕಾರದ ವಿವಿಧ ಯೋಜನೆಗಳಾದ ಆರೋಗ್ಯ ಕುಟುಂಬ ಕಲ್ಯಾಣ ಹಾಗೂ ಪೌಷ್ಟಿಕತೆ, ನೈರ್ಮಲ್ಯ ಮತ್ತು ಸ್ವಚ್ಛತೆ, ಸಾಮಾಜಿಕ ಸಂಗತಿಗಳು, ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ, ಗ್ರಾಮ ವಿಕಾಸ, ಮೇಕ್ ಇನ್ ಇಂಡಿಯಾ, ಯೋಜನೆಗಳನ್ನು ಯುವ ಸಮುದಾಯಕ್ಕೆ ಅವುಗಳನ್ನು ಪರಿಚಯಿಸುವುದೆ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು.

ಯುವ ಸಮುದಾಯದ ಕಾರ್ಯವೈಖರಿಗಳ ಪ್ರಣಾಳಿಕೆಯನ್ನು ಹಿರಿಯ ಸಾಮಾಜಿಕ ಕಾರ್ಯಕರ್ತ ವಿ.ಎನ್. ಸೂರ್ಯಪ್ರಕಾಶ್ ಬಿಡುಗಡೆ ಮಾಡಿದರು.

ಶಿಕ್ಷಕ ರಾಜು ಅವಳೇಕರ್, ಯುವಮುಖಂಡ ಅರ್.ಅಕ್ಷಯ್, ರಾಜ್ಯ ಎನ್.ವಿ.ಪಿ ಸಂಯೋಜಕ ಡಾ.ವಿ.ಪ್ರಶಾಂತ್, ಶ್ರೀಕೃಷ್ಣ ಶಿಕ್ಷಕ ತರಬೇತಿ ಸಂಸ್ಥೆ ದೇವನಹಳ್ಳಿಯ ಕೆ.ಆರ್. ಅಕ್ಷತ, ಎನ್.ಅಶ್ವಿನಿ, ಆರ್.ಸುನೀತ, ವೈ.ಎನ್. ಪ್ರೇಮ, ಸಿ.ನಿರ್ಮಲ, ಕೆ.ಶೊಭಿಕ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.