ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಕಸ ಸಾಗಣೆ ಲಾರಿ ಗುದ್ದಿ ಬಾಲಕಿ ಸಾವು

ಕೆಳಸೇತುವೆಯಲ್ಲಿ ನಿಂತಿತ್ತು ನೀರು l ಮುಖ್ಯರಸ್ತೆ ದಾಟುವಾಗ ದುರ್ಘಟನೆ l ಮೂವರಿಗೆ ಗಾಯ l ಕಾರು,ಬೈಕ್ ಜಪ್ತಿ
Last Updated 21 ಮಾರ್ಚ್ 2022, 20:36 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಾಳ ಬಸ್ ನಿಲ್ದಾಣ ಎದುರಿನ ಮುಖ್ಯರಸ್ತೆಯಲ್ಲಿ ಬಿಬಿಎಂಪಿಯ ಕಸ ಸಾಗಣೆ ಲಾರಿ (ಕಾಂಪ್ಯಾಕ್ಟರ್‌) ಡಿಕ್ಕಿ ಹೊಡೆದು ಭಾನುವಾರ ಸಂಭವಿಸಿದ ಅಪಘಾತದಲ್ಲಿ ಬಾಲಕಿ ಅಕ್ಷಯಾ (14) ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

‘ಹೆಬ್ಬಾಳ ನಿವಾಸಿ ಅಕ್ಷಯಾ, ಸದಾಶಿವನಗರ ಬಳಿಯ ಶಾಲೆಯೊಂದರಲ್ಲಿ 9ನೇ ತರಗತಿಯ ವಿದ್ಯಾರ್ಥಿನಿ. ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಸೌಮ್ಯಾ, ಸಂಧ್ಯಾ ಹಾಗೂ ವಿಕಾಸ್ ಎಂಬುವರು ಗಾಯಗೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮೃತ ಅಕ್ಷಯಾ, ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕ ನರಸಿಂಹಮೂರ್ತಿ –ಗೀತಾ ದಂಪತಿಯ ಪುತ್ರಿ. ಬಾಲಕಿಯ ತಾಯಿ ನೀಡಿರುವ ದೂರು ಆಧರಿಸಿ ಆರ್.ಟಿ.ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಸ ಸಾಗಿಸುವ ವಾಹನವನ್ನು ಜಪ್ತಿ ಮಾಡಿ, ಚಾಲಕನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ’ ಎಂದೂ ತಿಳಿಸಿವೆ.

ರಸ್ತೆ ದಾಟುವಾಗ ಅವಘಡ: ‘ಶಾಲೆ ಮುಗಿದ ಬಳಿಕ ಅಕ್ಷಯಾ, ಬಸ್ಸಿನಲ್ಲಿ ಹೆಬ್ಬಾಳ ನಿಲ್ದಾಣಕ್ಕೆ ಬಂದಿದ್ದಳು. ಮನೆಗೆ ಹೋಗಲೆಂದು ಮುಖ್ಯರಸ್ತೆ ದಾಟುತ್ತಿದ್ದಳು. ರಸ್ತೆ ವಿಭಜಕ ಹತ್ತಿ ಇಳಿಯಲು ಮುಂದಾಗಿದ್ದಳು. ಅದೇ ಸಂದರ್ಭದಲ್ಲೇ ಅತೀ ವೇಗವಾಗಿ ಬಂದ ಬಿಬಿಂಎಪಿಯ ಲಾರಿ, ಅಕ್ಷಯಾಗೆ ಗುದ್ದಿತ್ತು. ನಂತರ, ಕಾರು ಹಾಗೂ ಬೈಕ್‌ಗೂ ವಾಹನವು ಡಿಕ್ಕಿ ಹೊಡೆದಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅಪಘಾತದಿಂದಾಗಿ ಅಕ್ಷಯಾ, ರಸ್ತೆಯಲ್ಲೇ ಹಾರಿ ಬಿದ್ದಿದ್ದಳು. ತೀವ್ರ ಗಾಯಗೊಂಡು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆಕೆಯ ಹಿಂದೆಯೇ ರಸ್ತೆ ದಾಟುತ್ತಿದ್ದ ಸೌಮ್ಯಾ ಹಾಗೂ ಬಾಲಕಿ ಸಂಧ್ಯಾಗೂ ಗಾಯವಾಗಿದೆ. ಸೌಮ್ಯಾ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಬೈಕ್ ಸವಾರ ವಿಕಾಸ್ ಸಹ ಆಸ್ಪತ್ರೆಯಲ್ಲಿದ್ದಾರೆ’ ಎಂದೂ
ತಿಳಿಸಿವೆ.

ಬಿಬಿಎಂಪಿ ವಿರುದ್ಧ ಆಕ್ರೋಶ: ‘ಹೆಬ್ಬಾಳ ಬಸ್ ನಿಲ್ದಾಣ ಎದುರು ಪಾದಚಾರಿಗಳು ರಸ್ತೆ ದಾಟಲು, ಕೆಳಸೇತುವೆ ನಿರ್ಮಿಸಲಾಗಿದೆ. ಭಾನುವಾರ ಮಳೆಯಿಂದಾಗಿ ಕೆಳಸೇತುವೆಯಲ್ಲಿ ನೀರು ನಿಂತಿತ್ತು. ಅದರ ತೆರವಿಗೆ ಕ್ರಮ ಕೈಗೊಂಡಿಲ್ಲ. ಇದುವೇ ಬಾಲಕಿ ಸಾವಿಗೆ ಕಾರಣ’ ಎಂದುಸ್ಥಳೀಯರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದ್ದು, ನಿತ್ಯವೂ ವಾಹನಗಳ ಓಡಾಟ ಹೆಚ್ಚಿರುತ್ತದೆ. ಪಾದಚಾರಿಗಳು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಲೆಂದು ಕೆಳಸೇತುವೆ ನಿರ್ಮಿಸಲಾಗಿದೆ. ಇಲ್ಲಿ ನೀರು ನಿಂತಿದ್ದರಿಂದ, ದಾಟಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅಕ್ಷಯಾ ಮುಖ್ಯರಸ್ತೆ ದಾಟಿ ಮನೆಗೆ ಹೋಗಲು ಮುಂದಾಗಿದ್ದಳು’ ಎಂದು ಸ್ಥಳೀಯರು ತಿಳಿಸಿದರು.

‘ನೀರು ನಿಂತು ಪಾದಚಾರಿಗಳ ಓಡಾಟಕ್ಕೆ ತೊಂದರೆಯಾದ ಬಗ್ಗೆ ಬಿಬಿಎಂಪಿ ಸಹಾಯವಾಣಿಗೆ ದೂರು ನೀಡಲಾಗಿತ್ತು. ಯಾರೊಬ್ಬರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಇದೀಗ ಅಪಘಾತವಾಗಿದೆ’ ಎಂದೂ ದೂರಿದರು.

ಪೈಲಟ್ ಆಗುವ ಕನಸು ಹೊತ್ತಿದ್ದ ಅಕ್ಷಯಾ
ತುಮಕೂರು ಜಿಲ್ಲೆಯ ಮಧುಗಿರಿಯ ನರಸಿಂಹಮೂರ್ತಿ, ಬಿಎಂಟಿಸಿಯಲ್ಲಿ ಕೆಲಸಕ್ಕೆ ಸೇರಿ ಜೀವನ ಕಟ್ಟಿಕೊಂಡಿದ್ದರು. ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜೊತೆ ಹೆಬ್ಬಾಳದಲ್ಲಿ ವಾಸವಿದ್ದರು. ದೊಡ್ಡ ಮಗಳು ಅಕ್ಷಯಾ ಅಪಘಾತದಲ್ಲಿ ಮೃತಪಟ್ಟಿರುವುದರಿಂದ ಇಡೀ ಕುಟುಂಬ ಕಂಗಾಲಾಗಿದೆ.

ಮೃತದೇಹ ಇರಿಸಿದ್ದ ಯಲಹಂಕದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ ಕುಟುಂಬಸ್ಥರು, ಅಕ್ಷಯಾಳನ್ನು ನೆನೆದು ಕಣ್ಣೀರಿಟ್ಟರು.

ಸುದ್ದಿಗಾರರ ಜೊತೆ ಮಾತನಾಡಿದ ನರಸಿಂಹಮೂರ್ತಿ, ‘ಮಗಳು ಅಕ್ಷಯಾ, ಓದಿನಲ್ಲಿ ಜಾಣೆಯಾಗಿದ್ದಳು. ಪೈಲಟ್ ಆಗುವ ಕನಸು ಹೊತ್ತಿದ್ದಳು. ಈಗ ವಿಮಾನವಿಲ್ಲದೇ ಹಾರಿ ಹೋದಳು’ ಎಂದು ಬಿಕ್ಕಿ ಬಿಕ್ಕಿ ಅತ್ತರು. ‘ನನಗೆ ಎಷ್ಟೇ ಕಷ್ಟ ಇದ್ದರೂ ಮಕ್ಕಳಿಗೆ ಹೇಳಿರಲಿಲ್ಲ. ಇಬ್ಬರೂ ಮಕ್ಕಳನ್ನು ಚೆನ್ನಾಗಿ ಓದಿಸುವ ಆಸೆ ಇತ್ತು. ಅಕ್ಷಯಾ ಸಹ ನನ್ನ ಕಷ್ಟ ಅರ್ಥ ಮಾಡಿಕೊಂಡು ಓದುತ್ತಿದ್ದಳು. ₹ 100 ಕೊಟ್ಟರೆ ವಾರಗಟ್ಟಲೇ ಜೊತೆಯಲ್ಲಿಟ್ಟುಕೊಳ್ಳುತ್ತಿದ್ದಳು. ಆಕೆಯನ್ನು ಕಳೆದುಕೊಂಡು, ಜೀವನವೇ ಬೇಡವೆನಿಸುತ್ತಿದೆ’ ಎಂದೂ ಕಣ್ಣೀರಿಟ್ಟರು.

‘ಕೆಳಸೇತುವೆಯಲ್ಲಿ ಹೆಚ್ಚು ನೀರಿರಲಿಲ್ಲ’
‘ಪ್ರಜಾವಾಣಿ’ ಜೊತೆ ಮಾತನಾಡಿದ ಮುಖ್ಯ ಆಯುಕ್ತ ಗೌರವ್ ಗುಪ್ತ, '‍ಪಾದಚಾರಿ ಕೆಳಸೇತುವೆಯಲ್ಲಿ ನೀರು ನಿಂತಿದ್ದರಿಂದ ಬಾಲಕಿ ರಸ್ತೆ ದಾಟಲು ಹೋಗಿ ಮೃತಪಟ್ಟಿದ್ದಾಳೆಂದು ಕೆಲವರು ಹೇಳುತ್ತಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದಾಗ, ಕೆಳಸೇತುವೆಯಲ್ಲಿ ಹೆಚ್ಚು ನೀರು ಇರಲಿಲ್ಲ. ಈ ಆರೋಪದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು’ ಎಂದಿದ್ದಾರೆ.

‘ಸದಾ ವಾಹನ ದಟ್ಟಣೆಯಿಂದ ಕೂಡಿರುವ ಮುಖ್ಯರಸ್ತೆ ಇದು. ಪಾದಚಾರಿಗಳು ರಸ್ತೆ ದಾಟುವುದಕ್ಕೆ ಇಲ್ಲಿ ಅವಕಾಶ ಇಲ್ಲ. ದುರ್ಘಟನೆ ನಡೆದ ಸ್ಥಳದ ಸಮೀಪದಲ್ಲೇ ಪಾದಚಾರಿಗಳ ಓಡಾಟಕ್ಕೆ ಕೆಳಸೇತುವೆ ಹಾಗೂ ಸುಸಜ್ಜಿತ ಸ್ಕೈವಾಕ್ ಇದೆ. ಆದರೂ ಬಾಲಕಿಯ ಜೀವಹಾನಿ ದುರದರಷ್ಟಕರ’ ಎಂದರು.

‘ಪಾದಚಾರಿಗಳು ರಸ್ತೆ ದಾಟಬಾರದೆಂದು ಮೂರೂವರೆ ಅಡಿ ಎತ್ತರದ ವಿಭಜಕ ಹಾಕಲಾಗಿದೆ. ಬಾಲಕಿ ಹಾಗೂ ಮತ್ತೊಬ್ಬರು, ರಸ್ತೆ ದಾಟಲು ಹೋಗಿದ್ದರು. ಒಬ್ಬರು ಪಾರಾದರು. ಬಾಲಕಿ ದಾಟಲು ಆಗಲಿಲ್ಲ’ ಎಂದೂ ಹೇಳಿದರು. ‘ಇಂತಹ ಘಟನೆ ಮರುಕಳಿಸದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ’ ಎಂದೂ ಅವರು ತಿಳಿಸಿದರು.

‘₹ 2 ಲಕ್ಷ ಪರಿಹಾರ’
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಭೈರತಿ ಸುರೇಶ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಅಪಘಾತ ಸ್ಥಳ ಹಾಗೂ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದರು.

ಕುಟುಂಬದವರಿಗೆ ಸಾಂತ್ವನ ಹೇಳಿದ ಭೈರತಿ ಸುರೇಶ್, ‘ಅಪಘಾತದ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ತನಿಖೆಗೆ ಸೂಚನೆ ನೀಡಿದ್ದಾರೆ. ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ’ ಎಂದರು. ಬಾಲಕಿಯ ತಂದೆಗೆ, ₹ 2 ಲಕ್ಷ ಪರಿಹಾರ ನೀಡಿದರು.

ಹೆಬ್ಬಾಳ ಬಸ್ ನಿಲ್ದಾಣ ಬಳಿಯ ಕೆಳಸೇತುವೆಯಲ್ಲಿ ಸೋಮವಾರ ನಿಂತಿದ್ದ ನೀರಿನಲ್ಲಿ ನಡೆದುಕೊಂಡು ಹೋಗಲು ಪಾದಚಾರಿಗಳು ಕಷ್ಟಪಟ್ಟರು – ಪ್ರಜಾವಾಣಿ ಚಿತ್ರ
ಹೆಬ್ಬಾಳ ಬಸ್ ನಿಲ್ದಾಣ ಬಳಿಯ ಕೆಳಸೇತುವೆಯಲ್ಲಿ ಸೋಮವಾರ ನಿಂತಿದ್ದ ನೀರಿನಲ್ಲಿ ನಡೆದುಕೊಂಡು ಹೋಗಲು ಪಾದಚಾರಿಗಳು ಕಷ್ಟಪಟ್ಟರು – ಪ್ರಜಾವಾಣಿ ಚಿತ್ರ

ಬಿಬಿಎಂಪಿಯನ್ನು ಮೊದಲುಸ್ವಚ್ಛಗೊಳಿಸಿ
ಬೆಂಗಳೂರು: ನಗರದ ಗೌರವ ಮತ್ತು ಪ್ರತಿಷ್ಠೆಯನ್ನು ಹಾಳು ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳನ್ನು ಬಿಬಿಎಂಪಿಯಿಂದ ಹೊರಹಾಕಿ ಮೊದಲು ಪಾಲಿಕೆಯನ್ನು ಸ್ವಚ್ಛಗೊಳಿಸಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕಸ ಸಾಗಣೆಯ ಲಾರಿ ಹರಿದು ಶಾಲಾ ಬಾಲಕಿ ಮೃತಪಟ್ಟಿರುವ ಘಟನೆ ಕುರಿತು ಸೋಮವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಬಾಳಿ, ಬದುಕಬೇಕಿದ್ದ ಬಾಲಕಿ ಹೆಬ್ಬಾಳದ ಮೇಲುಸೇತುವೆ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಬಿಬಿಎಂಪಿ ಆಡಳಿತದ ಬೇಜವಾಬ್ದಾರಿ, ನಿರ್ಲಕ್ಷ್ಯ, ಅಸಮರ್ಪಕ ಕಸ ವಿಲೇವಾರಿ, ರಸ್ತೆ ಮತ್ತು ಚರಂಡಿಗಳ ನಿರ್ವಹಣೆಯಲ್ಲಿನ ಲೋಪದಿಂದ ಜನರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ’ ಎಂದಿದ್ದಾರೆ.

ಭಾನುವಾರ ಸುರಿದ ಮಳೆಯಿಂದ ಹೆಬ್ಬಾಳ ಫ್ಲೈ ಓವರ್‌ ಬಳಿಯ ಕೆಳಸೇತುವೆಯಲ್ಲಿ ನೀರು ತುಂಬಿತ್ತು. ಹೀಗಾಗಿ ಮಕ್ಕಳು ಅಂಡರ್‌ ಪಾಸ್‌ನಲ್ಲಿ ಹೋಗದೇ ರಸ್ತೆ ದಾಟುತ್ತಿದ್ದರು. ದುರ್ಘಟನೆಗೆ ಬಿಬಿಎಂಪಿ ಆಡಳಿತವೇ ಹೊಣೆ ಎಂದು ಹೇಳಿದ್ದಾರೆ.

ಹೈಕೋರ್ಟ್ ಛೀಮಾರಿ ಹಾಕಿದ್ದರೂ, ಎಂಜಿನಿಯರ್‌ಗಳನ್ನು ಜೈಲಿಗೆ ಅಟ್ಟುವುದಾಗಿ ಎಚ್ಚರಿಕೆ ನೀಡಿದ್ದರೂ ಎಮ್ಮೆ ಚರ್ಮದ ಪಾಲಿಕೆ ಪಾಠ ಕಲಿತಿಲ್ಲ. ಬಿಬಿಎಂಪಿ ಆಟಗಳಿಗೆ ಸೀಟಿ ಹೊಡೆಯುತ್ತಾ, ಅಲ್ಲಿನ ಅದಕ್ಷ ಅಧಿಕಾರಿಗಳನ್ನು ಪೊರೆದು ಪೋಷಣೆ ಮಾಡುತ್ತಿರುವ ಸರ್ಕಾರಕ್ಕೆ ಆತ್ಮಸಾಕ್ಷಿ ಎನ್ನುವುದೇ ಇಲ್ಲವಾಗಿದೆ. ಬಿಬಿಎಂಪಿಯಿಂದಲೇ ಬೆಂಗಳೂರಿನ ಸ್ವಚ್ಚತೆ ಆರಂಭವಾಗಬೇಕು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT