ಭಾನುವಾರ, ಫೆಬ್ರವರಿ 28, 2021
31 °C

2 ತಿಂಗಳಾದರೂ ದೊರೆಯದ ಅನುದಾನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಟ್ಟಣದ ಡಾ.ಕಲ್ಯಾಣಜಿ ಕಮತೆ ಬಡ ಮಕ್ಕಳಿಗೆ ಶಾಲಾ ಸಾಮಗ್ರಿ ವಿತರಿಸಿದರು

ಬೆಳಗಾವಿ: ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆ ನೀಡಿದ್ದರೂ, ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆ ಆಗದಿರುವುದಕ್ಕೆ ಮೇಯರ್‌ ಬಸಪ್ಪ ಚಿಕ್ಕಲದಿನ್ನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಂಗಳವಾರ ಕೌನ್ಸಿಲ್‌ ಸಭೆ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ದೀಪಕ ಜಮಖಂಡಿ, ‘ರಾಜ್ಯ ಸರ್ಕಾರ ನೀಡಿದ ₹ 100 ಕೋಟಿ ವಿಶೇಷ ಅನುದಾನದಲ್ಲಿ ವಾರ್ಡ್‌ಗೆ ತಲಾ ₹ 21 ಲಕ್ಷ ಅನುದಾನ ಹಂಚಿಕೆ ಮಾಡುವ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ, 2 ತಿಂಗಳಾದರೂ ಕ್ರಿಯಾಯೋಜನೆಗೆ ಅನುಮೋದನೆ ಸಿಕ್ಕಿಲ್ಲ. ಚುನಾವಣೆಯ ಮಾದರಿ ನೀತಿಸಂಹಿತೆ ನೆಪ ಒಡ್ಡಿ ವಿಳಂಬ ಮಾಡಲಾಗುತ್ತಿದೆ. ಇದರು ಸರಿಯಲ್ಲ’ ಎಂದರು.

‘ಅನುಮೋದನೆಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಹೋಗಿದೆ. ಇಂದಲ್ಲಾ, ನಾಳೆ ಬರಲಿದೆ’ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.

‘ಒಂದು ಸಹಿ ಹಾಕಿಸಿಕೊಂಡು ಬರುವುದಕ್ಕೆ ಇಷ್ಟು ದಿನ ಬೇಕೇ, ಎಲ್ಲ 58 ಸದಸ್ಯರೂ ಅಲ್ಲಿಗೆ ಹೋಗಿ ಧರಣಿ ಕುಳಿತುಕೊಳ್ಳಬೇಕೇ? 2–3 ತಿಂಗಳಲ್ಲಿ ನಾವೆಲ್ಲರೂ ಮನೆಗೆ ಹೋಗುತ್ತೇವೆ. ಅಷ್ಟರಲ್ಲಿ ಜನರ ಕೆಲಸ ಮಾಡಿಕೊಡಬೇಕಾಗಿದೆ. ಈ ರೀತಿಯ ನಿರ್ಲಕ್ಷ್ಯ ಸಲ್ಲದು. ಇಂದೇ ಅನುಮೋದನೆಯಾಗಿ ಅನುದಾನ ಹಂಚಿಕೆಯಾಗಬೇಕು’ ಎಂದು ಸೂಚಿಸಿದರು.

‘ಸದಸ್ಯರ ಮೇಲೆ ಹಲ್ಲೆ ನಡೆಸಿ ಕಪ‍್ಪುಪಟ್ಟಿಗೆ ಸೇರಿಸಲಾಗಿರುವ ಡಿ.ಎಲ್. ಕುಲಕರ್ಣಿ ಎನ್ನುವ ಗುತ್ತಿಗೆದಾರರಿಗೆ ಬಾಕಿ ನೀಡಲಾಗಿದೆ. ನೀತಿಸಂಹಿತೆ ನಡುವೆಯೂ ಇದಕ್ಕೆ ಹೇಗೆ ಅನುಮತಿ ದೊರೆಯಿತು?’ ಎಂದು ಸದಸ್ಯರು ಕೇಳಿದರು.

‘ನನ್ನ ವಾರ್ಡ್‌ಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದ ಜನಪ್ರತಿನಿಧಿಯಾಗಿದ್ದೂ ಪ್ರಯೋಜನ ಇಲ್ಲದಂತಾಗಿದೆ’ ಎಂದು ಶಾಂತಾ ಉಪ್ಪಾರ ತಿಳಿಸಿದರು.

ಬಡ ಮಕ್ಕಳಿಗೆ ಶಾಲಾ ಸಾಮಗ್ರಿ ವಿತರಣೆ

ಚಿಕ್ಕೋಡಿ: ತಾಲ್ಲೂಕಿನ ಸದಲಗಾ ಪಟ್ಟಣದ ಸದಲಗಾ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ, ತಂದೆಯನ್ನು ಕಳೆದುಕೊಂಡ ಬಡ ವಿದ್ಯಾರ್ಥಿಗಳಿಗೆ ಕನ್ನಡಪರ ಹೋರಾಟಗಾರ ಡಾ.ಕಲ್ಯಾಣಜಿ ಕಮತೆ ಶಾಲಾ ಸಾಮಗ್ರಿ ವಿತರಿಸಿದರು.

ಓಂಕಾರ ಘೋಬಡೆಗೆ ಎಂಬ ವಿದ್ಯಾರ್ಥಿ ಶಾಲಾ ಸಾಮಗ್ರಿ ಮತ್ತು ಪ್ರವೇಶ ಶುಲ್ಕ, ಮಯೂರಿ ಭಾವಕೆ, ಪ್ರಜ್ವಲ ಮೇತ್ರೆ, ಪ್ರಜ್ವಲ ಕೋರೆ, ನಿಖಿಲ ಕೋಳಿ ಶಾಲಾ ಸಾಮಗ್ರಿ ಪಡೆದರು.

‘ಬಡ ಮಕ್ಕಳ ವಿದ್ಯಾರ್ಜನೆಗೆ ಯಾವುದೇ ಅಡಚಣೆಯಾಗದೇ ಉನ್ನತ ಶಿಕ್ಷಣಕ್ಕೆ ಪೂರಕವಾಲಿ ಎಂದು ಪ್ರತಿ ವರ್ಷ ಶಾಲಾ ಸಾಮಗ್ರಿ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದು ವಿದ್ಯಾರ್ಥಿಗಳು ಗುರಿಯತ್ತ ಗಮನವಿಡಬೇಕು’ ಎಂದು ಡಾ.ಕಲ್ಯಾಣಜಿ ಕಮತೆ ಹೇಳಿದರು.

ಮುಖ್ಯ ಶಿಕ್ಷಕ ಲಂಗೋಟೆ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು