ಬುಧವಾರ, ಅಕ್ಟೋಬರ್ 21, 2020
25 °C
ಆರ್‌ಸಿಯು 8ನೇ ಘಟಿಕೋತ್ಸವ ಇಂದು

33,974 ವಿದ್ಯಾರ್ಥಿಗಳಿಗೆ ಪದವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್‌ಸಿಯು) 8ನೇ ಘಟಿಕೋತ್ಸವ ಅ. 5ರಂದು ಬೆಳಿಗ್ಗೆ 11.30ಕ್ಕೆ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ತಿಳಿಸಿದರು.

‘ರಾಜ್ಯಪಾಲ ವಿ.ಆರ್. ವಾಲಾ ಅಧ್ಯಕ್ಷತೆ ವಹಿಸುವರು. ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅತಿಥಿಯಾಗಿ ಭಾಗವಹಿಸುವರು. ಬೆಂಗಳೂರಿನ ನ್ಯಾಕ್ ನಿರ್ದೇಶಕ ಪ್ರೊ.ಎಸ್.ಸಿ. ಶರ್ಮಾ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪಾರ್ವತಿಗೆ 3 ಸ್ವರ್ಣ ಪದಕ:

‘ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗದ ಒಟ್ಟು 33,974 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. 14,371 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 3,744 ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸ್ನಾತಕ ವಿಭಾಗದಲ್ಲಿ 11 ಚಿನ್ನದ ಪದಕ, ಸ್ನಾತಕೋತ್ತರ ತರಗತಿಗಳಿಗೆ 22 ಚಿನ್ನದ ಪದಕಗಳನ್ನು ಮತ್ತು 79 ಪಿ.ಎಚ್‌.ಡಿ. ಪದವಿಗಳನ್ನು ಪ್ರದಾನ ಮಾಡಲಾಗುವುದು. 4 ವಿಷಯಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದವರಿಗೆ ಪ್ರಾಯೋಜಿತ ಚಿನ್ನದ ಪದಕಗಳನ್ನು ನೀಡಲಾಗುವುದು. ಬಾಗಲಕೋಟೆಯ ಬಸವೇಶ್ವರ ಕಲಾ ಕಾಲೇಜಿನ ಪಾರ್ವತಿ ಪಾಟೀಲ ಎಂ.ಎ. ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿ 3 ಸ್ವರ್ಣ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಸ್ನಾತಕ ಪದವಿ ಪಡೆದ 31,262 ವಿದ್ಯಾರ್ಥಿಗಲ್ಲಿ 77 ಮಂದಿ ರ‍್ಯಾಂಕ್‌ ಗಳಿಸಿದ್ದು, 11 ಮಂದಿಗೆ ಘಟಿಕೋತ್ಸವದಲ್ಲಿ ಪ್ರಮಾಣಪತ್ರ ಪ್ರದಾನ ಮಾಡಲಾಗುವುದು. ಸ್ನಾತಕೋತ್ತರ ಪದವಿ ಗಳಿಸಿದ 2,712 ವಿದ್ಯಾರ್ಥಿಗಳಲ್ಲಿ ‌68 ವಿದ್ಯಾರ್ಥಿಗಳು ರ‍್ಯಾಂಕ್‌ ಪಡೆದಿದ್ದಾರೆ. ಇವರಲ್ಲಿ 22 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪ್ರಮಾಣಪತ್ರ ವಿತರಿಸಲಾಗುವುದು’ ಎಂದು ವಿವರಿಸಿದರು.

100 ಮಂದಿಗೆ ಮಾತ್ರ ಅವಕಾಶ:

‘ಕೋವಿಡ್-19 ಕಾರಣದಿಂದ ಸಭಾಂಗಣದಲ್ಲಿ 100 ಮಂದಿಗೆ ಮಾತ್ರ ಅವಕಾಶ ಇದೆ. ಹೀಗಾಗಿ, ಪಿಎಚ್‌ಡಿ ಪದವಿ ಪಡೆದವರಲ್ಲಿ ಕೆಲವರಿಗೆ ಮಾತ್ರ ಸಾಂಕೇತಿಕವಾಗಿ ಪ್ರಮಾಣಪತ್ರ ಪ್ರದಾನ ಮಾಡಿ, ಉಳಿದವರಿಗೆ ವಿಶ್ವವಿದ್ಯಾಲಯಲ್ಲಿ ಕಾರ್ಯಕ್ರಮ ಆಯೋಜಿಸಿ ನೀಡಲಾಗುವುದು. ನೇರವಾಗಿ ಪಾಲ್ಗೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳು, ಪಾಲಕರು ಯೂಟ್ಯೂಬ್ ಅಥವಾ ಫೇಸ್‌ಬುಕ್‌ ಪೇಜ್‌ನಲ್ಲಿ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಬಹುದು’ ಎಂದು ತಿಳಿಸಿದರು.

ಕುಲಸಚಿವರಾದ ಪ್ರೊ.ಬಸವರಾಜ ಪದ್ಮಶಾಲಿ, ಪ್ರೊ.ಎಸ್.ಎಂ. ಹುರಕಡ್ಲಿ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ ಇದ್ದರು.

***

‘₹ 300 ಕೋಟಿ ಕೇಳಿದ್ದೇವೆ’

‘ಸರ್ಕಾರವು ತಾಲ್ಲೂಕಿನ ಹಿರೇಬಾಗೇವಾಡಿ ಬಳಿ 127 ಎಕರೆ 26 ಗುಂಟೆ ಜಮೀನು ನೀಡಿದೆ. ಹಾಲಿ ಇರುವ ಭೂತರಾಮನಹಟ್ಟಿ ಹಾಗೂ ಹೊಸ ಜಾಗ ಎರಡರಲ್ಲೂ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಲಿದೆ. ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಕ್ಕಾಗಿ ₹ 300 ಕೋಟಿ ಅನುದಾನ ಕೇಳಿದ್ದೇವೆ’ ಎಂದು ಕುಲಪತಿ ತಿಳಿಸಿದರು.

‘ಈ ಹಿಂದೆ ವಿಟಿಯು ಸಭಾಂಗಣದಲ್ಲಿ ಘಟಿಕೋತ್ಸವ ನಡೆಸಲಾಗುತ್ತಿತ್ತು. ಇದಕ್ಕೆಂದೇ ಹೋದ ವರ್ಷ ₹ 3 ಲಕ್ಷ ಬಿಲ್ ಆಗಿತ್ತು. ಈ ಬಾರಿ ಸುವರ್ಣ ವಿಧಾನಸೌಧ ಸಭಾಂಗಣ ಉಚಿತವಾಗಿ ದೊರೆತಿದೆ’ ಎಂದರು.

***

 

ಗೌರವ ಡಾಕ್ಟರೇಟ್‌ಗೆ 43 ಅರ್ಜಿಗಳು ಬಂದಿದ್ದವು. ರಾಜ್ಯಪಾಲರು ಮೂವರನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ನಮ್ಮದೇನೂ ಪಾತ್ರವಿಲ್ಲ
ಪ್ರೊ.ಎಂ. ರಾಮಚಂದ್ರಗೌಡ
ಕುಲಪತಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.