ಭಾನುವಾರ, ಅಕ್ಟೋಬರ್ 25, 2020
28 °C

ಬೆಳಗಾವಿ: ಮೂವರು ಆರೋಪಿಗಳ ಬಂಧನ, 20 ಕೆ.ಜಿ. ಗಾಂಜಾ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲಾ ಸಿಇಎನ್‌ (ಅಪರಾಧ) ಠಾಣೆಯ ಪೊಲೀಸರು ಶುಕ್ರವಾರ ಕಾರ್ಯಾಚರಣೆ ನಡೆಸಿ ಮಹಾರಾಷ್ಟ್ರದ ಮೂವರು ಆರೋಪಿಗಳನ್ನು ಬಂಧಿಸಿ, ₹ 4 ಲಕ್ಷ ಮೌಲ್ಯದ 20 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರದ ಜತ್ತ ತಾಲ್ಲೂಕು ಬಿಳ್ಳೂರದ ರಾವಸಾಹೇಬ ಅಣ್ಣಪ್ಪ ನಂದಿವಾಲೆ, ಮೊಹೊಳ ತಾಲ್ಲೂಕು ಶೇಟಪಾಳದ ಸಂಗೀತಾ ದತ್ತಾತ್ರೇಯ ವಾಗಜ ಮತ್ತು ಫಂಡರಪುರ ತಾಲ್ಲೂಕು ಅಡಿವದ ವಿಲಾಸ ಪಾಂಡುರಂಗ ಘಾಡಗೆ ಬಂಧಿತರು.

‘ರಾವಸಾಹೇಬ, ಫಂಡರಪುರದ ಕಡೆಯಿಂದ ಅಥಣಿ ಕಡೆ ಗಾಂಜಾ ಮಾರಲು ಜತ್ತ ಮೂಲಕ ಅನಂತಪುರದತ್ತ ಹೋಗುತ್ತಿರುವ ಬಗ್ಗೆ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ರಾವಸಾಹೇಬ ಬಳಿ ಇದ್ದ 2 ಕೆ.ಜಿ. ಗಾಂಜಾ, ದ್ವಿಚಕ್ರವಾಹನ ಮತ್ತು ಮೊಬೈಲ್‌ ಫೋನ್ ವಶಕ್ಕೆ ಪಡೆಯಲಾಗಿತ್ತು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಸಂಗೀತಾ ಹಾಗೂ ವಿಲಾಸ ಗಾಂಜಾ ಮಾರಲು ಕೊಟ್ಟು ಕಳುಹಿಸಿದ್ದಾಗಿ ತಿಳಿದುಬಂದಿತು. ಹೀಗಾಗಿ, ಪೊಲೀಸರು ಫಂಡರಪುರಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

‘ಅವರ ಬಳಿ ಇದ್ದ 18 ಕೆ.ಜಿ. 200 ಗ್ರಾಂ. ಗಾಂಜಾ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಕಾರು, ದ್ವಿಚಕ್ರವಾಹನ ಮತ್ತು ತೂಕದ ಯಂತ್ರ ಜಪ್ತಿ ಮಾಡಲಾಗಿದೆ. ಇನ್‌ಸ್ಪೆಕ್ಟರ್‌ ವೀರೇಶ ತಿ. ದೊಡಮನಿ, ಎಎಸ್‌ಐ ಅಶೋಕ ಎಚ್. ಭಜಂತ್ರಿ ಹಾಗೂ ಸಿಬ್ಬಂದಿ ಬಿ.ಎಸ್. ಚಿನ್ನಿಕುಪ್ಪಿ, ವೈ.ವಿ. ಸಪ್ತಸಾಗರ, ಎಸ್.ಎ.  ಬೆವನೂರ, ಎನ್.ಎಲ್. ಗುಡೆನ್ನವರ, ಎಂ.ಬಿ. ಕಾಂಬಳೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು