ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: 4 ತಿಂಗಳಲ್ಲಿ 66 ಬಾಲ್ಯವಿವಾಹಕ್ಕೆ ತಡೆ

ಲಾಕ್‌ಡೌನ್‌ ಅವಧಿಯಲ್ಲಿ 5 ಪ್ರಕರಣ ದಾಖಲು
Last Updated 24 ಆಗಸ್ಟ್ 2020, 8:25 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಅಂದರೆ ಮಾರ್ಚ್‌ನಿಂದ ಜೂನ್‌ವರೆಗೆ ಅಂತಹ 66 ಬಾಲ್ಯವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಡೆದಿದ್ದಾರೆ. ಅವರ ಕಣ್ತಪ್ಪಿಸಿ 5 ಮದುವೆಗಳು ನಡೆದು ಹೋಗಿವೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಲಹೊಂಗಲ, ರಾಯಬಾಗ, ಸವದತ್ತಿ, ಖಾನಾಪುರ ತಾಲ್ಲೂಕುಗಳಲ್ಲಿ ಹೆಚ್ಚಿನ ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಇವರಲ್ಲಿ ಬಹುತೇಕರು ಸರಾಸರಿ 15ರಿಂದ 17 ವರ್ಷದವರು. ಈ ಮೂಲಕ ಈಗಲೂ ಕದ್ದು–ಮುಚ್ಚಿ ಬಾಲ್ಯವಿವಾಹಗಳನ್ನು ನೆರವೇರಿಸಲು ಯತ್ನಗಳು ನಡೆದಿರುವುದು ಕಂಡುಬಂದಿದೆ.

2019ರ ಮಾರ್ಚ್‌–ಜೂನ್‌ವರೆಗೆ 90 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಆ ಸಮಯದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಅಂದರೆ ಬಾಲ್ಯವಿವಾಹಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಡತನ, ಅನಕ್ಷರತೆ, ಜಾಗೃತಿ ಕೊರತೆ, ಮೂಢನಂಬಿಕೆ, ಮುಂದೇನಾದೀತೋ ಎನ್ನುವ ಪೋಷಕರ ಆತಂಕ, ಕುಟುಂಬದ ಆಸ್ತಿ ಬೇರೆಯವರ ಪಾಲಾಗದಿರಲೆಂದು, ಜವಾಬ್ದಾರಿಯಿಂದ ದೂರಾಗಲು, ವಯಸ್ಸಾದವರು ಮತ್ತು ಅನಾರೋಗ್ಯಕ್ಕೆ ಒಳಗಾದವರ ಬಯಕೆ ಈಡೇರಿಸಲು ಮೊದಲಾದ ಕಾರಣಗಳಿಂದ ಬಾಲ್ಯವಿವಾಹಗಳು ನಡೆಯುತ್ತಿರುವುದನ್ನು ಗುರುತಿಸಲಾಗಿದೆ.

‘ಲಾಕ್‌ಡೌನ್‌ ಸಂದರ್ಭ ಬಳಸಿಕೊಂಡು ಬಾಲ್ಯವಿವಾಹ ಮಾಡಬಹುದು ಎಂದು ಹೆಚ್ಚಿನ ನಿಗಾ ವಹಿಸಿದ್ದೆವು. ಆದ್ದರಿಂದ ಹೆಚ್ಚಿನ ಪ್ರಕರಣಗಳನ್ನು ತಡೆದಿದ್ದೇವೆ. ಕಣ್ತಪ್ಪಿಸಿ ನಡೆದ 5 ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಬಾಲಕಿಯರನ್ನು ರಕ್ಷಿಸಿದ್ದೇವೆ. ಅವರು ಪೋಷಕರ ಜೊತೆಯಲ್ಲಿ ಇರುವುದಕ್ಕೆ ಒಪ್ಪದಿದ್ದಲ್ಲಿ ಬಾಲಕಿಯರ ಬಾಲಮಂದಿರದಲ್ಲಿ ಇರಿಸಿ ಅವರನ್ನು ಪೋಷಿಸಲಾಗುತ್ತದೆ. 18 ವರ್ಷ ತುಂಬಿದ ಬಳಿಕ ಪೋಷಕರ ಬಳಿಗೆ ಕಳುಹಿಸುತ್ತೇವೆ. ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಬಹಳಷ್ಟು ನಿಗಾ ಇಡಲಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರವೀಂದ್ರ ಎಸ್. ರತ್ನಾಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಲಮಂದಿರಗಳಿಗೆ ಹೊಸದಾಗಿ ದಾಖಲಾದ ಮಕ್ಕಳನ್ನು ಕೋವಿಡ್ ಕಾರಣದಿಂದಾಗಿ ಕ್ವಾರಂಟೈನ್‌ನಲ್ಲಿ ಸುರಕ್ಷಿತವಾಗಿಡಲು ವ್ಯವಸ್ಥೆ ಮಾಡಲಾಗಿದೆ. ಬಾಲಕಿಯರಿಗಾಗಿ ಮಹಾಂತೇಶ ನಗರದ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಸೃಷ್ಟಿ ಮಕ್ಕಳ ತೆರೆದ ತಂಗುದಾಣ, ಬಾಲಕರಿಗಾಗಿ ಬಾಲಕರ ಬಾಲಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಆರೋಗ್ಯದತ್ತ ಕಾಳಜಿ ವಹಿಸಲಾಗುತ್ತಿದೆ. ಅಲ್ಲಿ ಅವರಿಗೆ ಕೋವಿಡ್ ಸೋಂಕು ತಗುಲದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT