ಸೋಮವಾರ, ಜೂನ್ 21, 2021
27 °C
ಸರ್ಕಾರದ ಎಚ್ಚರಿಕೆಗೆ ಬೆದರಿದ ‘ಆರ್ಥಿಕ ಸಬಲರು’

ಬಿಪಿಎಲ್‌ ಕಾರ್ಡ್‌ ಹಿಂತಿರುಗಿಸಿದ 1,054 ಮಂದಿ

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯ 1,054 ಮಂದಿ ‘ಆರ್ಥಿಕವಾಗಿ ಸಬಲರಾದವರು’ ಅನಧಿಕೃತವಾಗಿ ಪಡೆದಿದ್ದ ಬಿಪಿಎಲ್ ಪಡಿತರ ಚೀಟಿಗಳನ್ನು (ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗುವ) ಸರ್ಕಾರದ ಎಚ್ಚರಿಕೆ ಹಿನ್ನೆಲೆಯಲ್ಲಿ ಆಹಾರ ಇಲಾಖೆಗೆ ವಾಪಸ್ ಮಾಡಿದ್ದಾರೆ.

‘ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೀಡುವ ಬಿಪಿಎಲ್ ಪಡಿತರ ಚೀಟಿಯನ್ನು ಶ್ರೀಮಂತರೂ ಸುಳ್ಳು ಮಾಹಿತಿ ನೀಡಿ ಪಡೆದಿರುವುದು ಬೆಳಕಿಗೆ ಬಂದಿದೆ. ಅಂಥವರು ಕೂಡಲೇ ಚೀಟಿಗಳನ್ನು ಮರಳಿಸಬೇಕು’ ಎಂದು ಸರ್ಕಾರ ಸೂಚಿಸಿತ್ತು. ಸೆ. 6ರಿಂದ ಸೆ. 30ರವರೆಗೆ ಕಾಲಾವಕಾಶ ಕೊಡಲಾಗಿತ್ತು.

ಅನಧಿಕೃತವಾಗಿ ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದವರಲ್ಲಿ ಶಿಕ್ಷಕರು, ಪೊಲೀಸರು, ಹೆಸ್ಕಾಂ ಮೊದಲಾದ ಸರ್ಕಾರಿ ಇಲಾಖೆಗಳ ನೌಕರರೂ ಇರುವುದು ಬೆಳಕಿಗೆ ಬಂದಿದೆ! ‘ಅವರ ವಿವರ ಬಹಿರಂಗಪಡಿಸುವುದಿಲ್ಲ. ಚಿಕ್ಕೋಡಿ ಮತ್ತು ರಾಯಬಾಗ ತಾಲ್ಲೂಕುಗಳಲ್ಲಿ ಹೆಚ್ಚಿನ ಮಂದಿ ವಾಪಸ್ ಕೊಟ್ಟಿದ್ದಾರೆ’ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಬಡವರಿಗಾಗಿ ಇರುವುದು: ‘ಕೆ.ಜಿ. ಅಕ್ಕಿಗೆ ₹ 35ರಂತೆ ಸರ್ಕಾರವು ಹಣ ಪಾವತಿಸಿ ದುರ್ಬಲ ಕುಟುಂಬಗಳಿಗೆ ಉಚಿತವಾಗಿ ನೀಡುತ್ತಿದೆ. ಈ ಯೋಜನೆಯ ಲಾಭವನ್ನು ಆರ್ಥಿಕವಾಗಿ ಸದೃಢವಾಗಿರುವ ಕೆಲವು ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆಯುತ್ತಿರುವುದು ಕಂಡುಬಂದಿದೆ. ಬಡವರಿಗೆಂದು ಇರುವ ಸೌಲಭ್ಯವನ್ನು ಉಳ್ಳವರೂ ಮೋಸದ ಹಾದಿಯಲ್ಲಿ ಗಳಿಸಿಕೊಳ್ಳುವುದು ಸರಿಯಲ್ಲ. ಹೀಗಾಗಿ, ಕಠಿಣ ಕ್ರಮ ವಹಿಸಲಾಗುತ್ತಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕಿ ಸೈಯಿದಾ ಅಫ್ರಿನ್ ಬಾನು ಬಳ್ಳಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘1,054 ಮಂದಿ ತಾವಾಗಿಯೇ ಬಂದು ಕಾರ್ಡ್‌ ವಾಪಸ್ ಮಾಡಿದ್ದಾರೆ. ಇದಕ್ಕಿಂತಲೂ ಹೆಚ್ಚಿನ ಪ್ರಕರಣಗಳಿರುವ ಮಾಹಿತಿ ಇದೆ. ಪತ್ತೆ ಕಾರ್ಯಾಚರಣೆ ಆರಂಭವಾಗಿದೆ. ಸುಳ್ಳು ಮಾಹಿತಿ ಕೊಟ್ಟು ಬಿ.ಪಿ.ಎಲ್. ಪಡಿತರ ಚೀಟಿ ಗಳಿಸಿದವರು ವಾಪಸ್ ಮಾಡಲು ಅವಧಿ ವಿಸ್ತರಿಸುವ ಬಗ್ಗೆ ಸರ್ಕಾರದಿಂದ ಆದೇಶ ಬಂದಿಲ್ಲ. ಸ್ವಯಂಪ್ರೇರಿತವಾಗಿ ಬಂದು ಮರಳಿಸಿದರೆ ನಿಗದಿತ ದಂಡನವ್ನಷ್ಟೇ ವಿಧಿಸುತ್ತೇವೆ. ನಾವಾಗಿಯೇ ಪತ್ತೆ ಹಚ್ಚಿದಲ್ಲಿ, ದಂಡ ವಿಧಿಸುವ ಜೊತೆಗೆ ಪ್ರಕರಣವನ್ನೂ ದಾಖಲಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಎಪಿಎಲ್‌ಗೆ ಬದಲಾಯಿಸಿದ್ದೇವೆ: ‘ನಾವು ಪತ್ತೆ ಮಾಡುವ ಅನರ್ಹರು, ಯಾವಾಗಿನಿಂದ ಎಷ್ಟು ಅಕ್ಕಿಯನ್ನು ಪಡೆದಿದ್ದಾರೆ ಎಂಬುದನ್ನು ಲೆಕ್ಕ ಹಾಕಿ, ಪ್ರಸಕ್ತ ಮಾರುಕಟ್ಟೆ ದರದಂತೆ ದಂಡ ವಿಧಿಸಲಾಗುತ್ತದೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸಲೂ ಅವಕಾಶವಿದೆ’ ಎಂದು ಸ್ಪಷ್ಟಪಡಿಸಿದರು.

‘ಬಿಪಿಎಲ್‌ ಕಾರ್ಡ್‌ ಮರಳಿಸಿದವರನ್ನು ಎಪಿಎಲ್‌ ಚೀಟಿಗೆ ಪರಿಗಣಿಸಲಾಗಿದೆ. ಅವರಿಗೆ ತಿಂಗಳಿಗೆ 10 ಕೆ.ಜಿ. ಅಕ್ಕಿ (ಕೆ.ಜಿಗೆ. ತಲಾ ₹ 15ರಂತೆ) ನೀಡಲಾಗುವುದು. ಆದರೆ, ಅವರು ಮುಂಚಿತವಾಗಿ ಆಸಕ್ತಿ ವ್ಯಕ್ತಪಡಿಸಬೇಕು’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು