ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಏಕತೆ ಬಗ್ಗೆ ಯುವಪೀಳಿಗೆ ಎಚ್ಚೆತ್ತುಕೊಳ್ಳಿ: ಸಚಿವ ಎನ್. ನಾಗರಾಜ್

ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಬೇಕಿತ್ತು
Last Updated 26 ಜನವರಿ 2019, 12:32 IST
ಅಕ್ಷರ ಗಾತ್ರ

ದೇವನಹಳ್ಳಿ: ದೇಶದ ಏಕತೆ, ಅಖಂಡತೆ ಹಾಗೂ ಸಾರ್ವಭೌಮತ್ವದ ಬಗ್ಗೆ ಯುವಪೀಳಿಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ವಸತಿ ಸಚಿವ ಎನ್. ನಾಗರಾಜ್ ಹೇಳಿದರು.

ಇಲ್ಲಿನ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ನಡೆದ ಜಿಲ್ಲಾ ಮಟ್ಟದ 70ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿ, ಸಂರಕ್ಷಣಾ ವ್ಯವಸ್ಥೆ, ಸಮರ್ಪಕ ಆಡಳಿತ, ಸಂಸ್ಕೃತಿ, ಕಲೆ, ಸಾಹಿತ್ಯ, ಕಾನೂನು ಹೀಗೆ ಅನೇಕ ವಿಷಯಗಳನ್ನು ಸಾಮಾನ್ಯ ಜನತೆಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಈ ದಿನಾಚರಣೆ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರಸ್ತುತ ನೀರಿನ ಅಭಾವವಿರುವ ಕಾರಣ ಅಂತರ್ಜಲ ಅಭಿವೃದ್ಧಿಗೆ 436 ಮಲ್ಟಿ ಆರ್ಚ್ ಚೆಕ್‌ಡ್ಯಾಮ್ ನಿರ್ಮಾಣ ಮಾಡಲು ಕ್ರಮತೆಗೆದುಕೊಳ್ಳಲಾಗಿದೆ. ನಾಲ್ಕು ತಾಲ್ಲೂಕುನ್ನು ಬರಪೀಡಿತವೆಂದು ಘೋಷಣೆ ಮಾಡಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಒಟ್ಟು 19,695 ಕಾಮಗಾರಿ ಆರಂಭಿಸಿ 14,817 ಕಾಮಗಾರಿ ಮುಗಿಸಲಾಗಿದೆ. ಈ ಕಾಮಗಾರಿಗೆ ₹13.77 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಿಲಾಗಿದೆ ಎಂದು ಹೇಳಿದರು.

ಸಣ್ಣ, ಅತಿಸಣ್ಣ, ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಕ್ಕೆ ಗ್ರಾಮ ಪಂಚಾಯಿತಿ ಮೂಲಕ ದನದ ಕೊಟ್ಟಿಗೆ ನಿರ್ಮಿಸುವ ಅಭಿಯಾನ 75 ದಿನಗಳಲ್ಲಿ 10,450 ಕೊಟ್ಟಿಗೆ ನಿರ್ಮಾಣ ಮಾಡಲಾಗಿದೆ. ಇದುರಾಜ್ಯದಲ್ಲೆ ಅತಿ ಹೆಚ್ಚು. ಜನರಿಗೆ ಶುದ್ಧ ಕುಡಯುವ ನೀರು ಒದಗಿಸಲು 1,060 ಕಾಮಗಾರಿ ಪೂರ್ಣಗೊಳಿಸಲಾಗಿದೆ. 617 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ವಸತಿ ಯೋಜನೆಯಡಿ 2018–19 ಸಾಲಿನಲ್ಲಿ ಈವರೆಗೆ 3,701 ಮನೆ ಪೂರ್ಣಗೊಳಿಸಿ ಶೇ 60.57 ರಷ್ಟು ಪ್ರಗತಿ ಸಾಧಿಸಿದೆ ಇನ್ನೆರಡು ವರ್ಷದಲ್ಲಿ ಜಿಲ್ಲೆಯಲ್ಲಿ ವಸತಿ ಯೋಜನೆಯಲ್ಲಿ ಅತಿಹೆಚ್ಚು ಅರ್ಹರನ್ನು ಆಯ್ಕೆಮಾಡಲಾಗುವುದು ಎಂದು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಪ್ರಜಾಪ್ರಭುತ್ವ ಒಕ್ಕೂಟ ವ್ಯವಸ್ಥೆ ಅಸ್ತಿತ್ವಕ್ಕೆ ಬಂದು ಏಳು ದಶಕಗಳು ಕಳೆದರು ಹಸಿವು, ಬಡತನ, ಕುಡಿಯುವ ನೀರು, ನಿರುದ್ಯೋಗ ಸಮಸ್ಯೆ ಬಗೆ ಹರಿದಿಲ್ಲ. ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ, ವಸತಿ ಇಲ್ಲದೆ ಅರ್ಹರು ತತ್ತರಿಸುತ್ತಿದ್ದಾರೆ. ನಾಗವಾರ ಮತ್ತು ಹೆಬ್ಬಾಳ ವ್ಯಾಲಿ ನೀರು ಗ್ರಾಮಾಂತರ ಜಿಲ್ಲೆಗೆ ಪೂರೈಕೆಗೆ ಮುಂದಾಗಿರುವ ಸರ್ಕಾರ ಕನಿಷ್ಟ ಮೂರು ಬಾರಿ ಸಂಸ್ಕರಿಸಿ ಪೂರೈಕೆ ಮಾಡಬೇಕಾಗಿದೆ. ವಿಮಾನ ನಿಲ್ದಾಣಕ್ಕಾಗಿ ರೈತರಿಗೆ ಸ್ವಾಧೀನ ಪಡಿಸಿಕೊಂಡ ಏಳು ಸಾವಿರ ಎಕರೆ ಭೂಮಿಗೆ ಪ್ರತಿ ಎಕರೆಗೆ ₹5 ರಿಂದ ₹6 ಲಕ್ಷ ಮಾತ್ರ ನೀಡಿದ್ದು, ಭೂಮಿ ಕೊಟ್ಟ ರೈತರು ಸೂರಿಗಾಗಿ ಪರದಾಡುತ್ತಿದ್ದಾರೆ.ಇದರ ಬಗ್ಗೆ ಸಚಿವರು, ಜಿಲ್ಲಾಧಿಕಾರಿಗಳು ಕಾಳಜಿ ವಹಿಸಿ ಹೆಚ್ಚಿನ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಕ್ಷ್ಮಿನಾರಾಯಣ, ಕೆ.ಸಿ.ಮಂಜುನಾಥ್, ಅನಂತಕುಮಾರಿ, ರಾಧಮ್ಮ ಮುನಿರಾಜು, ಜಿಲ್ಲಾಧಿಕಾರಿ ಕರೀಗೌಡ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷಣ್‌ಗೌಡ, ಉಪಾಧ್ಯಕ್ಷೆ ನಂದಿನಿ, ಪುರಸಭೆ ಅಧ್ಯಕ್ಷ ಎಂ.ಮೂರ್ತಿ, ಉಪಾಧ್ಯಕ್ಷೆ ಅಶಾರಾಣಿ, ಡಿ.ಡಿ.ಪಿ.ಐ ಕೃಷ್ಣ ಮೂರ್ತಿ, ತಹಶೀಲ್ದಾರ್ ಎಂ.ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT