ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸಂರಕ್ಷಣೆ ಭವಿಷ್ಯಕ್ಕೆ ಅನಿವಾರ್ಯ

ವಿಶ್ವಪರಿಸರ ದಿನಾಚರಣೆ: ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದ ಡಿಸಿ
Last Updated 6 ಜೂನ್ 2020, 9:39 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಜೀವ ಸಂಕುಲಕ್ಕೆ ಅವಶ್ಯವಿರುವ ಪರಿಸರವನ್ನು ಭವಿಷ್ಯದ ಪೀಳಿಗೆಗೆ ಸಂರಕ್ಷಣೆ ಮಾಡುವುದು ಅನಿವಾರ್ಯ’ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ಇಲ್ಲಿನ ಸಾವಕನಹಳ್ಳಿ ಗೇಟ್ ಬಳಿ ಇರುವ ಜಿಲ್ಲಾ ವೃಕ್ಷ್ಯೋದ್ಯಾನದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಅರಣ್ಯ ಇಲಾಖೆ ಮತ್ತು ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ನಡೆದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ವಿಶ್ವದಲ್ಲಿ ನಡೆಯುತ್ತಿರುವ ವಿವಿಧ ರೀತಿಯ ಪ್ರಕೃತಿ ವಿಕೋಪಗಳು ಪರಿಸರ ಅಸಮತೋಲನ ಕಾರಣ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಭಿವೃದ್ಧಿಯ ನೆಪದಲ್ಲಿ ಪರಿಸರ ನಾಶವಾಗುತ್ತಿದೆ. ಪರ್ಯಾಯ ಪರಿಸರ ಸಂರಕ್ಷಣೆಗೆ ಪ್ರತಿ ಕುಟುಂಬಗಳು ಜವಾಬ್ದಾರಿ ವಹಿಸಬೇಕು’ ಎಂದು ಹೇಳಿದರು.

ಕೊವಿಡ್ ಸೋಂಕಿನ ಭೀತಿಯಿಂದ ಕಳೆದೆರಡು ತಿಂಗಳಿಂದ ಜನರು ಮನೆಯಲ್ಲೆ ಬಂಧಿಯಾಗಿದ್ದಾಗ ಬಿಸಲಿನ ತಾಪಮಾನ ಅಷ್ಟಾಗಿ ಕಂಡಿಲ್ಲ, ಪ್ರಸ್ತುತ ಮರಗಳ ನೆರಳನ್ನು ಹುಡುಕಿಕೊಂಡು ಹೋಗಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಪ್ರತಿಯೊಬ್ಬರೂ ಒಂದು ಗಿಡ ಬೆಳೆಸಿ ಪರಿಸರ ರಕ್ಷಣೆಗೆ ಮುಂದಾಗಬೇಕು’ ಎಂದು ಹೇಳಿದರು.

5 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹರೀಶ್ ಮಾತನಾಡಿ, ‘ಪರಿಸರ ಸಂರಕ್ಷಣೆಯಲ್ಲಿ ಯುವ ಸಮುದಾಯದ ಪಾತ್ರ ಅತ್ಯಂತ ಮುಖ್ಯ ಪರಿಸರ ನಾಶವಾದರೆ ಮನುಕುಲ ಸರ್ವನಾಶವಾಗಲಿದೆ. ಮಿತಿ ಮೀರುತ್ತಿರುವ ವಾಯು ಮಾಲಿನ್ಯ ತಡೆಗಟ್ಟಬೇಕಾದರೆ ವಾಹನಗಳನ್ನು ಅವಶ್ಯಕತೆಗೆ ತಕ್ಕಂತೆ ಬಳಸಬೇಕು. ಪ್ರಕೃತಿಯಲ್ಲಿನ ಪ್ರತಿಯೊಂದು ಸಂಪತ್ತು ಮನುಕುಲದ ಉಳಿವಿಗೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಒಂದೆರಡು ಸಸಿ ನೆಟ್ಟರೆ ಪರಿಸರ ದಿನಾಚರಣೆ ಆಗುವುದಿಲ್ಲ’ ಎಂದು ಹೇಳಿದರು.

ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಮರಿಯಪ್ಪ ಆಂಥೋಣಿ ಮಾತನಾಡಿ, ‘ಜಿಲ್ಲೆಯಲ್ಲಿ ಹಾಲಿ ಇರುವ ಅರಣ್ಯವನ್ನು ಹೊರತುಪಡಿಸಿ ಸರ್ಕಾರಿ ಖಾಲಿ ಜಾಗ, ಗೋಮಾಳ ಒಟ್ಟು 1,750 ಎಕರೆ ಗುರುತಿಸಲಾಗಿದೆ. ಈ ಪೈಕಿ 175 ಎಕರೆಯನ್ನು ಹಸಿರು ಕರ್ನಾಟಕ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು. 700 ಎಕರೆಯಲ್ಲಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಿ ಪ್ರಾದೇಶಿಕ ತಳಿ ಸಸಿ ನೆಡುವ ಚಿಂತನೆ ಇದೆ’ ಎಂದು ಹೇಳಿದರು.

‘ಜಿಲ್ಲೆಯ ನಾಲ್ಕು ತಾಲ್ಲೂಕು ವ್ಯಾಪ್ತಿಯಲ್ಲಿ ನಾಲ್ಕು ಅರಣ್ಯ ವಲಯಗಳಲ್ಲಿ ಈಗಾಗಲೇ 8 ಲಕ್ಷ ಸಸಿ ಬೆಳೆಸಲಾಗಿದ್ದು ಅರಣ್ಯ ಕೃಷಿ ಯೋಜನೆಯಡಿ ರೈತರು ಶೇ 25ರಷ್ಟು ಸಸಿ ಪಡೆದುಕೊಂಡಿದ್ದಾರೆ. ಬೀಜದುಂಡೆ ಬಿತ್ತನೆ, ಬೋಳು ಗುಡ್ಡದಲ್ಲಿ ಮಾಡಲಾಗುತ್ತದೆ. ಕೊರೊನಾ ಸೋಂಕಿನ ಪರಿಣಾಮ ಅನೇಕ ಜಾಗೃತಿ ಕಾರ್ಯಕ್ರಮ ಮುಂದೂಡಲಾಗಿದೆ. ಆಶಾದಾಯಕ ಮುಂಗಾರು ಇರುವುದರಿಂದ ಜೂನ್ ಅಂತಿಮವಾರದಿಂದ ಸಸಿ ನೆಡುವ ಕಾರ್ಯ ಆರಂಭಗೊಳ್ಳಲಿದೆ’ ಎಂದು ಹೇಳಿದರು.

ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಹರೀಶ್ ಪಾಟೀಲ್, 2ನೇ ಹೆಚ್ಚುವರಿ ನ್ಯಾಯಾಧೀಶ ರಾಜಶೇಖರ್, ವಕೀಲರ ಸಂಘ ಅಧ್ಯಕ್ಷ ಮಾರೇಗೌಡ, ಉಪಾಧ್ಯಕ್ಷ ಆನಂದ್, ಖಜಾಂಚಿ ವೆಂಕಟೇಶ್, ವಲಯ ಅರಣ್ಯಾಧಿಕಾರಿ ಧನಲಕ್ಷ್ಮಿ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕೋಡಿಮಂಚೇನಹಳ್ಳಿ ನಾಗೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT